top of page

ಮನೋರೋಗ - ಅಪಸ್ಮಾರ (Epilepsy)

Updated: Aug 25, 2021


ಜನನಿಬಿಡ ರಸ್ತೆಯಲ್ಲಿ ಹೋಗುವವನೊಬ್ಬ ಕೈಯಲ್ಲಿರುವ ವಸ್ತುಗಳನ್ನು ಚೆಲ್ಲಿ ಚೀರುತ್ತಾ, ಕೈಕಾಲುಗಳನ್ನೆಳೆದುಕೊಳ್ಳುತ್ತ ಇದ್ದಕ್ಕಿದ್ದಂತೆ ನೆಲಕ್ಕೆ ಬಿದ್ದುಬಿಡುತ್ತಾನೆ. ಅವನ ಬಾಯಲ್ಲಿ ಬುರುಗು ಬರಲಾರಂಭಿಸುತ್ತದೆ, ಕಣ್ಣುಗುಡ್ಡೆಗಳು ಗಿರಗಿರನೆ ತಿರುಗಲಾರಂಭಿಸುತ್ತವೆ, ಇಲ್ಲವೆ ನೆಟ್ಟ ದೃಷ್ಟಿಯನ್ನು ಹೊಂದಿರುತ್ತವೆ, ರೋಗಿಗೆ ಪ್ರಜ್ಞಾಶೂನ್ಯತೆಯು ಆವರಿಸಿರುತ್ತದೆ. ಹೀಗಾದಾಗ ರೋಗಿಯ ಸುತ್ತುವರಿದು ಅನೇಕ ಜನರು ತಮಗೆ ತಿಳಿದ ಉಪಚಾರಗಳನ್ನು ಮಾಡಲಾರಂಭಿಸುತ್ತಾರೆ. ರೋಗಿಗೆ ಉಪಚಾರ ಚಿಕಿತ್ಸೆಗಳು ದೊರಕಲಿ, ದೊರಕದಿರಲಿ ಅವನು ಕೆಲ ನಿಮಿಷಗಳಲ್ಲಿ ತನ್ನಷ್ಟಕ್ಕೆ ತಾನೇ ಚೇತರಿಸಿಕೊಂಡು ಹೊರಟು ಹೋಗುತ್ತಾನೆ. ಇಂತಹ ದೃಶ್ಯಗಳನ್ನು ನಾವು ಮೇಲಿಂದ ಮೇಲೆ, ಮನೆ, ಶಾಲೆ, ರಸ್ತೆಗಳಲೆಲ್ಲ ಕಾಣುತ್ತಿರುತ್ತೇವೆ. ಈ ವಿಕಾರಕ್ಕೆ ಅಪಸ್ಮಾರ (Epilepsy) ಎಂದು ಹೆಸರು. ಇದಕ್ಕೆ ರೂಢಿಯಲ್ಲಿ ಫಿಟ್ಸ್, ಮೂರ್ಛಾ ರೋಗವೆಂತಲೂ ಕರೆಯುವರು.


ಕೆಲವೇಳೆ ಈ ರೋಗವು ಬೇರೆ ಸ್ವರೂಪದಲ್ಲಿಯೂ ಕಾಣಬಹುದು. ಒಬ್ಬ ವ್ಯಕ್ತಿಯ ಕೈಯೊಂದೇ ಕಂಪಿಸಬಹುದು. ಮುಖ ಕಣ್ಣುಗಳು ಮಾತ್ರ ಪೀಡೆಗೊಳಗಾಗಬಹುದು. ಹೋಗು ಹೋಗುತ್ತಾ ಕಣ್ಣಿಗೆ ಕತ್ತಲು ಕವಿದಂತಾಗಿ ಬಿದ್ದುಬಿಡಬಹುದು. ನಿದ್ರೆಯಲಿ ಚಿಟ್ಟನೇ ಚೀರಿ ಗಾಬರಿ ಪಡಬಹುದು. ಚಿಕ್ಕಮಕ್ಕಳಿಗೆ ಅತಿಸುಡುವ ನೀರಿನಿಂದ ತಲೆಮೇಲೆ ಸ್ನಾನಮಾಡಿಸಿದರೂ ಈ ವಿಕಾರ (Hot water Epilepsy) ಕಂಡುಬರುವುದು.


"ಸ್ಮೃತಿಂ ಭೂತಾರ್ಥ ವಿಜ್ಞಾನಮಪಶ್ಚ ಪರಿವರ್ಜನೆ |

ಅಪಸ್ಮಾರ ಇತಿ ಪ್ರೋಕ್ತಸ್ತತೋಯು ವ್ಯಾಧಿರಂ ತ ಕೃತ್ || "

(ಸು.ವಿ.ಅ.61)

"ಅಪಸ್ಮಾರಂ ಪುನಃ ಸ್ಮೃತಿ ಬುದ್ಧಿ ಸತ್ವ ಸಂಪ್ಲಾವಾದ್ |

ಭೀಭತ್ಸ ಚೇಷ್ಟ ಮಾವಸ್ಥಿಕಂ ತಮಃ ಪ್ರವೇಶಮಾಚಕ್ಷತೇ ||"

(ಚ.ನಿ.ಅ.8)


ಅತೀತವಾದ ವಿಷಯಗಳನ್ನು ಜ್ಞಾಪಿಸಿಕೊಳ್ಳುವುದೇ "ಸ್ಮೃತಿ" ಎನ್ನಿಸಿಕೊಳ್ಳುತ್ತದೆ. ಈ ತರಹದ ಜ್ಞಾಪಕಶಕ್ತಿಯು ನಾಶವಾಗುವುದೇ ’ಅಪಸ್ಮಾರ’. ಚರಕರು ಅಪಸ್ಮಾರದಲ್ಲಿ ಸ್ಮೃತಿಶಕ್ತಿಯ ಜೊತೆ ಜೊತೆಯಾಗಿ ಬುದ್ಧಿ ಹಾಗೂ ಸತ್ವಗಳೂ ಕ್ಷಯಗೊಂಡು ಕ್ಷಣಕಾಲ ತಮಪ್ರವೇಶ (Black out / Blank) ಆಗುವುದೆಂದಿದ್ದಾರೆ.


ಅಪಸ್ಮಾರದ ಸಾಮಾನ್ಯ ಕಾರಣಗಳು


ಚಿಂತಾಶೋಕಾದಿಭಿಃ ದೋಷಾಃ ಕೃದ್ಧಾ ಹೃತ್ ಸ್ರೋತಸಿ ಸ್ಥಿತಾಃ |

ಕೃತ್ವಾಸ್ಮತೇರಪಧ್ವಂಸಮಪಸ್ಮಾರಂ ಪ್ರಕುರ್ವತೇ ||

ತಯಃ ಪ್ರವೇಶ ಸಂರಂಭೋ ದೋಷೋದ್ರೇಕ ಹತಸ್ಮೃತೇಃ |

ಅಪಸ್ಮಾರ ಇತಿಜ್ಞೇಯೋ ಗದೋದೋರಶ್ಚತುರ್ವಿಧಃ ||


ಮಾನಸಿಕ ಆಘಾತ, ತಲೆಗೆ ತೀವ್ರವಾದ ಗಾಯ(ಪೆಟ್ಟು)ಗಳಾಗುವುದು. ಮೆದುಳಿನಲ್ಲಿಯ ವಿವಿಧ ದೋಷಗಳು, ಅತಿಯಾದ ಚಿಂತೆ, ದುಃಖ, ಸಿಟ್ಟು, ಶೋಕ ಇತ್ಯಾದಿ ಕಾರಣಗಳಿಂದ ವಾತ ದೋಷವು ಪ್ರಕೋಪವಾಗಿ ಅಪಸ್ಮಾರ ರೋಗವು ಬರುವುದೆಂದು ಆಯುರ್ವೇದದಲ್ಲಿ ಹೇಳಲಾಗಿದೆ.


ಆಧುನಿಕ ಚಿಕಿತ್ಸಾ ಶಾಸ್ತ್ರಕಾರರು ಅಪಸ್ಮಾರ ರೋಗವನ್ನು ಮುಖ್ಯವಾಗಿ ಎರಡು ವಿಭಾಗಗಳಲ್ಲಿ ವಿಂಗಡಿಸಿದ್ದಾರೆ.


1. ಲಾಕ್ಷಣಿಕ (Symptomatic)

2. ಪ್ರತ್ಯಾತ್ಮ ನಿಯತ (Idiopathic)


1. ಲಾಕ್ಷಣಿಕ ಅಪಸ್ಮಾರದಲ್ಲಿ ಈ ಕೆಳಕಂಡ ಯಾವುದಾದರೂ ಮಿದುಳಿನ ಕಾರಣಗಳು ಕಂಡುಬರುತ್ತವೆ.

 • ಅಭಿಘಾತ (ಪೆಟ್ಟು),

 • ಅರ್ಬುದ (Cancer),

 • ಮಸ್ತಿಷ್ಕಶೋಥ (ತಲೆಯೂತ),

 • ವಿದ್ರಥಿ (ಬಾವು),

 • ಉಪದಂಶ (ಗುಹ್ಯರೋಗ/Syphilis),

 • ಮಸ್ತಿಷ್ಕದಲ್ಲಿಯ ರಕ್ತಸ್ರಾವ,

 • ಗಂಡೂಪದ ಕ್ರಿಮಿಯ ಮಸ್ತಿಷ್ಕ ಪ್ರವೇಶ (Round worm),

 • ಮದ್ಯ,

 • ವಿಷ ಹಾಗೂ ವ್ಯಾಧಿಜನ್ಯ ದೋಷಸಂಚಯ,

 • ಗೊಬ್ಬರ,

 • ಗಣಜಲಿ (Chicken Pox),

 • ಕೊಡಿಗೆಮ್ಮು (ನಾಯಿಕೆಮ್ಮು/Whooping cough),

 • ಯಕೃತ್ (Liver) ಹಾಗೂ ವೃಕ್ಕ (Kidney) ವಿಕಾರಗಳು.2. ಪ್ರತ್ಯಾತ್ಮನಿಯತದಲ್ಲಿ ಮಸ್ತಿಷ್ಕದಲ್ಲಿ ಯಾವುದೇ ವಿಧದ ದೋಷವು ಕಂಡುಬರುವುದಿಲ್ಲ. ಮಿದುಳಿನಲ್ಲಿಯ ಜೀವಾಣುಗಳ ಅತಿಯಾದ ಚಲನವಲನಗಳಿಂದ ಉತ್ಪನ್ನವಾಗುವ ಇಲ್ಲವೇ ವಿಸರ್ಜಿಸಲ್ಪಡುವ ವಿದ್ಯುತ್ ತರಂಗಗಳಿಂದ ಅಪಸ್ಮಾರ ರೋಗವು ಬರುತ್ತದೆಂದು ಹೇಳಬಹುದು. ಇನ್ನು ಕೆಲ ಅತಿಮಾನುಷ ಶಕ್ತಿಗಳ ಆಕ್ರಮಣದಿಂದಲೂ ಹೀಗಾಗುವ ಸಾಧ್ಯತೆಗಳಿವೆ. ಇದನ್ನು ಜ್ಯೋತಿಷ್ಯದ ಜನ್ಮಕುಂಡಲಿ + ದಶಾಭುಕ್ತಿ + ಗೋಚಾರ ಸ್ಥಿತಿ + ಪ್ರಶ್ನಮಾರ್ಗದ ಮುಖೇನ ಕಂಡುಹಿಡಿಯಬಹುದು.


ಅಪಸ್ಮಾರದ ಪೂರ್ವರೂಪ (Predrom Symptoms)


"ಹೃತ್ಕಂಪಃ ಶೂನ್ಯತಾ ಸ್ವೇದೋ ಧ್ಯಾನಂ ಮೂರ್ಛಾ ಪ್ರಮೂಢತಾ |

ನಿದ್ರಾನಾಶಶ್ಚ ತಸ್ಮಿಂಚ್ಚ ಭವಿಷ್ಯತಿ ಭವತ್ಯಥ ||"

(ಸು.ವಿ.ಅ. 61)


ಹೃದಯದಲ್ಲಿ ಕಂಪನ (Palpitation of heart) ಹಾಗೂ ಶೂನ್ಯತಾ ಭಾವ, ಬೆವರು, ಚಿಂತೆ, ಮನ ಹಾಗೂ ಇಂದ್ರಿಯಗಳ ಕ್ರಿಯಾನಾಶ ಹಾಗೂ ನಿದ್ರಾನಾಶತೆ ಇವುಗಳು ಅಪಸ್ಮಾರದ ಪೂರ್ವರೂಪಗಳೆನಿಸಿವೆ.


ವಾತಿಕ ಅಪಸ್ಮಾರ


"ಕಂಪತೇ ಪ್ರದೇಶೇದ್ವಂತಾನ್ ಫೇನೋದ್ವಾಮಿ ಶ್ವನಿಸ್ಯಪಿ |

ಪರುಷಾರುಣ ಕೃಷ್ಣಾನಿ ಪಶ್ಯೇದ್ರೂಪಾಣಿ ಚಾನಿಲಾತ್ ||"

(ಸು.ವಿ.ಅ.61)


ವಾತಪ್ರಕೋಪದಿಂದ ಉಂಟಾಗುವ ಅಪಸ್ಮಾರದಲ್ಲಿ ವೇಗಗಳು ಬರುವ ಮೊದಲು ವಸ್ತುಗಳನ್ನು ರೂಕ್ಷ ಅರುಣ ಹಾಗೂ ಕಪ್ಪುವರ್ಣಗಳಿಂದ ಕಾಣುತ್ತಾನೆ. ಸ್ಮೃತಿಯು ತಪ್ಪಿದಕೂಡಲೇ ಶರೀರವು ತುಂಬ ಒದ್ದಾಡತೊಡಗುವುದು. ಹಲ್ಲುಗಳನ್ನು ಕಡಿಯುವನು. ಬಾಯಿಯಲ್ಲಿ ಬುರುಗು (ನೊರೆ) ಬರಲಾರಂಭಿಸುವುದು. ಹಾಗೂ ಉಸಿರಾಟವನ್ನು ವೇಗ-ವೇಗವಾಗಿ ಮಾಡುವನು.


ಟಿಪ್ಪಣಿ -

ವಾತಿಕ ಅಪಸ್ಮಾರದಲ್ಲಿ ದ್ವಿತೀಯ ಹಾಗೂ ತೃತೀಯ ಅವಸ್ಥೆಯ ಲಕ್ಷಣಗಳನ್ನು ಕಾಣಬಹುದು. ಹಲ್ಲುಗಳನ್ನು ಕಡಿಯುವುದರ ಜೊತೆಗೆ ನಾಲಿಗೆಯನ್ನು ಕಡಿದುಕೊಳ್ಳುವನು. ಪೇಶಿಗಳೆಲ್ಲ ಸಡಿಲಗೊಳ್ಳುವುದರಿಂದ ಬಾಯಿಯಲ್ಲಿ ಬುರುಗು ಬಂದು ಶ್ವಾಸ-ಉಚ್ಛ್ವಾಸಗಳು ಅಧಿಕಗೊಳ್ಳುವವು. ಇವು ತೃತೀಯಾವಸ್ಥೆಯ ಲಕ್ಷಣಗಳು.


ಪೈತ್ತಿಕ ಅಪಸ್ಮಾರ


"ಪೀತ ಫೇನಾಂಗ ವಕ್ತ್ರಾಕ್ಷಃ ಪೀತಾಸ್ರಗ್ರೂಪ ದರ್ಶಕಃ |

ಸತೃಷ್ಣೋಷ್ಣಾನಲ ವ್ಯಾಪ್ತಲೋಕ ದರ್ಶೀಚ ಪೈತ್ತಿಕಃ ||"

(ಸು.ವಿ.61)


ಪೈತ್ತಿಕಾಪಸ್ಮಾರದಲ್ಲಿ ರೋಗಿಯು ಎಲ್ಲ ವಸ್ತುಗಳನ್ನು ಹಳದೀ ಅಥವಾ ಕೆಂಪು ವರ್ಣದಲ್ಲಿ ಕಾಣುತ್ತಾನೆ. ಅವನ ಶರೀರ ಬಾಯಿ, ಕಣ್ಣು ಹಾಗೂ ಬಾಯಿಯಿಂದ ಬರುವ ನೊರೆಯು ಕೂಡ ಹಳದಿ ವರ್ಣದ್ದಿರುತ್ತದೆ. ನೀರಡಿಕೆ ಅಧಿಕವಾಗಿರುವುದು ಹಾಗೂ ಅವನಿಗೆ ಮೈಯಲ್ಲಿ ಹೆಚ್ಚು ಕಾವೆನಿಸುವುದು. ಎಲ್ಲ ವಸ್ತುಗಳು ಅವನಿಗೆ ಸುಡುತ್ತಿರುವಂತೆ ಕಾಣುವವು. (ಈ ಸ್ಥಿತಿಯಲ್ಲಿ ರೋಗಿಯು ಪ್ರಜ್ಞಾಹೀನ ಸ್ಥಿತಿಯಲ್ಲಿರುವನು).


ಶ್ಲೈಷ್ಮಕ ಅಪಸ್ಮಾರ


"ಶುಕ್ಲ ಫೇನಾಂಗ ವಕ್ತ್ರಾಕ್ಷಃ ಶೀತ ಹೃಷ್ಟಾಂಗಜೋ ಗುರುಃ |

ಪಶ್ಯಾನ್ ಶುಕ್ಲಾನಿ ರೂಪಾಣಿ ಶ್ಲೇಷ್ಮಿಕೋ ಮುಚ್ಯತೇ ಚಿರಾತ್ ||

(ಚ.ಚಿ.15)


ಕಫ ದೋಷದ ಅಪಸ್ಮಾರದಲ್ಲಿ ಬಾಯಿಯಿಂದ ಹೊರಡುವ ನೊರೆಯು ಹಾಗೂ ಬಾಯಿ-ಕಣ್ಣುಗಳ ವರ್ಣವೂ ಕೂಡ ಬಿಳಿಯಾಗಿರುವುದು. ರೋಗಿಗೆ ಶರೀರವು ಶೀತಲವಾದಂತೆ, ರೋಮಾಂಚಿತ ಹಾಗೂ ಭಾರವಾದಂತೆ ಅನುಭವವಾಗುವುದು. ಅವನು ಎಲ್ಲ ವಸ್ತುಗಳನ್ನು ಬಿಳಿಯಾಗಿ ಕಾಣುವನು ಹಾಗೂ ಅವನಿಗೆ ನೊರೆಯು ತಡವಾಗಿ ನಿಲ್ಲುವುದು. (ಈ ವಿಕಾರದಲ್ಲಿ ಮಸ್ತಿಷ್ಕದ ಬಹುಭಾಗವು ಆಕ್ರಾಂತವಾಗಿರುವುದರಿಂದ ವೇಗಗಳು ಗಂಭೀರ ಹಾಗೂ ಚಿರಸ್ಥಾಯಿ ಆಗಿರುವುವು).


ಸನ್ನಿಪಾತಿಕ ಅಪಸ್ಮಾರ ಹಾಗೂ ಅದರ ಅಸಾಧ್ಯತೆ -


"ಸರ್ವೈರೇತೈಃ ಸುಮಸ್ತೈಶ್ಚ ಲಿಂಗೈಜ್ಞೇಯ ಸ್ತ್ರೀದೋಷಜಃ |

ಅಪಸ್ಮಾರಃ ಸ ಚಾಸಾಧ್ಯೋಯಃ ಕ್ಷೀಣಸ್ಯಾನವಶ್ಚಯಃ ||

ಪ್ರತಿ ಸ್ಫುರಂ ತಂ ಬಹುಶಃ ಕ್ಷೀಣಂ ಪ್ರಚಲಿತ ಭ್ರುವಮ್ |

ನೇತ್ರಾಭ್ಯಾಂ ಚ ವಿಕುರ್ವಾಣಪಸ್ಮಾರೋ ವಿನಾಶಯತ್ ||"

(ಚ.ಚಿ.15)


ಸನ್ನಿಪಾತಕ ಅಪಸ್ಮಾರವು ಮೂರು ದೋಷಗಳ ಪ್ರಕೋಪ ಹಾಗೂ ಅವುಗಳ ಲಕ್ಷಣಯುಕ್ತವಾಗಿರುತ್ತದೆ. ಸನ್ನಿಪಾತಕ ಹಾಗೂ ದುರ್ಬಲರೋಗಿ ಹಾಗೂ ಪುರಾತನವಾದ ಎಲ್ಲ ಅಪಸ್ಮಾರಗಳು ಅಸಾಧ್ಯವೆನಿಸುತ್ತವೆ. ಇದಲ್ಲದೆ ಮೇಲಿಂದ ಮೇಲೆ ಆವೇಗಗಳು ಬರುವ ರೋಗಿ ಅತ್ಯಂತ ಕ್ಷೀಣವಾದ ರೋಗಿ ಹಾಗೂ ಹುಬ್ಬುಗಳು ಮೇಲೇರಿದ, ಕಣ್ಣುಗಳು ವಿಕೃತವಾದ ರೋಗಿಯು ಕೂಡ ಅಸಾಧ್ಯ ಲಕ್ಷಣಗಳನ್ನು ಹೊಂದಿರುವನು. ಇದನ್ನು Status Epilapticusಗೆ ಹೋಲಿಸಬಹುದು.


ಅಪಸ್ಮಾರದ ಅವಸ್ಥೆಗಳು -


ಅಪಸ್ಮಾರದಲ್ಲಿ ಕ್ರಮೇಣವಾಗಿ ಕಂಡುಬರುವ ಲಕ್ಷಣಗಳನ್ನು ನಾಲ್ಕು ಅವಸ್ಥೆಗಳಲ್ಲಿ ಕಾಣಬಹುದು.


1. ಪ್ರಥಮಾವಸ್ಥೆ -


ಇದಕ್ಕೆ ಪೂರ್ವಗ್ರಹ (Aura) ಎಂತಲೂ ಅನ್ನುವರು. ಇದರಲ್ಲಿ ರೋಗಿಗೆ ಚಕ್ಕರ್ ಬರುವುದು, ತಲೆತಿರುಗುವಿಕೆ, (Vertigo)ಗಳು ಕಂಡುಬರುವವು. ಇದಾದ ಬಳಿಕ ಅವನು ಒಮ್ಮಿಂದೊಮ್ಮೆಲೆ ಚೇತನಾಹೀನವಾಗಿ ಭೂಮಿಯ ಮೇಲೆ ಬಿದ್ದುಬಿಡುವನು.


2. ದ್ವಿತೀಯಾವಸ್ಥೆ -


ಈ ಸ್ಥಿತಿಯಲ್ಲಿ ಮುಖ್ಯವಾಗಿ ಮಾಂಸಪೇಶಿಗಳ ಸಂಕೋಚತೆಯು ಕಂಡುಬರುವುದು. ಬಾಯಿ, ಕುತ್ತಿಗೆ ಹಾಗೂ ಕಣ್ಣುಗಳ ಜೊತೆ ಸಂಪೂರ್ಣ ಶರೀರದ ಪೇಶಿಗಳು ಸಂಕುಚಿತಗೊಳ್ಳುವುದರ ಮೂಲಕ ಬಿರುಸಾಗುವುವು. ಕೈಮುಷ್ಟಿಗಳು ಮುಚ್ಚಿದ್ದು ಒಳಭಾಗದಲ್ಲಿ ಹೊರಳಿರುತ್ತವೆ. ಕಾಲುಗಳು ನೇರವಾಗಿದ್ದು ಬಿಗಿಯಾಗಿರುತ್ತವೆ; ಶ್ವಾಸನಾಳದ ಸಂಕೋಚತೆಯಿಂದ ಶ್ವಾಸಾವರೋಧ ಉಂಟಾಗಿ ಆಮ್ಲಜನಕ ಕೊರತೆಯಿಂದ ನೀಲಿವರ್ಣವು ಕೂಡ ಕಂಡುಬರುವುದು. ಎರಡೂ ಒಸಡುಗಳು ಮುಚ್ಚಿಕೊಳ್ಳುವುದರಿಂದ ನಾಲಿಗೆಯನ್ನು ಕಡಿದುಕೊಳ್ಳುವ ಸಾಧ್ಯತೆಯೂ ಇದೆ.


3. ತೃತೀಯಾವಸ್ಥೆ -


ಇದು ರೋಗಿಯು ಶಿಥಿಲಗೊಳ್ಳುವ ಹಂತವಾಗಿದೆ. ಪೇಶಿಗಳು ಶಿಥಿಲಗೊಳ್ಳುವುದರಿಂದ ಶ್ವಾಸೋಚ್ಛ್ವಾಸ ಮರಳಿ ಸರಿಯಾಗತೊಡಗುವುದು. ಬಾಯಿಯಿಂದ ನೊರೆಯು ಬರಲಾರಂಭಿಸುವುದು ಹಾಗೂ ರೋಗಿಯು ಕೈಕಾಲುಗಳನ್ನು ಅಲುಗಾಡಿಸತೊಡಗುವನು. ಈ ರೀತಿ ಮೇಲಿಂದಮೇಲೆ ಆಕ್ಷೇಪಗಳು ಬಂದು ಕೆಲಕ್ಷಣದಲ್ಲಿಯೇ ನಿಂತುಬಿಡುವುವು.


4. ವಿಶ್ರಾಮಾವಸ್ಥೆ -


ಈ ಅವಸ್ಥೆಯಲ್ಲಿ ಆಕ್ಷೇಪಗಳು ಸಂಪೂರ್ಣವಾಗಿ ನಿಲ್ಲುವುವು. ಹಾಗೂ ರೋಗಿಯು ಮಲಗಿಕೊಂಡುಬಿಡುವನು. ಎಚ್ಚರವಾದ ಬಳಿಕ ಅವನಿಗೆ ಶಿರಶೂಲೆ, ವಾಂತಿ ಹಾಗೂ ದಣಿವುಗಳು ಕಂಡುಬರುವವು.


5. ತೀವ್ರ ಅಪಸ್ಮಾರ -


ಈ ಹಂತವಾದ ಬಳಿಕವೂ ಮೇಲಿಂದ ಮೇಲೆ ಆಕ್ಷೇಪಗಳು ಬರಲಾರಂಭಿಸಿ ರೋಗಿಯು ಸಂಪೂರ್ಣ ಸ್ಮೃತಿ ತಪ್ಪದಿದ್ದರೆ ಅದಕ್ಕೆ ತೀವ್ರ ಅಪಸ್ಮಾರ (Status Epilepticus) ಎನ್ನುವರು. ಈ ಸ್ಥಿತಿಯು ಕೂಡ ಅಸಾಧ್ಯವೆನಿಸುತ್ತದೆ. ಮಾಧವನು ಕೂಡಾ ಇದೇ ಅಭಿಪ್ರಾಯ ಹೊಂದಿದ್ದಾನೆ.


ಅಪಸ್ಮಾರ ರೋಗವನ್ನು ಮೂರ್ಛಾ ಹಾಗೂ ಅಪತಂತ್ರಕ (Hysteria)ಗಳೊಡನೆ ಹೋಲಿಸಿ ನೋಡಿ ನಿರ್ಧರಿಸಿಕೊಳ್ಳಬೇಕು.


ಚಿಕಿತ್ಸೆ


ಸಂಶೋಧನ, ಸಂಶಮನ ಹಾಗೂ ಆಶ್ವಾಸನಗಳು ಈ ರೋಗದಲ್ಲಿ ಮುಖ್ಯ ಚಿಕಿತ್ಸಾ ತತ್ವಗಳೆನಿಸಿವೆ. ವಾತಿಕ ರೋಗಿಗೆ ಬಸ್ತಿ (ಅನುವಾಸನ ಬಸ್ತಿ), ಪೈತ್ತಿಕ ರೋಗಿಗೆ ವಿರೇಚನ ಹಾಗೂ ಕಫಜ ರೋಗಿಗೆ ವಮನ ಹಾಗೂ ಅಪತರ್ಪಣ ಚಿಕಿತ್ಸೆ ಕೊಡಬೇಕು.


1.


ಯುಕ್ತಿವ್ಯಪಾಶ್ರಯ - ಶೋಧನ + ಸಂಶಮನ. ಇದರಲ್ಲಿ ಮಖ್ಯವಾಗಿ ಮೇಧ್ಯ ಔಷಧಗಳನ್ನು ಬಳಸಲಾಗುತ್ತದೆ.

 • ಸಂಶಮನ ಚಿಕಿತ್ಸೆ - ಇದರಲ್ಲಿ ಮಾನಸಿಕ ಉದ್ವೇಗವನ್ನು ಕಡಿಮೆಮಾಡುವ ಔಷಧಿಗಳನ್ನು ಕೊಡಬೇಕು.

 • ವಾತಶಾಮಕ ಔಷಧ - ಕೆಲ ಬಸ್ತಿ ಹಾಗೂ ಅಭ್ಯಂಗ ಕೊಡಿಸಬೇಕು. ಆಯ್ದ ಘೃತವನ್ನು ಸ್ನೇಹನಕ್ಕಾಗಿ ಪ್ರಯೋಗಿಸಬೇಕು.

ದೈವವ್ಯಪಾಶ್ರಯ - ಮಣಿ-ಮಂತ್ರ-ಔಷಧ, ಕರ್ಮವಿಪಾಕ ಶಾಂತಿಗಳು, ಹೋಮಗಳು, ಪ್ರಾಯಶ್ಚಿತ್ತಗಳು, ದೈವಸ್ಥಾನದಲ್ಲಿ ಚಿಕಿತ್ಸೆ, ಸಾಮ/ಸಂಗೀತ/ರಾಗ ಚಿಕಿತ್ಸೆ ಇತ್ಯಾದಿ. (ವೇದವಿಧ್ಯಾ ಕನ್ಸಂಟೆಂಟ್ಸ್ ಈ ಎಲ್ಲಾ ವಿಧಾನಗಳಲ್ಲಿ ಪರಿಣಿತರು)


ಸತ್ವಾವಜಯ - ಮನೋಜವಿತ್ವ ಸಿದ್ಧಿಯ ಪ್ರಕ್ರಿಯೆಗಳಿಂದ, ಸೂಕ್ತವಾದ ಆಸನ, ಧ್ಯಾನ, ಪ್ರಾಣಾಯಾಮಗಳಿಂದ ಮನಸ್ಸಿನ ನಿಯಂತ್ರಣ.


2. ಪರಿಮಾರ್ಜನ ಚಿಕಿತ್ಸೆ -

 • ಅಂತಃಪರಿಮಾರ್ಜನ - ವಮನ, ವಿರೇಚನ, ಬಸ್ತಿ ಹಾಗೂ ನಶ್ಯ.

 • ಬಹಿಃಪರಿಮಾರ್ಜನ - ಅಭ್ಯಂಗ, ಉತ್ಸಾಧನ, ಅಂಜನ, ಲೇಪ ಹಾಗೂ ಧೂಪನ.

 • ಶ್ರಾಸ್ತ್ರ ಪ್ರಣೀಧಾನ - ರಕ್ತಮೋಕ್ಷಣ.

3. ಅವಸ್ಥಾ ಚಿಕಿತ್ಸೆ -

 • ವೇಗಾವಸ್ಥಾ ಚಿಕಿತ್ಸೆ

 • ಪೂರ್ವರೂಪಾವಸ್ಥೆ - ನಸ್ಯ ಹಾಗೂ ಅಂಜನ

 • ವೇಗಾವಸ್ಥೆ - ಪ್ರಾಥಮಿಕ ಚಿಕಿತ್ಸೆ ಹಾಗೂ ಧೂಪನ

 • ಪಶ್ಚಾತ್ ವೇಗಾವಸ್ಥೆ

 • ಅವೇಗಾವಸ್ಥಾ ಚಿಕಿತ್ಸೆ

 • ತೀಕ್ಷ್ಣ ವಮನ ಹಾಗೂ ವಿರೇಚನ

 • ನಸ್ಯ, ಅಂಜನ, ಧೂಪನ, ಉತ್ಸಾಧನ, ಸೇಕ

4. ವಿಶೇಷ ನಸ್ಯ


5. ಉತ್ಸಾಧನ ಯೋಗಗಳು


6. ಧೂಪ ಯೋಗಗಳು


7. ಅಂಜನ ಯೋಗಗಳು


8. ಶಮನ ಚಿಕಿತ್ಸಾ ಯೋಗಗಳು


9. ರಸಾಯನ

 • ರಸಾಯನಗಳನ್ನು ರೋಗಿಗಗಳಿಗೆ ಹೇಳಬೇಕು. ಅಪಸ್ಮಾರದ ನಿರ್ವಹಣೆಯಲ್ಲಿ ಪ್ರಾಥಮಿಕ ಚಿಕಿತ್ಸೆಯು ಪ್ರಮುಖ ಪಾತ್ರ ವಹಿಸುತ್ತದೆ.

 • ಸಮಾಲೋಚನೆ ಹಾಗೂ ಜೀವನಶೈಲಿಯ ಸಲಹೆಗಳು.


10. ಸಿದ್ಧಯೋಗಗಳು


11. ಆಯುರ್ವೇದದ ಶಲ್ಯ ತಂತ್ರದ ಮುಖೇನ ಶಸ್ತ್ರ ಚಿಕಿತ್ಸೆ -


ಈಗೆಲ್ಲಾ ವಿಕೃತಿಯ ಕೆಲ ರೋಗಿಗಳಿಗೆ ’Temporal lobectomy' - ಮಿದುಳಿನ ಶಸ್ತ್ರ ಚಿಕಿತ್ಸೆಯಿಂದ ರೋಗವು ಗುಣಮುಖವಾಗುವುದು.


ಪ್ರತ್ಯೇಕ ರೋಗಿಗೆ ಸೂಕ್ತವಾದ ಔಷಧ ನಿರ್ಣಯವು ವೈದ್ಯರ ಸುಪರ್ದಿಯಲ್ಲಿಯೇ ನಡೆಯಬೇಕಾದ್ದರಿಂದ, ಔಷಧಗಳ ಪಟ್ಟಿ ಕೊಟ್ಟರೆ ಸೂಕ್ತಾಸೂಕ್ತತೆಯ ಅರಿವಿಲ್ಲದೆ ಸ್ವಯಂವೈದ್ಯ ಮಾಡಿಕೊಂಡು ವಿಪರೀತಾವಸ್ಥೆಗೆ ಹೋಗಬಹುದಾದ ಕಾರಣ ಅದನ್ನಿಲ್ಲಿ ಪ್ರಕಟಿಸುತ್ತಿಲ್ಲ.


- ಡಾ. ಅಶ್ವಿತಾ ಎಮ್.

BAMS, MS (Shalakya)

ಬ್ರಾಹ್ಮೀ ಆಯುರ್ವೇದ ಕ್ಲಿನಿಕ್

ಚಿಕ್ಕಮಗಳೂರು

Appointments -

128 views0 comments

Comments

Rated 0 out of 5 stars.
No ratings yet

Commenting has been turned off.
bottom of page