top of page

ಅಥರ್ವ ವೇದೋಕ್ತ ಚಿಕಿತ್ಸಾ ವಿಜ್ಞಾನ

Updated: Aug 18, 2022

ಅಥರ್ವ ವೇದದಲ್ಲಿ ಪ್ರಧಾನವಾಗಿ 4 ರೀತಿಯ ಚಿಕಿತ್ಸೆಗಳು ಕಾಣಸಿಗುತ್ತದೆ - ಆಥರ್ವಣೀ, ಆಂಗೀರಸೀ, ದೈವೀ, ಮನುಷ್ಯಜಾ.


ಆಥರ್ವಣೀರ್ ಆಂಗಿರಸೀರ್ ದೈವೀರ್ ಮನುಷ್ಯಜಾ ಉತ | ಓಷಧಯಃ ಪ್ರ ಜಾಯಂತೇ ಯದಾ ತ್ವಂ ಪ್ರಾಣ ಜಿನ್ವಸಿ || ಅಥರ್ವ 11.4.16 ||

1. ಆಥರ್ವಣೀ ಚಿಕಿತ್ಸೆ - ಶಾಂತಿಯುಕ್ತ ವಿಧಿಯಿಂದ ಮಾಡುವ ಚಿಕಿತ್ಸೆ. ಒಂದು ಮತದಂತೆ ಇದು ಅಥರ್ವಣ ಋಷಿಯ ವಿಧಿ. ಅಥರ್ವವೆಂದರೆ ’ಥರ್ವ’ ಇಲ್ಲದ್ದು, ಅಂದರೆ ಯೋಗಿಯಂತೆ ನಿಶ್ಚಲ. ಇದರಲ್ಲಿ ಧ್ಯಾನ, ಮನನ, ಚಿಂತನೆ ಹಾಗೂ ಮನೋಯೋಗದಿಂದಾಗುವ ಚಿಕಿತ್ಸೆಗಳಿವೆ. ಮಾನಸ-ಚಿಕಿತ್ಸೆ (ಸೈಕೋ-ಥೆರಪಿ) ಎಂದೂ ಹೇಳಬಹುದು. ಅಷ್ಟೇ ಅಲ್ಲ, ಕಂಪನದ ಮುಖೇನ ಮನಸ್ಸು ಮತ್ತು ಶರೀರದ ನಡುವೆ ಸಾಮ್ಯತೆಯನ್ನು ಸ್ಥಾಪಿಸುವುದು ಇದರ ಉದ್ದೇಶ. ಇದು ಮನೋಬಲವನ್ನು ಪ್ರದೀಪ್ತಗೊಳಿಸಿ ಇಚ್ಛಾಶಕ್ತಿಯಿಂದ ರೋಗಗಳನ್ನು ನಷ್ಟ ಅಥವಾ ಕ್ಷೀಣಗೊಳಿಸುತ್ತದೆ. ಈಗಿನ ಮನೋವೈದ್ಯಕೀಯ ಚಿಕಿತ್ಸೆಯಲ್ಲಿ ಬಳಸುವ ಸ್ವಯಂ ಸಮ್ಮೋಹನ ಚಿಕಿತ್ಸೆ (ಆಟೋ ಸಜೆಶನ್), ಅದರಲ್ಲೇ ಬರುವ ಏನನ್ನೂ ಕೊಟ್ಟರೂ ಔಷಧವಾಗುವಂತೆ ನಂಬಿಕೆ ಹುಟ್ಟಿಸುವ ವಿಧಿ (ಪ್ಲಾಸೀಬೋ ಎಫೆಕ್ಟ್), ಇತ್ಯಾದಿಗಳೆಲ್ಲವೂ ಪುರಾತನ ಆಥರ್ವಣೀ ಚಿಕಿತ್ಸೆಯಿಂದ ಬಂದಿವೆ. ಪ್ರಾಣವನ್ನು ಅಥರ್ವಾ ಎಂದಿದೆ (ಶತಪಥ ಬ್ರಾಹ್ಮಣ 6.4.2.1). ಇಲ್ಲಿ ಪ್ರಾಣ ಶಕ್ತಿಯನ್ನು ಹೆಚ್ಚಿಸಿ ರೋಗೋಪಶಮನ ಮಾಡುವುದು ಮುಖ್ಯ ಗುರಿ (ಗೋಪಥ ಬ್ರಾಹ್ಮಣ ಪೂರ್ವ 3.4). ಜೊತೆಗೆ ಮಂತ್ರಶಕ್ತಿ, ಜಪ, ಪೂಜೆ, ಆಶ್ವಾಸನೆ, ದೈನಂದಿನ ಯೋಗಾಭ್ಯಾಸಗಳೂ ಸೇರಿಕೊಳ್ಳುತ್ತವೆ. ಆಶ್ವಾಸನೆಗೆ ಒಂದು ಉದಾಹರಣೆ ಎಂದರೆ ಜ್ಯೋತಿಷದಲ್ಲಿ ಹೇಳುವಂತೆ "ಒಂದು ತಿಂಗಳ ನಂತರ ನಿನ್ನ ಕೆಟ್ಟ ಸಮಯ ಮುಗಿಯುತ್ತದೆ, ಹೆದರದಿರು!" ಎಂಬಂತಹಾ ದೈವಜ್ಞ ವಚನ.


2. ಆಂಗೀರಸೀ ಚಿಕಿತ್ಸೆ - ಅಂಗಿರಾ ಶಬ್ದವು ನಾನಾರ್ಥಪ್ರದ. ಅದರಲ್ಲಿ ಎರಡು ವ್ಯಾಖ್ಯಾನಗಳನ್ನು ನೋಡೋಣ.


(2.1) ಅಂಗಗಳ ರಸದಿಂದ ಮಾಡುವ ಚಿಕಿತ್ಸೆಯನ್ನು ಆಂಗಿರಸೀ ಎನ್ನುತ್ತಾರೆ (ಗೋಪಥ ಬ್ರಾಹ್ಮಣ ಪೂರ್ವ 1.7, ಶತಪಥ ಬ್ರಾಹ್ಮಣ 14.4.1.9, ಬೃಹದಾರಣ್ಯಕ ಉಪನಿಷದ್ 1.3.8). ದೇಹದಲ್ಲಿ ರಕ್ತ, ಮೇದಸ್ ಇತ್ಯಾದಿ ಇನ್ನೂರಕ್ಕೂ ಹೆಚ್ಚು ರಸಗಳಿವೆ. ಓಷಧಿಯನ್ನು ಸೂಜಿಯ ಮುಖೇನ ರಕ್ತಕ್ಕೆ ಸೇರಿಸುವುದು, ಅಂಗದಿಂದ ಕ್ಷೀಣವಾದ ರಸವನ್ನು ಸರಿಪಡಿಸುವುದು, ಶರೀರಕ್ಕೆ ಇತರೆ ಕಾರ್ಯಶೀಲ ತತ್ವಗಳನ್ನು ತಲುಪಿಸುವುದು, ಮರ-ಗಿಡ-ಲೋಹ-ಖನಿಜಾದಿಗಳ ಪೋಷಕ ತತ್ವಗಳನ್ನು ದೇಹಕ್ಕೆ ಸೇರಿಸುವುದು, ರೋಗಿಯ ಕಾಯದಲ್ಲಿ ಅನ್ಯ ಶಕ್ತಿ-ಪ್ರೇರಕ ತತ್ವಗಳನ್ನು ಸಂಯೋಜಿಸುವುದು ಇತ್ಯಾದಿಗಳ ಸಮಾವೇಶವಿದೆ.


ಚುಚ್ಚುಮದ್ದು, ಲಸಿಕೆಗಳು ವೇದ ಸಾಹಿತ್ಯದಲ್ಲಿ ಹಾಗೂ ಬ್ರಿಟೀಷ್ ಪೂರ್ವದಲ್ಲಿ ಪ್ರಯೋಗದಲ್ಲೂ ಇತ್ತು. ಇವೆಲ್ಲಾ ಮೂಲತಃ ಭಾರತೀಯ ಆಯುರ್ವೇದದ ಕೊಡುಗೆಗಳು! ಇದಕ್ಕೆ ಕೆಲ ಐತಿಹಾಸಿಕ ಸಾಕ್ಷ್ಯಾಧಾರಗಳಿವೆ. ಸೈನ್ಸ್ ಡೈರೆಕ್ಟ್ ಸಂಸ್ಥೆಯ 2012ನೇ ಆವೃತ್ತಿಯ "ವೈರಾಲಜಿ" ಪುಸ್ತಕದಲ್ಲಿ ಸಿಡುಬಿಗೆ ಭಾರತೀಯ ಲಸಿಕೆಯ (ವ್ಯಾರಿಯೋಲೇಶನ್) ಪ್ರಯೋಗವು ಕ್ರಿ.ಪೂ. 1000ಕ್ಕೆ ಹೋಗುತ್ತದೆ ಎಂದು ದಾಖಲಿಸಲಾಗಿದೆ. ಕ್ರಿ.ಶ. 1800ಕ್ಕೂ ಮುನ್ನ ಕೌಪಾಕ್ಸ್ ಲಸಿಕೆಯು ಭಾರತಕ್ಕೆ ತಲುಪಿರಲಿಲ್ಲ. ಅದು ಬರುವುದಕ್ಕೆ ಎಷ್ಟೋ ಹಿಂದೆಯೇ ಲಸಿಕೆಯು ಭಾರತದ ಉತ್ತರ ಹಾಗೂ ಪೂರ್ವ ಪ್ರದೇಶಗಳಲ್ಲಿ ಬಳಕೆಯಲ್ಲಿತ್ತು. ಊಡಿಯಾ (ಒಡಿಸ್ಸಿ) ಬ್ರಾಹ್ಮಣರು "ಅನಂತ ಕಾಲದಿಂದ" ಲಸಿಕೆಗಳನ್ನು ಬಳಸುತ್ತಿದ್ದರು ಎಂದು 07-12-2012ರ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮುದ್ರಣದಲ್ಲಿ ಡೆನ್ಮಾರ್ಕಿನ ಇತಿಹಾಸ ತಜ್ಞರಾದ ಡಾ. ನೀಲ್ಸ್ ಬ್ರಿಮ್ನೆಸ್ರವರ ’ವೈದ್ಯಕೀಯ ಇತಿಹಾಸ’ದ ಲೇಖನದಲ್ಲಿ ಅಧಿಕೃತವಾಗಿ ಪ್ರಕಟಣೆಯಾಗಿದೆ. ಧನ್ವಂತರಿಯು ರಚಿಸಿದ ಶಾಕ್ತೇಯ ಗ್ರಂಥದಲ್ಲಿ ಲಸಿಕೆಗಳ ಬಳಕೆ ಹೇಳಿದೆ ಎಂದು ಫ್ರೆಂಚ್ ವೈದ್ಯನೂ, ಲಸಿಕೆಯ ಪ್ರವರ್ತಕರೂ ಆಗಿದ್ದ ಹೆನ್ರಿ ಮ್ಯಾರಿ ಹುಸ್ಸನ್ (1772-1853) ರವರು ’ಡಿಕ್ಷ್ಮೈರ್ ಡೆಸ್ ಸೈನ್ಸೆಸ್ ಮೇಡಿಕೇಲ್ಸ್’ ಎಂಬ ನಿಯತಕಾಲಿಕೆಯಲ್ಲಿ ದಾಖಲಿಸಿದ್ದಾರೆ.


’ವ್ಯಾಕ್ಸಿನೇಶನ್’ ಎಂಬ ಪದವು ಲ್ಯಾಟೀನಿನ ’ವ್ಯಾಕ್ಸಿನೇಯಿ’ಯಿಂದ ಬಂದಿದೆ. ಅದರ ಮೂಲ ’ವ್ಯಾಕ್ಸಿನಸ್’, ಧಾತುವು ’ವ್ಯಾಕ್’ ಎಂದರೆ ಹಸು. ಇದರ ಮೂಲ ಯಾವುದು ಗೊತ್ತೇ? ಅಥರ್ವವೇದ 10.10ರಲ್ಲಿ "ವಶಾ ಗೌ" ಎಂಬ ಬೃಹತ್ ಮಂತ್ರಗಳ ಸೂಕ್ತ! ಇಲ್ಲಿ "ವಶಾ" ಎಂದರೆ ಗೋವು! ಮರಾಠಿಯಲ್ಲಿ ಅದು ’ಲಸಾ/ಲಸ್’ ಎಂದು, ಗುಜರಾತಿಯಲ್ಲಿ ’ರಾಶೀ’ ಎಂದು ಬಳಕೆಯಲ್ಲಿತ್ತು. ಈಗಿನ ಲಸಿಕಾಕರಣವು ಹಿಂದೆ "ವಶಾಕರಣಂ" ಅಥವಾ "ವಶಾಕ್ರಿಯಾ" ಎಂದು ಪ್ರಚಲಿತವಿದ್ದಿರಬೇಕು ಎಂದು ವಿದ್ವಾಂಸರು ಊಹಿಸುತ್ತಾರೆ.


"ವೈಧ್ಯ" ಎನ್ನುವುದು ವೇದಗಳು ನಿಜವಾಗಿ ಇರುವ ಬ್ರಾಹ್ಮೀ ಎಂಬ ಭಾಷೆಯ (ಸಂಸ್ಕೃತವಲ್ಲ) ಮೂಲ ಶಬ್ದ. ಅದರ "ವೈಧ್ಯಕ" ಪ್ರಯೋಗಗಳಲ್ಲಿ "ಧ್ಯಕ್" ಎಂಬುದು ಕನ್ನಡದಲ್ಲಿ ’ದಾಕ್’ ಎಂದಾಗುತ್ತದೆ. ಇನ್ನು ಲಸಿಕೆ ಹಾಗೂ ಚುಚ್ಚುಮದ್ದಿನ ಪ್ರಯೋಗಕ್ಕೆ "ದಾಕು" ಹಾಕುವುದು ಎಂದು ಬಹಳ ಹಿಂದಿನಿಂದಲೂ ಕನ್ನಡದಲ್ಲಿ ಬಳಕೆಯಲ್ಲಿತ್ತು. ದಾಕು ಹಾಕುವವರನ್ನು "ದಾಕುದಾರ" ಎನ್ನುತ್ತಿದ್ದರು. ಇದೇ ಕನ್ನಡ ಧಾತುವು ಪ್ರೋಟೋ ಇಂಡೋ ಯುರೋಪಿಯನ್ ಧಾತುವಾಗಿ "ದೇಕ್/ಡೇಕ್" = ಪಡೆದುಕೊಳ್ಳುವುದು ಎಂಬರ್ಥದಲ್ಲಿ ಬದಲಾಯಿತು. ಅದೇ ಧಾತುವು ಮುಂದುವರೆದು ಗ್ರೀಕಿನಲ್ಲಿ ಡೋಕೈನ್, ಲ್ಯಾಟೀನಿನಲ್ಲಿ ’ದಿ(ಡಿ)ಚೀರಿ’ = ಸರಿಹೊಂದುವ, ಅದರಿಂದ ’ದಾವ್ಚೆರಿ’ = ಕಲಿಸು, ನಂತರ ಮಧ್ಯಂತರ ಲ್ಯಾಟೀನಿನಲ್ಲಿ "ಡಾಕ್ಟರ್" ಎಂದು ಮೊತ್ತಮೊದಲು ಬಂದಿತು. ಅದರಿಂದ ’ಡಾಕ್ಟೌರ್’ ಎಂದು ಹಳೆಯ ಫ್ರೆಂಚಿಗೆ ಹೋಗಿ ಕ್ರಿ.ಶ. 1300ರ ಹೊತ್ತಿಗೆ ಚರ್ಚಿನ ಫಾದರ್ಗೆ ’ಡಾಕ್ಟರ್’ ಎಂದು ಬಂದಿತು. ಜರ್ಮನ್ ಭಾಷೆಯಲ್ಲಿ ’ಡೋಕ್ಟೋರ್’, ಲಿಥೂನಿಯನ್ನಿನಲ್ಲಿ ’ದಾಕ್ತರಸ್’, ಇತ್ಯಾದಿ ಶಬ್ದ ಚಲನೆಯನ್ನು ಗುರುತಿಸಬಹುದು.


(2.2) ಘೋರ ಆಂಗಿರಸ - ಶತ್ರು ಅಥವಾ ರೋಗವನ್ನು ಘೋರ ಕೃತ್ಯದ ಮುಖೇನ ದೂರೀಕರಿಸುವುದು (ಕೌಷೀತಕಿ ಬ್ರಾಹ್ಮಣ, 30.6, ಆಶ್ವಲಾಯನ ಶ್ರೌತ ಸೂತ್ರ, 10.7.4, ಶಾಂಖಾಯನ ಶ್ರೌತ ಸೂತ್ರ, 16.2.12, ಛಾಂದೋಗ್ಯ ಉಪನಿಷದ್, 3.17.6). ಅಂಗಿರಾ ಋಷಿಯಿಂದ ದ್ರಷ್ಟ ಮಂತ್ರಗಳಲ್ಲಿ ವ್ರಣ ಚಿಕಿತ್ಸೆ, ರೋಗ ಕಾರಣವೆಂಬ ಶತ್ರುನಾಶನ, ರೋಗ ಮೂಲವಾದ ಶತ್ರು ಸೇನಾ ನಾಶನ, ಮಣಿಗಳ ಮುಖೇನ ಸಮಸ್ತ ರೋಗಗಳನ್ನು, ರಾಕ್ಷಸರ ತಹಬಂಧಿಯಿಂದ ಸಮತೋಲನ ಕಾಯ್ದುಕೊಳ್ಳುವ ವರ್ಣನೆ ಇದೆ (ಅಥರ್ವ ಸೂಕ್ತ, 2.3, 7.77,90, 19.34-35). ಈ ಋಷಿಗಳು ಬಾಧಕಗಳಿಗೆ ಘೋರರು (ಉಗ್ರ, ಶಕ್ತಿಶಾಲೀ), ಜೀವಕ್ಕೆ ಅಘೋರರು. ಇವರ ಸೂಕ್ಷ್ಮ ದೃಷ್ಟಿ ಹಾಗೂ ಚಿಂತನೆ ಸತ್ಯವಾಗಿರುತ್ತದೆ (ಅಥರ್ವ, 2.35.4). ಇದರಲ್ಲಿ ಶಲ್ಯ ಕ್ರಿಯೆಯ (ಶಸ್ತ್ರ ಚಿಕಿತ್ಸೆ) ವಿಧಿ ಇದೆ. ಇದರಲ್ಲಿ ಸೂಕ್ಷ್ಮ ದೃಷ್ಟಿ, ಕ್ರೂರ ಕೃತ್ಯದ ಎದೆಗಾರಿಕೆ, ಅಂಗ ಛೇದನಗಳ ಕ್ಷಮತೆ ಹಾಗೂ ರೋಗಗಳ ಸರಿಯಾದ ಕಾರಣಗಳ ಜ್ಞಾನವು ಅನಿವಾರ್ಯ (ಮನುಸ್ಮೃತಿ 11.33).


3. ದೈವೀ ಚಿಕಿತ್ಸೆ - ಶರೀರದ ಒಳಗಿನ ಹಾಗೂ ಹೊರಗಿನ ದೇವತೆಗಳ ಪರಸ್ಪರ ಶಕ್ತಿವರ್ಧನೆಯಿಂದ ಮನುಷ್ಯರು ಸ್ವಸ್ಥರಾಗಿರಬಹುದು (ಭಗವದ್ಗೀತೆ 3.11). ಇಲ್ಲಿ ದೇವ ಎಂದರೆ ಕೊಡುವ ಶಕ್ತಿ ಉಳ್ಳದ್ದು ಎಂದರ್ಥ. ದೇವತೆಗಳಲ್ಲಿ ಹಲವು ರೂಪಗಳಿರುತ್ತದೆ. ಅವರನ್ನು ಆಧ್ಯಾತ್ಮಿಕ, ಆಧಿಭೌತಿಕ, ಆಧಿದೈವಿಕ ಭೇದದಿಂದ ಗುರುತಿಸಲಾಗಿದೆ. ಉದಾ - ಅಗ್ನಿ, ವಾತ, ಸೂರ್ಯ, ಚಂದ್ರ, ವಸು, ರುದ್ರ, ಆದಿತ್ಯ, ಮರುತ್, ವಿಶ್ವೇದೇವಾ, ಬೃಹಸ್ಪತಿ, ಇಂದ್ರ, ವರುಣ (ವಾಜ. ಯಜು. 14.20). ಹೇಗೆ ಶರೀರದೊಳಗೆ ಜಠರಾಗ್ನಿ ಇದೆಯೋ, ಸೂರ್ಯ ಕ್ಷೇತ್ರವಾದ ಮಣಿಪೂರ ಚಕ್ರ ಅಥವಾ ಸೂರ್ಯ ಚಂದ್ರ ನಾಡಿಗಳಿವೆ, ಮರುತ್ ರೂಪೀ 5 ವಾಯು ಅಥವಾ ಪ್ರಾಣವಿದೆ, ರುದ್ರ ರೂಪೀ 11 ಇಂದ್ರಿಯಗಳಿವೆ (ಮನ, 5 ಜ್ಞಾನೇಂದ್ರಿಯಗಳು, 5 ಕರ್ಮೇಂದ್ರಿಯಗಳು) ಇತ್ಯಾದಿ. ಬಾಹ್ಯ ದೇವತೆಗಳೊಂದಿಗೆ ಈ ದೇವತೆಗಳ ಸಮನ್ವಯದಿಂದ ಶರೀರ ಸ್ವಾಸ್ಥ್ಯ ಸಾಧ್ಯ. ಸಮನ್ವಯಕ್ಕಾಗಿ ಋತು ಅನುಸಾರ ಚರ್ಯೆ, ದೈನಂದಿನ ಪೂಜೆ, ಜಪ, ಹೋಮಗಳ ಮುಖೇನ ಸಂಸ್ಕಾರಾದಿಗಳಿವೆ. ಮೃತ್ ಚಿಕಿತ್ಸೆ, ಜಲ ಚಿಕಿತ್ಸೆ, ಅಗ್ನಿ ಚಿಕಿತ್ಸೆ, ವಾಯು ಚಿಕಿತ್ಸೆ, ಸೂರ್ಯ ಚಿಕಿತ್ಸೆ, ಪ್ರಾಣಾಯಾಮ ಚಿಕಿತ್ಸೆ ಇತ್ಯಾದಿಗಳು ಇಲ್ಲಿ ಬರುವುದರಿಂದ ಇದನ್ನು ಪ್ರಾಕೃತಿಕ ಚಿಕಿತ್ಸೆ ಎನ್ನಬಹುದು.


4. ಮನುಷ್ಯಜಾ ಅಥವಾ ಮಾನವೀ ಚಿಕಿತ್ಸೆ - ಇದು ಮಾನವರಿಂದ ಮಾಡಲ್ಪಟ್ಟ ಚಿಕಿತ್ಸೆ. ಇದರಲ್ಲಿ ಮಾನವ ನಿರ್ಮಿತ ಚೂರ್ಣ, ಅವಲೇಹ, ಭಸ್ಮ, ಕಲ್ಪ, ಆಸವ, ವಟಿ (ಮಾತ್ರೆ) ಇತ್ಯಾದಿ ಬರುತ್ತವೆ (ಡ್ರಗ್ ಥೆರಪಿ). ಈ ರೀತಿಯ ಹಲವು ಔಷಧ ತಯಾರಿಕೆಯ ವಿಧಾನವನ್ನು ಯಜುರ್ವೇದವು ಗುಪ್ತ ಸಂಕೇತ ಭಾಷೆಯಲ್ಲಿ ಹೇಳಿಕೊಂಡು ಹೋಗಿದೆ. ವೇದೋಕ್ತ ಆಯುರ್ವೇದದ ಪಾಠಗಳಲ್ಲಿ ಇದರ ಸ್ವಲ್ಪ ಮಾಹಿತಿ ಇದೆ. ಆಲೋಪಥಿ ಔಷಧಿಗಳೂ ಮೂಲದಲ್ಲಿ ಇದರಿಂದಲೇ ಹೊರಟದ್ದು. ಆದರೆ ಪ್ರಧಾನ ವಾಹಿನಿಯಲ್ಲಿರುವ ಬಹುತೇಕ ವೈದ್ಯಕೀಯ ಪದ್ಧತಿಗಳು ಈಗಿನ ಅಹಿತಕಾರೀ ಕೈಗಾರಿಕಾ ಪೈಪೋಟಿಯ ಕಾರಣ ಬಂಡವಾಳಶಾಹಿ ವ್ಯವಸ್ಥೆಯ ಕಬಂದ ಬಾಹುವಿನಲ್ಲಿ ಸಿಲುಕಿ ನಲುಗುತ್ತಿವೆ. ವೇದದ ಆದರ್ಶದಂತೆ ಇವನ್ನೆಲ್ಲಾ ಪುನಾರೂಪಿಸುವ ಅನಿವಾರ್ಯತೆ ಇದೆ. ಭಾರತವು ದೇಸೀ ಚಿಕಿತ್ಸಾ ವಿಜ್ಞಾನವನ್ನು ಅಭಿವೃದ್ಧಿಪಡಿಸಬೇಕಿದೆ.


· ಹೇಮಂತ್ ಕುಮಾರ್ ಜಿ ಮತ್ತು ಡಾ. ಅಶ್ವಿತಾ ಎಮ್.
Comments

Rated 0 out of 5 stars.
No ratings yet

Commenting has been turned off.
bottom of page