top of page

ಆಯುರ್ವೇದದ ಮೂಲ ಅವಧಾರಣೆ

Updated: May 17, 2021

ಪ್ರಧಾನ ವೇದಗಳ ಉಪವೇದ ಎಂದು ಆಯುರ್ವೇದವು ಬಳಕೆಗೆ ಬಂದಿದೆ. ಸಮಗ್ರವಾಗಿ ಅವಲೋಕಿಸಿದರೆ ಶರೀರಕ್ಕೆ ಸಂಬಂಧಪಟ್ಟಂತಹಾ ಆಯಸ್ಸನ್ನು ಗುರುತಿಸುವುದು ಅದರ ಮುಖ್ಯ ಉದ್ದೇಶ ಎಂದು ತಿಳಿದುಬರುತ್ತದೆ. ಹಾಗಾದರೆ ಶರೀರ ಎಂದರೇನು? ಉನ್ನತ ಜೀವಿಗಳ ಕಾಯವು ರಸ, ರಕ್ತ, ಮಾಂಸ, ಮೇಧ, ಅಸ್ಥಿ, ಮಜ್ಜಾ, ಶುಕ್ರ ಎಂಬ ಏಳು ಧಾತುಗಳಿಂದ ತಯಾರಾಗಿರುತ್ತದೆ. ಅದರಲ್ಲಿ ಪ್ರಾಣಧಾರಣೆ ಮಾಡುವಂತಹಾ ಕೋಶಗಳಿರುತ್ತವೆ. ಮಾನವರಂತಹಾ ಅತ್ಯುನ್ನತ ಶರೀರದಲ್ಲಿ ಇವುಗಳೊಂದಿಗೆ ಪ್ರಧಾನವಾಗಿ ಬುದ್ಧಿವಂತಿಕೆಯ ಸಮೃದ್ಧತೆ ಇರುತ್ತದೆ. ವಿವಿಧ ಘಟಕಗಳಿಂದಾದ ಶರೀರದ ಸಮತೋಲನಕ್ಕಾಗಿ ಧಾತು-ರಸ-ಕಾರ್ಯ-ದೋಷ ಎಂಬ ನಾಲ್ಕು ರೀತಿಯ ಸಂತುಲನ ವ್ಯವಸ್ಥೆಗಳಿರುತ್ತವೆ. ಇವುಗಳಲ್ಲಿ ಮುಖ್ಯವಾದ ಕಾರ್ಯ ಸಂತುಲನದಲ್ಲಿ ಏನಾಗುತ್ತದೆ ಎಂದು ನೋಡೋಣ.


ಮಿದುಳು, ಹೃದಯ, ಶ್ವಾಸಕೋಶ, ಮೂತ್ರಪಿಂಡ, ಪಿತ್ತಕೋಶಗಳ ಕ್ರಿಯಾಕಲಾಪಗಳಲ್ಲಿ ಸಮತೋಲನವಿರುವುದು ಅನಿವಾರ್ಯ. ಉದಾಹರಣೆಗೆ ಉಸಿರಾಟ, ಹೃದಯದ ಬಡಿತ, ಮಲ-ಮೂತ್ರ ವಿಸರ್ಜನೆ, ಇವುಗಳು ಕ್ರಿಯಾವಾಹೀ ಪ್ರಸಂಗಗಳಾಗಿವೆ. ಇದರಿಂದ ಶರೀರವನ್ನು ಜೀವನವು ಜೀವಂತವಾಗಿರಿಸಲು ಬೇಕಾದ ಶಬ್ದ-ಸ್ಪರ್ಶ-ರೂಪ-ರಸ-ಗಂಧ ಎಂಬ ಸೂಕ್ಷ್ಮ ತನ್ಮಾತ್ರೆಗಳ ಮುಖೇನ ಜ್ಞಾನವಾಹೀ ಕಾರ್ಯಗಳು ನಡೆಯುತ್ತದೆ. ಇವುಗಳಲ್ಲಿನ ಸಮತ್ವವು ಶರೀರ ಸ್ವಸ್ಥತೆಯ ಲಕ್ಷಣ. ಅದಕ್ಕಾಗಿ ಏಳು ಧಾತುಗಳ ವ್ಯವಹಾರ, ಸಿಹಿ-ಕಹಿ-ಉಪ್ಪು-ಹುಳಿ-ಖಾರ-ಒಗರು ಎಂಬ ಆರಾರ್ಲಿ ಮೂವತ್ತಾರು ರೀತಿಯ ರಸಗಳಲ್ಲಿ ಸಮತೋಲನವಿರುವುದು ಅವಶ್ಯಕ. ಇದರ ಮಾಹಿತಿಯನ್ನು ವೇದದಿಂದಾರಂಭಿಸಿ ಚರಕ ಸಂಹಿತೆಯವರೆಗಿನ ಪ್ರಧಾನ ಗ್ರಂಥಗಳಲ್ಲಿ ಪ್ರಸ್ತುತಪಡಿಸಲಾಗಿದೆ. ವಾತ-ಪಿತ್ತ-ಕಫ ಎಂಬ ತ್ರಿದೋಷಗಳು, ಮೇಲ್ತಿಳಿಸಿದ ಸಪ್ತಧಾತುಗಳು, ಕೈ-ಕಾಲು-ಬಾಯಿ-ವಿಸರ್ಜನಾಂಗ ಎಂಬ ಕರ್ಮೇಂದ್ರಿಯಗಳು, ಕಣ್ಣು-ಕಿವಿ-ಮೂಗು-ನಾಲಗೆ-ಚರ್ಮ ಎಂಬ ಜ್ಞಾನೇಂದ್ರಿಯಗಳಲ್ಲಿನ ಸಂತುಲನವೇ ಶರೀರ ಸ್ವಸ್ಥತೆಯನ್ನು ಪ್ರಮಾಣಿತಗೊಳಿಸಲು ಸಾಧ್ಯ.


ಕರ್ನಾಟಕದ ರಾಮನಾಥಪುರದಲ್ಲಿ ಹುಟ್ಟಿ, ಬೆಳೆದು, ಮಧ್ಯಪ್ರದೇಶದ ಅಮರಕಂಟಕದಲ್ಲಿ ಅಷ್ಟಾಂಗ ಯೋಗದ ಮುಖೇನ ಸಮಾಧಿ, ಸಂಯಮಗಳನ್ನು ಸಾಧಿಸಿ, ನಂತರ ಮಧ್ಯಸ್ಥ ದರ್ಶನದ ಮುಖೇನ ಜೀವನ ವಿದ್ಯೆಯನ್ನು ಪ್ರತಿಪಾದಸಿ ಹಲವರನ್ನು ಪರಿವರ್ತಿಸಿ ಒಳ್ಳೆಯ ದಾರಿಗೆ ತಂದ ದಿ|| ಎ. ನಾಗರಾಜರವರು ಪ್ರತ್ಯಕ್ಷವಾಗಿ ಕಂಡುಕೊಂಡ ಸ್ವಸ್ಥ ಶರೀರದ ಬಗ್ಗೆ ಒಂದು ಮಿಂಚುನೋಟವನ್ನು ನೋಡೋಣ.


ಮಾನವರು ಜೀವನ ಮತ್ತು ಶರೀರದ ಸಂಯುಕ್ತ ರೂಪದಲ್ಲಿ ಪ್ರಸ್ತುತವಾದಂತಹಾ ಒಂದು ಘಟಕ (ನಿಯತಿ ವಿಧಿಯಿಂದ).ಮನಾಕಾರವನ್ನು ಸಾಕಾರ ಮಾಡುವವರು, ಮನಃ ಸ್ವಸ್ಥತೆಯನ್ನು ಪ್ರಮಾಣಿತಗೊಳಿಸುವವರು ಮಾನವರೆನ್ನಿಸಿಕೊಳ್ಳುತ್ತಾರೆ. ಇವರನ್ನು ಮೂರು ವಿಭಾಗಗಳಲ್ಲಿ ಗುರುತಿಸಬಹುದು - ಬುದ್ಧಿವಂತರು, ಭ್ರಮಿತರು, ಜಾಗೃತರು.

 • ಮಾನವರ ಪರಿಭಾಷೆ:- ಮನಾಕಾರವನ್ನು ಸಾಕಾರ ಮಾಡುವವರು, ಮನಃ ಸ್ವಸ್ಥತೆಯನ್ನು ಪ್ರಮಾಣಿತಗೊಳಿಸುವವರು.

  • ಮನಾಕಾರವನ್ನು ಸಾಕಾರಗೊಳಿಸುವ ಸ್ವರೂಪ:- ಆಹಾರ, ಆವಾಸ, ಅಲಂಕಾರ, ದೂರಗಮನ, ದೂರಶ್ರವಣ, ದೂರದರ್ಶನ ಸಂಬಂಧೀ ವಸ್ತು/ಯಂತ್ರ/ಉಪಕರಣವನ್ನು ಮಾಡುವವರು.

  • ಮನಃ ಸ್ವಸ್ಥತೆಯ ಸ್ವರೂಪ:- ಅನುಭವ ಪ್ರಮಾಣ ರೂಪದಲ್ಲಿ ಸತ್ಯ, ವಿಚಾರ ಪ್ರಮಾಣ ರೂಪದಲ್ಲಿ ಸಮಾಧಾನ, ವ್ಯವಹಾರ ಪ್ರಮಾಣ ರೂಪದಲ್ಲಿ ನ್ಯಾಯ, ನಿಯಮ, ನಿಯಂತ್ರಣ ಸಂತುಲನವು ಸಹಜ ಸಿದ್ಧಾಂತಗಳನ್ನು ಪ್ರಮಾಣಿತಗೊಳಿಸುವವರು.


ಇದರ ಮೂಲವೇ "ಪ್ರಾಮಾಣಿಕತೆ". ಇಂತಹಾ ಮಾನವರ ಹೆಸರೇ ಬುದ್ಧಿವಂತ ಮಾನವರು. ಬುದ್ಧಿವಂತ ಮಾನವರೇ ಶರೀರದ ಸ್ವಸ್ಥತೆಯನ್ನು ಕಾಯ್ದುಕೊಳ್ಳುತ್ತಾರೆ. ಭ್ರಮಿತ ಮಾನವರೂ ಶರೀರ-ಸ್ವಸ್ಥತೆಯನ್ನು ಬಯಸುತ್ತಾರೆ. ಭ್ರಮಿತ ಮಾನವರ ಅನುಸಾರ ಸ್ವಸ್ಥ ಶರೀರದಲ್ಲಿ ಸ್ವಸ್ಥ ಮನವಿರುತ್ತದೆ. ಜಾಗೃತ ಮಾನವರಾದರೋ ಮನಃ ಸ್ವಸ್ಥತೆಯ ಆಧಾರದಲ್ಲಿ ಶರೀರ ಸ್ವಾಸ್ಥ್ಯವನ್ನು ಸಹಜವಾಗಿ ಕಾಯ್ದುಕೊಳ್ಳುತ್ತಾರೆ.


ಈಗ ಮಾನವರು, ಶರೀರ, ಮನಃ ಸ್ವಸ್ಥತೆಯ ಈ ವ್ಯಾಖ್ಯಾನಗಳನ್ನು ಚಿಕಿತ್ಸಾ ಪದ್ಧತಿಗಳಿಗೆ ಸಂಬಂಧಿಸಿದಂತೆ ವಿಮರ್ಶಿಸೋಣ. ಭ್ರಮಿತ ಮಾನವರಲ್ಲಿ ವ್ಯಾಪಾರ ವಿಧಿಯಿಂದ ಶರೀರ-ಸ್ವಾಸ್ಥ್ಯ ಕಾಯ್ದುಕೊಳ್ಳುವ ಪರಂಪರೆಯು ಅಚ್ಚಾಗಿಬಿಟ್ಟಿದೆ. ಇದರ ಪರಿಷ್ಕರಣೆಗೆ ಸೂತ್ರವೆಂದರೆ -

 1. ರೋಗವನ್ನು ಗುರುತಿಸುವುದು,

 2. ರೋಗದ ಬಲಾಬಲವನ್ನು ಗುರುತಿಸುವುದು,

 3. ರೋಗದೊಂದಿಗೆ ಪಥ್ಯಾಪಥ್ಯ ಗುರುತಿಸುವುದು.

 4. ಔಷಧಿಯ ಸಂದರ್ಭದಲ್ಲಿ - ಔಷಧಿಗಳನ್ನು ಗುರುತಿಸುವುದು,

 5. ಔಷಧಿಗಳ ಬಲಾಬಲವನ್ನು ಗುರುತಿಸುವುದು,

 6. ಔಷಧಿಗಳ ಜೊತೆಗೆ ಅನುಪಾನವನ್ನು ಗುರುತಿಸುವುದು.

ಈ ರೀತಿ ಔಷಧಿಗಳು ಮತ್ತು ರೋಗಗಳ ಜೊತೆಗೆ ಗುರುತನ್ನು ಮಾಡಿಕೊಳ್ಳುವ ವಿಧಿಯು ಆರೋಗ್ಯ ಕ್ಷೇತ್ರದಲ್ಲಿ ನಡೆಯಬೇಕಾದ ಮೊದಲ ಕಾರ್ಯಕ್ರಮ. ಇನ್ಯಾವ ಕೆಲಸಗಳು ನಡೆಯಬೇಕಿದೆ ಎಂದರೆ:


೧. ಇಲ್ಲಿಯವರೆಗೆ ಆಯುರ್ವೇದ ಪರಂಪರೆಯ ಅನುಸಾರ, ದೋಷಾನುಸಂಗಿಕ ವಿಧಿಯಿಂದ ರೋಗಗಳನ್ನು ಗುರುತಿಸುವ ವಿಧಿ ನಡೆದುಬಂದಿದೆ. ಬ್ರಿಟೀಷ್, ಮೊಗಲ್ ಆಡಳಿತದ ಕಾರಣದಿಂದ ಭಾರತದಲ್ಲಿ ಬಿಟ್ಟುಹೋಗಿರುವ ಪರಂಪರೆಯನ್ನು ಸಾರ್ವಕಾಲಿಕ ಸಾರ್ವದೇಶಿಕ ಸತ್ಯವಾದ ವೇದದಿಂದ ಪರಿಷ್ಕರಿಸಿ ಶಿಕ್ಷಣ, ಅಭ್ಯಾಸ, ಅನುಸಂಧಾನ, ಅನುಷ್ಠಾನ ಕ್ರಮದಲ್ಲಿ ಬಳಕೆಗೆ ತರುವ ಅವಶ್ಯಕತೆ ಇದೆ. ಒಂದು ವಿಷಯವನ್ನು ನೆನಪಿಡಬೇಕು - ವಿಶ್ವಕ್ಕೆಲ್ಲ ಒಂದೇ ಚಿಕಿತ್ಸಾ ಪದ್ಧತಿ ಸಾಧ್ಯವೇ ಇಲ್ಲ! ದೇಶಕಾಲಕ್ಕಾಧರಿಸಿದ ಚಿಕಿತ್ಸ ಪದ್ಧತಿ ರೂಪುಗೊಳ್ಳಬೇಕು. ಮನೆಮದ್ದು, ಯೋಗ, ಪ್ರಾಣಾಯಾಮ, ಪ್ರಕೃತಿ ಚಿಕಿತ್ಸೆ ಇತ್ಯಾದಿ ವಿಭಾಗಗಳೆಲ್ಲಾ ಆಯುರ್ವೇದ ಮೂಲದ್ದೇ.


೨. ಪ್ರಚಲಿತ ಆಲೋಪಥಿಯ ಅನುಸಾರ, ರೋಗಗಳನ್ನು ಮೆಷೀನ್ ಹೇಳುತ್ತದೆ. ಮಾತ್ರೆಗಳನ್ನು ಕೆಮಿಸ್ಟ್ ಅಥವಾ ಡಾಕ್ಟರ್ ಹೇಳುತ್ತಾರೆ. ಕೆಮಿಸ್ಟಿಗೆ ಇನ್ನೊಂದು ಹೆಸರು ರಸಾಯನಜ್ಞ - ಇವರು ಮಾತ್ರೆಗಳನ್ನು ತಯಾರಿಸುತ್ತಾರೆ. ಡಾಕ್ಟರ್ ಎಂಬುವವರು ಸರ್ಟಿಫಿಕೇಟಿನ ರೂಪದಲ್ಲಿ ಸಕ್ಷಮರಾಗಿರುವವರು, ರೋಗಿಗಾಗಿ ಮಾತ್ರೆಗಳನ್ನು "ಬರೆದುಕೊಡುವವರು" ಎಂದಾಗಿದೆ. ರೋಗಗಳನ್ನು ಮೆಷೀನಿನ ಆಧಾರದಲ್ಲಿ ಹೇಳುವುದು ಕ್ರಿಮಿಕೀಟಾನುಷಂಗೀ ನಿಷ್ಕರ್ಷೆ. ಕ್ರಿಮಿ ಎಂದರೆ ಈಗೆಲ್ಲರ ಬಾಯಲ್ಲಿ ಓಡಾಡುವ ಶಬ್ದಗಳಾದ ಬ್ಯಾಕ್ಟೀರಿಯಾ/ವೈರಸ್ ಇತ್ಯಾದಿಗಳು. ಈ ಸಿದ್ಧಾಂತ ಮತ್ತು ಪ್ರಯೋಗಗಳನ್ನು ಭಾರತೀಯ ಮೂಲದ ಬುದ್ಧಿವಂತಿಕೆ, ಪ್ರಾಮಾಣಿಕತೆ, ಸಾಮಾಜಿಕ ಕಳಕಳಿ, ಸ್ವದೇಶೀ ವಿಜ್ಞಾನ, ಮಾನವೀಯತೆಗಳ ಚೌಕಟ್ಟಿನಲ್ಲಿ ಸ್ವತಂತ್ರ ಚಿಂತನೆಗೆ ಒಡ್ಡುವ ಅನಿವಾರ್ಯತೆ ಇದೆ.


೩. ಹೋಮಿಯೋಪಥಿಯ ಆಧಾರದಲ್ಲಿ ಲಕ್ಷಣಾನುಷಂಗೀ ನಿಷ್ಕರ್ಷೆ ಪಡೆಯುವ ವ್ಯವಸ್ಥೆ ಇದೆ (ರೋಗಗಳ ಸಂದರ್ಭದಲ್ಲಿ). ಇದರ ಔಷಧಗಳನ್ನೂ ವಿಶೇಷಜ್ಞರು ತಯಾರಿಸುತ್ತಾರೆ. ಯಾರು ಪಾರಂಗತರೋ ಅಂತಹವರೂ ತಯಾರಿಸುತ್ತಾರೆ. ಇಂತಹಾ ಕೆಲ ಅಭ್ಯಾಸಗಳು ಚಾಲ್ತಿಯಲ್ಲಿವೆ. ಅವುಗಳಲ್ಲಿರುವ ಉತ್ತಮ ವಿಚಾರಗಳನ್ನೂ ಮುಖ್ಯವಾಹಿನಿಗೆ ತರಬಹುದು. ರಸಾಯನ ಶಾಸ್ತ್ರದ ಮೂಲವೂ ವೇದ-ಆಯುರ್ವೇದದ್ದು.


೪. ಆಯುರ್ವೇದ ವಿಧಿ ಹಾಗೂ ಯೂನಾನಿ ವಿಧಿಗಳಲ್ಲಿ ಸನ್ನಿಕಟತೆ ಇದೆ. ಅಂದರೆ ಆಯುರ್ವೇದವು ಹೇಗೆ ಯೋಚಿಸುತ್ತದೆಯೋ, ಹೆಚ್ಚಾಗಿ ಅದೇ ರೀತಿ ಯೂನಾನಿಯೂ ಚಿಂತಿಸುತ್ತದೆ. ಆಯುರ್ವೇದ-ವಿಧಿಯಿಂದ ಔಷಧಿಗಳ ರುಚಿ, ದ್ರವ್ಯಗಳ ಅನುಸಾರ ಸರ್ವಾಧಿಕವಾಗಿದೆ; ಯೂನಾನೀ ವಿಧಿಯಿಂದ, ರೋಗಿಗಳಿಗೆ ರುಚಿಯನ್ನಿಸುವಂತೆ ಮಾಡಲು ಯೋಚನೆ-ಚಿಂತನೆ ನಡೆಯಿತು.


ಉಕ್ತ ವಿಧಿಗಳಿಂದ ಸ್ಪಷ್ಟವಾಗುವುದೇನೆಂದರೆ, ಯಾರು ಎಷ್ಟು ಜ್ಞಾನಿಗಳು? ಎಷ್ಟರಮಟ್ಟಿಗೆ ಜ್ಞಾನದ ಪಕ್ಷದಲ್ಲಿದ್ದಾರೆ? ಯಾರು ಎಷ್ಟು ಲಕ್ಷಣಗಳ ಪಕ್ಷದಲ್ಲಿದ್ದಾರೆ? ದೋಷಗಳನ್ನು ಗುರುತಿಸುವುದು ಜ್ಞಾನದ ಆಧಾರದಲ್ಲಿಯಾದರೆ, ಲಕ್ಷಣಗಳನ್ನು ಗುರುತಿಸುವುದು ರೋಗಿಯ ಆತಂಕಗಳ ಆಧಾರದಲ್ಲಿ. ಕ್ರಿಮಿಗಳನ್ನು (ಬ್ಯಾಕ್ಟೀರಿಯಾದಿ) ಗುರುತಿಸುವುದು ಮೆಷೀನಿನ ಕೆಲಸ. ಆದರೆ ಹೌದೇ? ಸಾಧ್ಯವಾಗಿದೆಯೇ? ಋಷಿಗಳ ಮಾರ್ಗವನ್ನು ಒಮ್ಮೆಯಾದರೂ ಇಣುಕಿ ನೋಡುವ ಪ್ರಯತ್ನಕ್ಕೆ ಅವಕಾಶ ನೀಡಲಾಗಿದೆಯೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಪರಿಣಾಮಕಾರೀ ಬದಲಾವಣೆ ತರಲು ಸಾಧ್ಯ.


ಅವಿತಿರುವ ಇತಿಹಾಸದ ಪುಟಗಳನ್ನು ತಿರುವಿದರೆ


೨ ಮೇ ೨೦೨೧ರಂದು ನಡೆದ ಅಂತರ್ಜಾಲದಲ್ಲಿ ನಡೆದ ಕೊರೋನಾದ ಬಗೆಗಿನ ವಿಭಿನ್ನ ಚಿಂತನೆ ಇದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ಡಾ|| ಹಿತೇಶ್ ಜಾನಿ, ನಿವೃತ್ತ ಪ್ರಾಂಶುಪಾಲರು, ಗುಜರಾತ್ ಆಯುರ್ವೇದ ವಿಶ್ವವಿದ್ಯಾಲಯ, ಜಾಮ್ನಗರ, ಇವರು ಹೇಳುತ್ತಾರೆ - ಇಂದಿಗೆ ೨೫೦೦ ವರ್ಷಗಳ ಹಿಂದೆ ತಕ್ಷಶಿಲಾ ವಿಶ್ವವಿದ್ಯಾಲಯದಲ್ಲಿ ಚರಕ ಸಂಹಿತೆಯೇ ೨೦ ಭಾಷೆಗಳಿಗೆ ಅನುವಾದಗೊಂಡಿತ್ತು. ಮೊತ್ತಮೊದಲಿಗೆ ಪರ್ಷಿಯಾ ಭಾಷೆಯಲ್ಲಿ ಅನುವಾದಗೊಂಡಿತು. ಅದೇ ಪರ್ಷಿಯನ್ ಸಾಂಪ್ರದಾಯಿಕ ಚಿಕಿತ್ಸೆ ಎಂದಾಯಿತು. ಅದೇ ರೀತಿ ಇನ್ನೊಂದು ಕವಲೇ ಚೀನಾದಲ್ಲಿ ಈಗ ಚೀನೀ ಸಾಂಪ್ರದಾಯಿಕ ಚಿಕಿತ್ಸೆ (TCM).


೧೪೯೮ರಲ್ಲಿ ವಾಸ್ಕೋಡಗಾಮನೊಂದಿಗೆ ಪೋರ್ಚುಗೀಸರು ಮಲಬಾರ್ ಪ್ರಾಂತ್ಯದಿಂದ ಕ್ಯಾಲಿಕಟ್ಟಿಗೆ ಭಾರತಕ್ಕೆ ಬಂದಾಗ ಅವರಿಗೆ ಅಚ್ಚರಿ ಪಡಿಸಿದ್ದು ನಮ್ಮ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿ. ಅವರು ಅದರ ಮಾಹಿತಿಯನ್ನು ತಮ್ಮ ಗ್ರಂಥಗಳಲ್ಲಿ ದಾಖಲಿಸಿಕೊಂಡರು. ಬ್ರಿಟೀಷರಿಗೂ ಮಲಯ ಪ್ರಾಂತ್ಯವನ್ನು ಆಳುವುದಕ್ಕೆ ತಡೆಯಾಗಿದ್ದು ಆಯುರ್ವೇದ. ಅವರೆಷ್ಟೇ ಬ್ರಿಟೀಷ್ ವೈದ್ಯಕೀಯ ಪದ್ಧತಿಯ ಬಗ್ಗೆ ಹೇಳಿದರೂ ಜನರು ಮಾತ್ರ ನಮ್ಮ ವೈದ್ಯರನ್ನೇ ಆಶ್ರಯಿಸುತ್ತಿದ್ದರು. ಇದರ ಬಗ್ಗೆ ಒಂದು ಉದಾಹರಣೆ ನೀಡುತ್ತಾ ನಮ್ಮ ಗುರುಗಳು ವೇದೋಕ್ತ ಆಯುರ್ವೇದ ಪಾಠದಲ್ಲಿ ಹೇಳುತ್ತಿದ್ದರು - "ಯಾವಾಗ ಬ್ರಿಟೀಷ್ ಮಿಷನರಿಗಳು ನೇರವಾಗಿ ವೈದ್ಯಕೀಯ ಕ್ಷೇತ್ರಕ್ಕೆ ಪ್ರವೇಶಿಸಲು ಆಗಲಿಲ್ಲವೋ, ಟಾನಿಕ್ ಕೊಡುವೆವು, ಆಯುರ್ವೇದದಷ್ಟು ಕಠಿಣ ಪಥ್ಯಗಳು ನಮ್ಮಲ್ಲಿಲ್ಲ, ಉಚಿತ ವೈದ್ಯಕೀಯ ಸೇವೆ ಎಲ್ಲರಿಗೆ ಎಂದರೂ ಜನರು ಬರಲಿಲ್ಲ. ಆಗ ಭೇದ ನೀತಿಯನ್ನು ಪ್ರಯೋಗಿಸಿದರು. ಸಾಂಪ್ರದಾಯಿಕ ಚಿಕಿತ್ಸೆಯ ಮೂಲವನ್ನು ಕೆದುಕಿ ಹಾಳು ಮಾಡುವ ಯೋಜನೆ ರೂಪಿಸಿದರು. ಉದಾಹರಣೆಗೆ ಮಲಯ ಕಾಡುಗಳಲ್ಲಿ ಸಿಗುತ್ತಿದ್ದ "ಜ್ವರಾರಿ" ಎಂಬ ಮೂಲಿಕೆಯನ್ನು ಹುಡುಕಿ ನಾಶ ಮಾಡಿದರು. ಜ್ವರಾರಿಯ ಒಂದೆರಡು ಎಲೆಗಳನ್ನು ಕೈಯ್ಯಲ್ಲಿ ಹಿಸುಕಿ ರಸವನ್ನು ಹಣೆಗೆ ಹಚ್ಚಿದರೆ ಎಂತಹಾ ಜ್ವರವೂ ಇಳಿದು ಹೋಗುತ್ತಿತ್ತು. ಹೀಗೆ ಹಲವು ಮೂಲಿಕೆಗಳ ನಾಶ, ಹಲವು ವೈದ್ಯ ಮನೆತನಗಳ ನಾಶ, ಇತ್ಯಾದಿ ದಂಡನೀತಿಯಿಂದ ಬ್ರಿಟೀಷರು ತಮ್ಮಯ ವೈದ್ಯಕೀಯ ಪದ್ಧತಿಯನ್ನು ಆಶ್ರಯಿಸುವಂತೆ ಮಾಡಿದರು." ಇದೆಲ್ಲಾ ಅವರೇ ಬರೆಸಿದ ಇತಿಹಾಸದಲ್ಲಿ ದಾಖಲಾಗದೆ ಇರುವ ಸತ್ಯಗಳು. ಆದರೆ ನಾಣ್ನುಡಿಯಲ್ಲಿ, ಜನಪದದಲ್ಲಿ ಹಾಸುಹೊಕ್ಕಾಗಿದೆ.


ಪ್ರಸಕ್ತ ಪರಿಸ್ಥಿತಿಯ ಒಂದು ವಿಭಿನ್ನ ವಿಶ್ಲೇಷಣೆ


೧೮೯೭ರಲ್ಲಿ ಬ್ರಿಟೀಷರ ಆಡಳಿತದಲ್ಲಿ ತಯಾರಾದ ’ಎಪಿಡಮಿಕ್ ಡಿಸೀಸ್ ಯಾಕ್ಟ್’ ಏಪ್ರಿಲ್ ೨೦೨೦ರಿಂದಲೇ ದೇಶದಲ್ಲಿ ಜಾರಿಯಾಗಿದೆ. ಇದು ಮೂಲಭೂತ ಹಕ್ಕುಗಳನ್ನು ಹಿಂಪಡೆಯುವಷ್ಟು ಬಲಶಾಲಿಯಾಗಿದೆ. ಈ ಸಂದರ್ಭದಲ್ಲಿ ಆಯುಷ್ ವಿಭಾಗದ ಚಿಕಿತ್ಸಾ ಪದ್ಧತಿಗಳ ಮೇಲೆ ಆಧುನಿಕ ಪದ್ಧತಿಯು ಹಲವು ನಿರ್ಬಂಧ ಹೇರಿತು. ಅಷ್ಟೇ ಅಲ್ಲದೆ ಈಗ ಸಾಮಾನ್ಯ ವೈದ್ಯರ (ಜಿ.ಪಿ) ಸಲಹೆಗಳೂ ಮಾನ್ಯವಲ್ಲ, ಬದಲಿಗೆ ಸಾಮುದಾಯಿಕ ಚಿಕಿತ್ಸೆಯ ನಿಯಮಾವಳಿಗಳನ್ನೇ ಪಾಲಿಸಬೇಕು. ಆದರೆ ಆ ಚಿಕಿತ್ಸಾ ನಿಯಮಾವಳಿಗಳು ಎಷ್ಟರ ಮಟ್ಟಿಗೆ ವೈಜ್ಞಾನಿಕ ಹಾಗೂ ಪರಿಣಾಮಕಾರಿ ಎಂಬುದರ ಬಗ್ಗೆ ಜನಸಾಮಾನ್ಯರಲ್ಲಿ ಅನುಮಾನ ವ್ಯಕ್ತವಾಗುತ್ತಿದೆ.


ಇನ್ನೊಂದು ಕಡೆ ನೋಡಿದರೆ ಚೀನೀ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯಿಂದಲೇ ತಮ್ಮ ದೇಶವು ಕೋವಿಡ್-೧೯ನ್ನು ಗೆಲ್ಲುತಿರುವುದು ಎಂದು ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯು ವರದಿ ಮಾಡಿದೆ. ಚೀನಾದ ಟಿಯಾಂಜಿನ್ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ೭೨ರ ಹರೆಯದ ಜ್ಯಾಂಗ್ ಬೋಲಿಯವರ ಸಾಂಪ್ರದಾಯಿಕ ಚೀನೀ ಚಿಕಿತ್ಸೆಯಿಂದಲೇ ಕೋವಿಡ್-೧೯ ಸಾಂಕ್ರಾಮಿಕ ಹೋರಾಟಕ್ಕಾಗಿ ಚೀನೀ ಸರ್ಕಾರವು ’ಜನರ ನಾಯಕ’ ಎಂಬ ರಾಷ್ಟ್ರೀಯ ಬಿರುದಿತ್ತು ಗೌರವಿಸಿದೆ. ಅವರ ಪತ್ರಿಕಾ ಸಂದರ್ಶನದಲ್ಲಿ ಹೇಳಿದ ಪ್ರಮುಖ ಮಾಹಿತಿ ಎಂದರೆ ೨೦೦೩ರಲ್ಲಿ ಬಂದ ಸಾರ್ಸಿನಲ್ಲಿ ಕಲಿತ ಪಾಠದ ಕಾರಣ ಚೀನೀ ಸಾಂಪ್ರದಾಯಿಕ ಚಿಕಿತ್ಸೆಯಿಂದ ಇಂದು ಕೋವಿಡ್-೧೯ನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗಿದೆ. ಅವರು ಪ್ರಯೋಗಿಸಿದ ಕಷಾಯಗಳು, ಉಸಿರಾಟದ ಮತ್ತು ದೈಹಿಕ ವ್ಯಾಯಾಮ ಯಾವ ಮೂಲದ್ದು? ಬಲ್ಲವನೇ ಬಲ್ಲ ಬೆಲ್ಲದ ಸವಿಯ ಎಂಬಂತೆ ವೇದದಿಂದ ಬಂದಿರುವ ಆಯುರ್ವೇದ ಮತ್ತು ಯೋಗ ಮೂಲದ್ದು ಎಂದು ಘಂಟಾಘೋಷವಾಗಿ ಹೇಳಬಹುದು.


ವೃಕ್ಷಾಂತರ


ರಚನೆ: ಹೇಮಂತ್ ಕುಮಾರ್ ಜಿ.

ಸಂಗೀತ: ಡಾ|| ಚೈತನ್ಯ ಸತೀಶ್.

ಶೀರ್ಷಿಕೆ: ಶ್ರೀಯುತ ಸುಚೇಂದ್ರ ಪ್ರಸಾದ್, ರಂಗಭೂಮಿ ಹಾಗೂ ಕನ್ನಡ ಚಿತ್ರರಂಗದ ಕಲಾವಿದರು.


ಅದಾಗುತದಿದಾಗುತದೆಂದು ಕಾಲ್ಪನಿಕತೆಯಲಿ ಹೆದರೆದರಿ ಸಾಯುವುದನ್ನು ಬಿಟ್ಟು ವರ್ತಮಾನದಲಿ ಕಾಲನ ನಡೆಯ ಪ್ರಕೃತಿಯ ನೈಜತೆಯ ಗಮನಿಸೆ ಕೆಮ್ಮ ತೊಳಲಾಟಕ್ಕೆಮ್ಮ ಕರ್ಮಜನಿತ ಮನೋವಿಕಲ್ಪಗಳು ಮೂಲ ಕಾರಣವನರಿತು ಸ್ವಯಂವೈದ್ಯರಾಗಿರಿ ಮಹಾವೈದ್ಯನನಟ್ಟಿರಿ.


ತಿಳುವಳಿಕೆಯೇ ಅರವಳಿಕೆಯ ತಗ್ಗಿಪುದು ಮರವಳಿಗಳ ಬಳಸೋಣ ಮರವಳಿಯದಂತೆ ಜೀವಿಯೂ ವಸ್ತುವೂ ಅಲ್ಲದ ಮಿಶ್ರ ಚೇತನವದೇ ವೈರಾಣುವದನು ನೆನೆನೆನೆದು ಹೈರಾಣಾಗದಿರಿ ಮೂಲದಲಿ ಜೀವಾಂಶವಿಲ್ಲವೈ ಅದರಲಿ ಕೇವಲ ರಾಸಾಯನಿಕ ಸಂಕೀರ್ಣ ಜಡವದರ ಮೂಲ ನಮ್ಮಯ ಜೀವಕೋಶವೆಂಬುದು ಸತ್ಯ.


ಮಲಿನ ಮನದಿಂ ಪ್ರೇಷಿತವಾಗಿ ಪ್ರಕೃತಿಯು ತಾಟಕಿಯಾಗಿ ದುಸ್ತರಂಗದಿಂ ಚೋದಿತವಾಗಿ ಬರ್ಪುದದು ನಮ್ಮ ಜೀವಕೋಶದಿಂದ ಹೊರಗೆಮ್ಮ ಜೀವಾಂಶದಿಂ ಊರ್ಜೆಯಿಂ ಜೀವಿಪ ಕೋವಿದರವರು ಕಫದಾಟವದು ತ್ರಿದೋಷಗಳನರಿಯಿರೈ ನುರಿತ ಭಿಷಗ್ರತ್ನರನು ಹುಡುಹುಡುಕಿ ಪಡೆಯಿರೈ ಚಿಕಿತ್ಸೆಯನು.


ಭ್ರಷ್ಟತೆಯನೇ ತಮ್ಮ ಜೀವನಾಧಾರ ಮಾಡಿಕೊಂಡಿರುವ ಕಫವನರಿಯದ ಕಪಿಗಳದಕೇನು ತೇಪೆ ಹಾಕಿಯಾರು? ಮನೆ-ಮನಗಳಲಿ ಮದ್ದಿದೆ ಪ್ರಕೃತಿಗೆ ಶರಣಾಗೈ ತೋರ್ಪುದು ರೋಗ-ರುಜಿನ-ಸಾವು-ನೋವುಗಳನು ನೋಡಿಯಾದರೂ ಭ್ರಷ್ಟತೆಯ ಬಿಡುಬಿಡುಬಿಡೆಂದು ಕಲಿರಾಕ್ಷಸರ ಪ್ರಾರ್ಥಿಸೋಣ ರಕ್ಷಕರಾಗಿ ಭಕ್ಷಕರಾಗದಿರೆಂದು.


ವೇದವಿಜ್ಞಾನದಲ್ಲಿ ಸೂಕ್ಷ್ಮ ಜೀವಜಗತ್ತು


ಸೂಕ್ಷ್ಮ ಜೀವಿಗಳ ಬಗ್ಗೆ, ಅದರಲ್ಲೂ ವೈರಾಣುವಿನ ಬಗ್ಗೆ ಆಧುನಿಕ ವಿಜ್ಞಾನಕ್ಕೆ ತಿಳಿದಿರುವುದು ಅತ್ಯಲ್ಪ ಎಂಬುದು ಈಗಿನ ಪರಿಸ್ಥಿತಿಯಿಂದ ಸಿದ್ಧವಾಗಿದೆ. ಕೊರೋನಾ ಅಂದರೇನು? ಪ್ರತಿಯೊಂದು ಜೀವಿಯಲ್ಲೂ ಜೀವ ಸಂತುಲನ ಕಾರ್ಯದಲ್ಲಿ ಸಂಕ್ರಮಿಸುವ ವೈರಾಣುಗಳು ಹಲವಿರುತ್ತವೆ. ಮಾನವ ದೇಹದಲ್ಲಿ ಬೇರೆ ಭಿನ್ನ ಕಾರ್ಯ ಕುಶಲತೆ ಹೊಂದಿದ ವೈರಾಣುಗಳು ಒಟ್ಟು ೧೭೨ ಇವೆ. ಇವೆಲ್ಲವನ್ನೂ ಸೂಕ್ಷ್ಮದರ್ಶಕಾದಿಗಳ ತಯಾರಿಯಿಂದ ಆರಂಭಿಸಿ ಅವುಗಳ ಚರ್ಯೆ, ಪ್ರಭಾವ ಮತ್ತು ಅವುಗಳ ಸೋಂಕಿಗೆ ಚಿಕಿತ್ಸಾದಿಗಳನ್ನು ಪ್ರಾಯೋಗಿಕವಾಗಿ ಸಿದ್ಧಪಡಿಸಿದ ಮೊತ್ತಮೊದಲ ಖ್ಯಾತಿ ಆತ್ರೇಯರೆಂಬ ಋಷಿಗಳಿಗೆ ಸಲ್ಲುತ್ತದೆ. ಆತ್ರೇಯರ ಗುಂಪು ಋಗ್ವೇದದ ಮಂತ್ರಗಳ ಆಧಾರದಲ್ಲಿ ಸಂಶೋಧಿಸಿ ಪುರಾತನ ಆತ್ರೇಯ ಸಂಹಿತೆಯಲ್ಲಿ ದಾಖಲಿಸಿದ್ದಾರೆ ಎಂದು ಚಿಕ್ಕಮಗಳೂರಿನ ವೇದ ವಿಜ್ಞಾನ ಮಂದಿರದ ಪೂರ್ವೋತ್ತರೀಯ ಮೀಮಾಂಸಕರೂ, ವೇದೋಕ್ತ ವೈದ್ಯಪದ್ಧತಿಯ ಪುನರುತ್ಥಾನಕ್ಕೆ ಶ್ರಮಿಸುತ್ತಿರುವ ಆರು ಸಂವತ್ಸರ ಚಕ್ರಗಳನ್ನು ಮೀರಿದ ಸ್ಮೃತಿಯನ್ನು ಕಾಪಾಡಿಕೊಂಡುಬಂದಿರುವ ನಮ್ಮ ಗುರುಗಳಾದ ಬ್ರಹ್ಮ ಋಷಿ ಕೆ.ಎಸ್. ನಿತ್ಯಾನಂದರ ಅಂಬೊಣ.


ವೈರಾಣುಗಳು ಗುಣ, ಧರ್ಮ, ಶೀಲ, ಕರ್ತವ್ಯ ಹೊಂದಿ ಕರ್ತವ್ಯ ನಿಷ್ಠವಾಗಿರುತ್ತವೆ. ಅದರಲ್ಲಿಯೇ ಒಂದು ಬಗೆ “ಕೊರೋನಾ” ಜೀವಸ್ನೇಹಿಯಾಗಿತ್ತು. ಆದರೆ ಏನಕೇನ ಪ್ರಕಾರೇಣ ಅದು ಜೀವ ವಿರೋಧಿಯಾಗಿ ಪರಿವರ್ತಿತವಾಗಿ “ಕೊರೋನಾ” ಎಂದು ನಾಮಕರಣಗೊಂಡು ಮಾನವ ಶತ್ರುವಾಗಿದೆ. ಜೀವಸ್ನೇಹಿಯಾದ ಯಾವುದೋ ಒಂದು ಜೀವಪ್ರಭೇದದಲ್ಲಿ ಜನ್ಮ ಪಡೆದು ಮಾನವನಿಗೆ ಶತ್ರುವಾಗಿ ಬಂದು ಮರಣಾಂತಿಕವಾಗಿ ಕಾಡುತ್ತಿದೆ ಎಂದರೆ ಕಾರಣವೇನು? ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಚಾರವಿದು. ಮೊದಲಾಗಿ ಮಾನವ ತನ್ನ ಜೀವನ ಪದ್ಧತಿಯನ್ನು ವಿಕೃತಗೊಳಿಸಿಕೊಂಡಿದ್ದಾನೆ. ಆಹಾರ, ವಿಹಾರ, ಚಟುವಟಿಕೆಗಳಲ್ಲಿ ಸಂಪೂರ್ಣ ಬದಲಾಗಿದ್ದಾನೆ. ಮಾನವೀಯ ನೆಲೆಗಟ್ಟಿನ ಜೀವನದ ಪರಿವೆಯೇ ಇಲ್ಲದೆ ಪಶುವಿನಂತೆ ವರ್ತಿಸುತ್ತಿದ್ದಾನೆ. ಸಹಜ ಭಾರತೀಯ ಜೀವನಪದ್ಧತಿ ಪೂರ್ಣ ಮರೆತು ತಾನು ಬದುಕಿರುವುದೇ ಮೆರೆಯುವುದಕ್ಕಾಗಿ ಎಂಬ ಮೂರ್ಖತನ ಮೆರೆಯುತ್ತಿದ್ದಾನೆ. ಭ್ರಷ್ಟತೆ ಅಥವಾ ಅಪ್ರಾಮಾಣಿಕತೆಯೇ ಕೊರೊನಾಗೆ ಅನ್ನ! ಅದರಿಂದಲೇ ಜೀವ ಪಡೆದು ವೃದ್ಧಿಸಿ ಕಾಡುತ್ತದೆ ಎನ್ನುತ್ತದೆ ಭಾರತೀಯ ಅಧ್ಯಾತ್ಮ.


ಕೊರೋನಾ ಕ್ರಿಮಿಯಲ್ಲ, ಅದು ಇನ್ನೂ ಸೂಕ್ಷ್ಮವಾದ ಜೀವಿ. ಹಾಗಾಗಿ ಅದಕ್ಕೆ ಕ್ರಿಮಿಘ್ನ ಎನ್ನುವ ವಿಚಾರವೇ ಅನ್ವಯವಾಗುವುದಿಲ್ಲ. ಮೊದಲ ಅಲೆಯಲ್ಲಿ ಬಂದದ್ದೇ ಬೇರೆ, ಎರಡನೆಯ ಅಲೆಯಲ್ಲಿ ಬಂದಿರುವುದೇ ಬೇರೆ ಜೀವಿ. ಭ್ರಷ್ಟತೆ-ಅಪ್ರಾಮಾಣಿಕತೆಯುಳ್ಳ ಔಷಧ, ಅನುಷ್ಠಾನ, ಪ್ರಯೋಗ ಇತ್ಯಾದಿಗಳಾವುದೂ ಇದರ ಮೇಲೆ ಕೆಲಸ ಮಾಡುವುದಿಲ್ಲ ಎನ್ನುತ್ತದೆ ವೇದ ವಿಜ್ಞಾನದ ಸಂಶೋಧನೆ!


ದಿನಕ್ಕೊಂದು ಹೇಳಿಕೆ ಕೊಡುತ್ತಿರುವ ಈಗಿನ ವಿಜ್ಞಾನದ ಮೂಲ ಪರಿಭಾಷೆಯಲ್ಲಿ ವೈರಸ್ ಎಂಬುದು ಜಡ ಅಥವಾ ಮಲದಂತಹಾ ರಾಸಾಯನಿಕ ಸಂಕೀರ್ಣ ಎಂದಾಗುತ್ತದೆಯೇ ಹೊರತು ಅದೊಂದು ಜೀವಿಯಂದು ಸಾಧಿಸಲಾಗಿಲ್ಲ, ಏಕೆಂದರೆ "ಜೀವ", "ಪ್ರಾಣ", "ಆತ್ಮ"ಗಳ ವ್ಯಾಖ್ಯಾನವು ಈಗಿನ ವಿಜ್ಞಾನಕ್ಕೆ ನಿಲುಕದ ವಿಚಾರಗಳು.


ಋಷಿ-ಮುನಿಗಳು ಸುಮ್ಮನೆ ಕುಳಿತಿಲ್ಲ. ಸತ್ಪ್ರಜಾವೃದ್ಧಿಗೆ ರಾಜಸೂಯ ಸೋಮ ಯಾಗ ನಡೆದಿದೆ. ವೈಧಿಕ ತಂತ್ರಗಳಿಂದ ಆಕರ್ಷಣಾ ಪ್ರಯೋಗವು ನಡೆದಿದೆ. ಮೊದಲ ಅಲೆ ಬಂದಾಗ ಆಕರ್ಷಿಸಲು ಅದು ೩೦% ಮಾತ್ರ ಉಳಿದುಕೊಂಡಿತು. ಎರಡನೆಯ ಅಲೆ ಬಂದ ಮೇಲೆ ಆಕರ್ಷಣೆ ನಡೆಯುತ್ತಿದೆ. ಇದೀಗ ಹೊಸಾ ವೈರಾಣು ಪಡೆಯನ್ನೂ ೪೦% ಆಕರ್ಷಿಸಿ ಸ್ಥಂಭಿಸಲಾಗಿದೆ. ಅಂತಹಾ ಋಷಿ-ಮುನಿ-ದೇವತೆಗಳ ವಚನದಂತೆ, "ಭ್ರಷ್ಟತೆ" ಬಿಟ್ಟು ಎಲ್ಲರೂ ಆಜನ್ಮ ಪರ್ಯಂತ "ಪ್ರಾಮಾಣಿಕತೆ"ಯನ್ನು ಅನುಸರಿಸಿದರೆ ಮಾತ್ರ ಸಾವುನೋವುಗಳ ಸಂಖ್ಯೆ ಕುಗ್ಗುತ್ತದೆ ಎನ್ನುತ್ತಾರೆ. ಇಲ್ಲದಿದ್ದರೆ ನಾವೇ ನಮ್ಮ ನಾಶ ಮಾಡಿಕೊಂಡಂತೆ. ಪ್ರಾಮಾಣಿಕರಾದಾಗ ಮಾತ್ರ ಈ ಸಮಗ್ರ ಸ್ವಾಸ್ಥ್ಯ ವಿಜ್ಞಾನವು ಉಪಯೋಗಕ್ಕೆ ಬರುತ್ತದೆ.


ಆಯುರ್ವೇದದ ಸಂಬಂಧದಲ್ಲಿ ಮುಂದಿನ ನಿಶ್ಚಿತ ಸ್ವರೂಪ


ಪ್ರತಿಯೊಬ್ಬ ರೋಗಿಗೆ ದೋಷ-ಸಂಗತ ಚಿಕಿತ್ಸೆ ನೀಡುವುದು ಹಾಗೂ ಚಿಕಿತ್ಸಕರು ರೋಗಗಳಿಗೆ ತಾವೇ ಔಷಧ ತಯಾರಿಸಲು ಸಮರ್ಥರಾಗಿರುವುದು ಅವಶ್ಯಕವಾಗಿದೆ. ಆಗಲೇ ಚಿಕಿತ್ಸೆಯು ಜವಾಬ್ದಾರಿಯುತವಾಗಲು ಸಾಧ್ಯ. ಇದನ್ನು ಎರಡು ರೀತಿಯಿಂದ ಗುರುತಿಸಬಹುದು -


೧. ಪ್ರತಿ ಹಳ್ಳಿ/ಕಾಡಿನಲ್ಲಿ ವಾಸಿಸುವ ಜನರ ಪರಂಪರಾಗತ ವಿಧಿಗಳು, ಚಿಕಿತ್ಸೆಯ ಸಫಲತೆಯ ಅರ್ಥದಲ್ಲಿ ಆಕಲನ, ಸಂಕಲನ, ಪ್ರೋತ್ಸಾಹನ, ಪರಿಷ್ಕರಣೆ, ಪರಿವರ್ಧನಾ ಕಾರ್ಯಕ್ರಮಗಳು ಪ್ರತಿ ಗ್ರಾಮ ಸಭೆಯಲ್ಲಿ ಸಮಾಹಿತವಾಗಿರುವುದು ಅವಶ್ಯಕವಾಗಿದೆ. ಆಗಲೇ ಚಿಕಿತ್ಸಾ-ಪದ್ಧತಿಯು ಸಾರ್ವಜನಿಕವಾಗಲು ಸಾಧ್ಯ.


೨. ಅತ್ಯಾಧುನಿಕ ಪ್ರಚಲಿತ ಪ್ರಣಾಳಿಕೆಯ ಅನುಸಾರ ಚಿಕಿತ್ಸಾ-ಪದ್ಧತಿಯು ವ್ಯಾಪಾರದ ಕಬಂದಕ್ಕೆ ಸಿಲುಕಿದೆ. ಒಂದುವೇಳೆ ಮಾನವ ಕಲ್ಯಾಣ ಬೇಕೆಂದಿದ್ದರೆ ಇದಕ್ಕೆ ಮುಕ್ತಿ ಕೊಡಿಸುವುದು ಅವಶ್ಯಕವಾಗಿದೆ!


ಬಂಡವಾಳಶಾಹಿ ಚಿಕಿತ್ಸಾ ಪದ್ಧತಿಗೆ ಮುಕ್ತಿ ಹೇಗೆ?


ಮೊತ್ತಮೊದಲು ಮನೆ-ಮನೆಯಲ್ಲಿ ಯಾವ ಚಿಕಿತ್ಸೆಗಳ ಜ್ಞಾನವಿದೆಯೋ, ಅದನ್ನು ಸಮೃದ್ಧಗೊಳಿಸುವುದು ಹಾಗೂ ಉತ್ಸಾಹಿತಗೊಳಿಸುವುದು. ನಂತರದಲ್ಲಿ ಹಳ್ಳಿ/ಗಲ್ಲಿ/ಕಾಡಿನಲ್ಲಿ ಪರಂಪರಾಗತ ಚಿಕಿತ್ಸಾ-ಪದ್ಧತಿ, ಔಷಧಿಗಳು, ಗಿಡಮೂಲಿಕೆಗಳನ್ನು ಗುರುತಿಸುವ ಕ್ರಮದ ಪ್ರೋತ್ಸಾಹ ಹಾಗೂ ಸಮೃದ್ಧಿ ಅವಶ್ಯಕ. ಸಮೃದ್ಧಗೊಳಿಸುವ ಕ್ರಮದಲ್ಲಿ ಈ ೬ ಭಾಗಗಳು ಬರುತ್ತವೆ:-


೧. ಔಷಧಿಯನ್ನು ಗುರುತಿಸುವುದು

೨. ಔಷಧಿಯ ಬಲಾಬಲವನ್ನು ಗುರುತಿಸುವುದು

೩. ರೋಗವನ್ನು ಗುರುತಿಸುವುದು

೪. ರೋಗದ ಬಲಾಬಲವನ್ನು ಗುರುತಿಸುವುದು

೫. ಔಷಧಿಯ ಜೊತೆಗೆ ಅನುಪಾನವನ್ನು ಗುರುತಿಸುವುದು

೬. ರೋಗದ ಅನುಸಾರ ರೋಗಿಗಳ ಪಥ್ಯಾಪಥ್ಯವನ್ನು ಗುರುತಿಸುವುದು


ಈ ೬ ವಿಧಿಗಳನ್ನು ಪ್ರೋತ್ಸಾಹಿಸುವ ಅವಶ್ಯಕತೆ ಇದೆ. ಇದರಿಂದ ಹಳ್ಳಿ, ಗಲ್ಲಿ, ಕಾಡಿನಲ್ಲಿರುವ ಔಷಧಿಗಳ, ಚಿಕಿತ್ಸಾ ತಂತ್ರದ ಪ್ರೋತ್ಸಾಹವು ಸಹಜವಾಗುತ್ತದೆ. ಅದೇ ಮುಖ್ಯ ಉದ್ದೇಶ. ಸಾಮಾನ್ಯವಾಗಿ ಸಮೂಹ ಮಾಧ್ಯಮಗಳಲ್ಲಿ ಹೀಗೆ ಕೇಳಲು ಸಿಗುತ್ತದೆ - ಬಿಸಿಲಿನಿಂದ ಬಸವಳಿದರು, ಸರ್ಕಾರ ಸರಿಪಡಿಸಬೇಕು; ತಂಡಿಯಿಂದ ತೊಂದರೆಯಾಯಿತು, ಸರ್ಕಾರ ಸರಿಪಡಿಸಬೇಕು; ಮಳೆಯಿಂದ ಹಾನಿಯಾಯಿತು, ಸರ್ಕಾರ ಸರಿಪಡಿಸಬೇಕು. ಆದರೆ ಪ್ರಜಾಪ್ರಭುತ್ವದಲ್ಲಿ ಸರ್ಕಾರವೆಂದರೆ ಯಾರು? ಪ್ರಜೆಗಳೇ ತಾನೇ? ಎಲ್ಲೋ ಮೇಲೆ ಕುಳಿತವರು ಎಲ್ಲವನ್ನೂ ಮಾಡಲು ಸಾಧ್ಯವೇ ಇಲ್ಲ. ಹಾಗಾಗಿ ಇಲ್ಲಿ ತಿಳಿಸಿರುವ ೬ ವಿಧಿಗಳನ್ನು ಜನರು ಬಳಕೆಯಲ್ಲಿ ತರುವುದರಿಂದ ವರ್ತಮಾನದ ಶಕ್ತಿ ಕೇಂದ್ರಿತ ಶಾಸನದ ತಲೆನೋವು ಕಡಿಮೆಯಾಗಬಹುದು. ಸರ್ಕಾರವು ಪರಂಪರಾಗತ ಚಿಕಿತ್ಸಾ ಜ್ಞಾನವನ್ನು ಮೊಟಕುಗೊಳಿಸದೆ ಪ್ರೋತ್ಸಾಹಿಸಿದರೆ ಸಾಕು, ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತದೆ.


ಆಯುರ್ವೇದವು ಹೆಚ್ಚು ಆಯಸ್ಸಿನವರೆಗೆ ಬದುಕುವುದಕ್ಕಾಗಿ ಔಷಧಿ ಕೃತ್ಯಗಳನ್ನು ಯೋಚಿಸಿತು. ಇದನ್ನು ಮೂರು ವರ್ಗೀಕರಣ ಮಾಡಿತು :-


೧. ಔಷಧಿ

೨. ಮಹಾ ಔಷಧಿ

೩. ದಿವ್ಯ ಔಷಧಿ


ಇದರ ಮೂಲ ಸೂಚಿಯು ಚರಕ ಸಂಹಿತೆಯ ಅನುಸಾರ ಯೋಚಿಸುವ ನಿಘಂಟುವಿನಲ್ಲಿದೆ; ಉದಾ - ಭಾವಪ್ರಕಾಶ ನಿಘಂಟು. ಇದರ ಆಧಾರದಲ್ಲಿ ಔಷಧಿ/ಮಹಾ-ಔಷಧಿ/ದಿವ್ಯ-ಔಷಧಿಯನ್ನು ಗುರುತಿಸಬೇಕು. ಈಗ ಯಾರು ಗುರುತಿಸಬೇಕು? ಎಂಬ ಪ್ರಶ್ನೆ ಬರುತ್ತದೆ. ಇದಕ್ಕೆ ಮೊತ್ತಮೊದಲು ವನ ವಿಭಾಗವನ್ನು ತಿಳಿಯಬೇಕು, ಸಂರಕ್ಷಣೆ ಮಾಡಬೇಕು, ಏಕೆಂದರೆ ಸರ್ವಾಧಿಕ ಔಷಧಿಗಳು ಕಾಡಿನಲ್ಲಿಯೇ ಇರುವುದು.


ಮಧ್ಯಸ್ಥ ದರ್ಶನದ ರೂವಾರಿಗಳಾದ ದಿ|| ಏ. ನಾಗರಾಜರ ಅನುಭವದ ನುಡಿಯನ್ನು ನೋಡೋಣ. ಅವರು ಮಧ್ಯಪ್ರದೇಶದ ಅಮರಕಂಟಕದಲ್ಲಿ ಪರಿವಾರ ಸಮೇತ ೧೯೫೦ರಲ್ಲಿ ಇದ್ದರು. ಅಲ್ಲಿ ಗಾಯತ್ರೀ-ಸಾವಿತ್ರೀ ಎಂಬೆರಡು ನಾಲೆಗಳಿವೆ. ಈ ನಾಲೆಗಳಲ್ಲಿ ೧೯೫೦ನೇ ಇಸವಿಯಿಂದ ಜಲಪೀಪಲ್ ಎಂಬ ದಿವ್ಯ ಔಷಧಿಯನ್ನು ಗುರುತಿಸಿದ್ದರು. ಇದು ಬಹಳ ಪ್ರಮಾಣದಲ್ಲಿ ಬೆಳೆಯುತ್ತಿತ್ತು. ೧೯೭೦ರ ನಂತರ ನಾಲೆಗಳು ಬತ್ತಿಹೋದವು, ಈ ದಿವ್ಯ ಔಷಧಿಯು ಲುಪ್ತವಾಯಿತು. ಇದನ್ನು ಚೆನ್ನಾಗಿ ಗಮನಿಸಲಾಯಿತು. ಇದೇ ರೀತಿ ಕಾಡುಗಳಲ್ಲಿ ಕೃಷ್ಣ ಕಾಪೋತೀ ಎಂಬ ದಿವ್ಯ ಔಷಧವಿರುತ್ತಿತ್ತು, ಅದೂ ಲುಪ್ತವಾಯಿತು. ಹೀಗೆ ೨೦-೨೨ ಔಷಧಿಗಳು/ಮಹಾ ಔಷಧಿಗಳು/ದಿವ್ಯ ಔಷಧಿಗಳ ವರ್ಗವನ್ನು ಅವರು ತಿಳಿದಿದ್ದರು, ಅವೆಲ್ಲವೂ ಲುಪ್ತವಾದವು. ಈ ಅಧಾರದಲ್ಲಿ ಅವರಿದ್ದ ಸ್ಥಳದಲ್ಲೇ ಅಷ್ಟು ಲುಪ್ತತೆಯನ್ನು ಗಮನಿಸಿದ ಅವರು, ಇನ್ನು ಬೇರೆ ಸ್ಥಳಗಳಲ್ಲಿ ಎಷ್ಟು ಲುಪ್ತವಾಗಿರಬಹುದೋ? ಅದು ಸ್ವಾಭಾವಿಕ ಎನ್ನುತ್ತಿದ್ದರು. ಅಂದರೆ ಬಳಕೆಗೆ ಬೇಕಾದಾಗ ಮೂಲಿಕೆಯ ಹುಟ್ಟು, ಬೇಡವೆಂದಾಗ ಅದರ ನಾಶವನ್ನು ಪ್ರಕೃತಿಯು ನಿರಂತರವಾಗಿ ಮಾಡುತ್ತಿರುತ್ತದೆ. ನಿಮಗೊಂದು ರೋಗ ಬರುವುದಿದೆ ಎಂದರೆ ನಿಮ್ಮ ಹಿತ್ತಲಿನಲ್ಲೇ ಮದ್ದಿನ ಗಿಡವನ್ನು ಪ್ರಕೃತಿಯು ಮೊದಲೇ ಹುಟ್ಟಿಸಿರುತ್ತದೆ ಎಂಬುದು ಆಯುರ್ವೇದದ ಜನಜನಿತ ಸತ್ಯ. ಸೋಗಿನ ಜೀವನ ಬಯಸುವ ನಮ್ಮ ಜನರು ಅದರ ಮಹತ್ವವನ್ನು ತಿಪ್ಪೆಗೆ ಎಸೆದಾಗ ಅವರ ವಿಡಂಬನೆಗೆ "ಹಿತ್ತಲ ಗಿಡ ಮದ್ದಲ್ಲ" ಎಂಬ ಗಾದೆ ಬಳಕೆಗೆ ಬಂದಿತು.

ಸಾರ್ವತ್ರಿಕ ನೆಲೆಗಟ್ಟಿನಲ್ಲಿ ಮೂಲಿಕಾವೃದ್ಧಿಗೆ ಉಪಾಯವೆಂದರೆ "ವನಸಮೃದ್ಧಿ". ಇದಕ್ಕೆ ಋತುಸಂತುಲನ ಅವಶ್ಯಕ. ಋತು ಸಂತುಲನಕ್ಕಾಗಿ ವನ-ಖನಿಜದ ನಿಶ್ಚಿತ ಅನುಪಾತ ಅವಶ್ಯಕ. ವನ-ಖನಿಜಗಳ ಸಂತುಲನಕ್ಕಾಗಿ ಮಾನವ ಪರಂಪರೆಯ ಕರ್ತವ್ಯವಿದೆ. ಇದಕ್ಕೆ ವಿಪರೀತವಾಗಿ ಮಾನವ ಜೀವಚೇತನದಲ್ಲಿ ಬದುಕುತ್ತಾ ಎಲ್ಲಾ ಅಕ್ರಮ ಕೃತ್ಯಗಳನ್ನು ಸಕ್ರಮವೆಂದರು. ಫಲಸ್ವರೂಪದಲ್ಲಿ ಧರಣಿಯು ರೋಗಗ್ರಸ್ಥವಾಯಿತು. ಈಗಿನ ಸ್ಥಿತಿಯಲ್ಲಿ ಧರಣಿಯನ್ನು ಸಂತುಲಿತವಾಗಿರಿಸುವುದು ಆದ್ಯ ಕರ್ತವ್ಯ. ಇದರಲ್ಲಿ ಎಲ್ಲಾ ದೇಶವಾಸಿಗಳಿಗೆ ಸಮಾನ ಕರ್ತವ್ಯವಿದೆ, ಏಕೆಂದರೆ ಎಲ್ಲಾ ದೇಶವಾಸಿಗಳ ಸಹಮತದಿಂದಲೇ ಧರಣಿಯನ್ನು ರೋಗಗ್ರಸ್ಥವನ್ನಾಗಿಸಲಾಗಿದೆ. ಹಾಗಾಗಿ ವನ, ವನಸ್ಪತಿ, ಔಷಧಿಗಳನ್ನು ಸಮೃದ್ಧವಾಗಿಸಲಿಕ್ಕಾಗಿ ಆಯುರ್ವೇದದ ಜ್ಞಾನವು ಲೋಕವ್ಯಾಪೀಕರಣ ಆಗುವ ಅನಿವಾರ್ಯತೆ ಇದೆ. ಗೃಹ ಚಿಕಿತ್ಸಾ ಪದ್ಧತಿಯನ್ನು ಸುನಿಶ್ಚಿತಗೊಳಿಸುವುದು, ಹಳ್ಳಿ-ಗಲ್ಲಿಗಳಲ್ಲಿ ಪರಂಪರಾಗತ ಚಿಕಿತ್ಸಾ ಪದ್ಧತಿಯನ್ನು ಪ್ರೋತ್ಸಾಹಿಸುವುದು, ವಿಶೇಷ ರೀತಿಯ ರೋಗಗಳಲ್ಲಿ ವಿಶೇಷಜ್ಞರನ್ನು ಆಶ್ರಯಿಸುವ ವ್ಯವಸ್ಥೆ ಕಲ್ಪಿಸುವುದು ಅನಿವಾರ್ಯ. ಮೂಲರೂಪದಲ್ಲಿ ವರ್ತಮಾನದಲ್ಲಿ ಯಾವ ವ್ಯವಸ್ಥೆಯ ಅಧಿಕಾರಿಗಳಿದ್ದಾರೋ, ಲೋಕಸಭೆ/ರಾಜ್ಯಸಭೆ/ವಿಧಾನಸಭೆ, ಇವುಗಳ ಅಂಗ-ಪ್ರತ್ಯಂಗದ ರೂಪದಲ್ಲಿ ಶಕ್ತಿ ಕೇಂದ್ರಿತ ಶಾಸನವು ಯೋಚಿಸಬೇಕಿದೆ. ಈ ತಥ್ಯಗಳ ಆಧಾರದಲ್ಲಿ, ಈ ಮೂರರ ದಾಯಿತ್ವವೇನೆಂದರೆ ಆಯುರ್ವೇದವು ಲೋಕಕ್ಕೆ ಸುಲಭವಾಗಿರಲಿ, ವ್ಯಾಪಾರವಾಗಿರದಿರಲಿ. ವ್ಯಾಪಾರದ ಬಲೆಗೆ ಸಿಕ್ಕಿ ಸಾಮಾನ್ಯ ಜನರು ಕಲುಷಿತರಾಗದಿರಲಿ.


ಆಯುರ್ವೇದದ ವಿಚಾರದಲ್ಲಿ ವೈದ್ಯರೂ ಜನರೂ ಏನು ಮಾಡಬೇಕಿದೆ?


ಆಯುರ್ವೇದದ ಅನುಸಾರ, ಅಥವಾ ಸಾಮಾನ್ಯ ಜನಮಾನಸದ ಅನುಸಾರ, ಎಲ್ಲರಿಗೂ ಹೆಚ್ಚು ಆಯಸ್ಸಿನವರೆಗೆ ಬದುಕುವ ಇಚ್ಛೆ ಇದೆ. ಇದಕ್ಕಾಗಿ ಪ್ರತಿಯೊಬ್ಬ ಮಾನವರಲ್ಲಿ ನಿಹಿತ ಸದ್ಬುದ್ಧಿಯ ಅಪೇಕ್ಷೆಯನ್ನು ಪ್ರೋತ್ಸಾಹಿಸುವ ಅವಶ್ಯಕತೆ ಇದೆ. ಇದರರ್ಥ ಏನಾಯಿತೆಂದರೆ, ಆಯುರ್ವೇದದ ಯೋಚನೆ ವಿಚಾರಗಳು, ಚಲಿಸುವ ಮಾನವರ ಅಧ್ಯಯನದಲ್ಲಿ ಬಳಕೆಯಾಗುವ ಅವಶ್ಯಕತೆ ಇದೆ. ಮಾನವರು ತಮ್ಮ ಯೋಚನಾ-ವಿಚಾರ ರೂಪೀ ಶಕ್ತಿಗಳಿಂದ ಉಪಯೋಗ, ಸದುಪಯೋಗ, ಪ್ರಯೋಜನಶೀಲರಾಗುವ ನಿಶ್ಚಿತ ವಿಧಿವಿಧಾನಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ.


ಮಾನವ ಪರಿಭಾಷೆಯ ಅನುಸಾರ ಮನಃ ಸ್ವಸ್ಥತೆಯ ಅರ್ಥದಲ್ಲಿಯೇ ಮಾನವರು ತಮ್ಮ ಸಂಪೂರ್ಣ ಶಕ್ತಿಯ ಉಪಯೋಗ, ಸದುಪಯೋಗ, ಪ್ರಯೋಜನಶೀಲರಾಗಲು ಸಮರ್ಥರಾಗುವ ವ್ಯವಸ್ಥೆ ಇದೆ. ಇದು ಮೂಲತಃ ತನ್ನ ಮೇಲೆ ತಾನು ವಿಶ್ವಾಸವಿಡುವುದರ ಮೇಲೆ ಆಧಾರಿತವಾಗಿದೆ. ತನ್ನಲ್ಲಿ ತನಗೆ ವಿಶ್ವಾಸವು ತನ್ನಲ್ಲಿಯೇ ಆರು ಬಿಂದುಗಳಲ್ಲಿ ವರ್ಣಿತವಾಗಿದೆ (ವಿಕಲ್ಪಾತ್ಮಕ ಅಧ್ಯಯನದಲ್ಲಿ). ಈ ತನ್ನಲ್ಲಿನ ವಿಶ್ವಾಸ, ಶ್ರೇಷ್ಠತೆಯ ಸಮ್ಮಾನದ ರೂಪದಲ್ಲಿ ಪ್ರಮಾಣಿತವಾಗುತ್ತದೆ. ಜೊತೆಗೆ ಪ್ರತಿಭೆ ಮತ್ತು ವ್ಯಕ್ತಿತ್ವದಲ್ಲಿ ಸಂತುಲನ ರೂಪದಲ್ಲಿ ಪ್ರಮಾಣಿತವಾಗುತ್ತದೆ. ವ್ಯವಹಾರದಲ್ಲಿ ಅಖಂಡ ಸಮಾಜ, ಸಾರ್ವಭೌಮ ವ್ಯವಸ್ಥೆ, ವ್ಯಾಖ್ಯೆಯ ರೂಪದಲ್ಲಿ ಪ್ರಮಾಣಿತವಾಗುವುದು, ವಾಸ ಮತ್ತು ವ್ಯವಸಾಯದಲ್ಲಿ ಸ್ವಾವಲಂಬಿಗಳಾಗಿರುವ ರೂಪದಲ್ಲಿದೆ (ಉತ್ಪಾದನಾ ಕಾರ್ಯವನ್ನು ಪ್ರತಿಯೊಂದು ಪರಿವಾರವು, ಪರಿವಾರದ ಅವಶ್ಯಕತೆಗಿಂತ ಹೆಚ್ಚು ಉತ್ಪಾದನೆ ಮಾಡುವ ರೂಪದಲ್ಲಿ). ಹೀಗಿದ್ದರೆ ತನ್ನಲ್ಲಿ ತಾನು ವಿಶ್ವಾಸವುಳ್ಳ ವ್ಯಕ್ತಿಯಿಂದ ಉಪಕಾರವಾಗುವುದು ಸಹಜ.


ಉಪಕಾರ-ವಿಧಿಯಿಂದಲೇ ಆಯುರ್ವೇದದ ಯೋಚನೆ-ಚಿಂತನೆ ಕರತಲಾಮಲಕವಾಗುತ್ತದೆ. ಪ್ರತಿದಿನದ ಪರಿಸ್ಥಿತಿಯಲ್ಲಿ, ರೋಗಿಗಳೊಂದಿಗೆ ನಿರೀಕ್ಷಣೆ, ಪರೀಕ್ಷಣೆ, ಸರ್ವೇಕ್ಷಣೆ; ಉಪಾಯದಲ್ಲಿ ಉಪಚಾರಕ್ಕಾಗಿ ವನೌಷಧಿಗಳ, ಖನಿಜೌಷಧಿಗಳ ನಿರೀಕ್ಷಣೆ, ಪರೀಕ್ಷಣೆ, ಸರ್ವೇಕ್ಷಣೆಯ ಅವಶ್ಯಕತೆ ಇದೆ. ಇದರಲ್ಲಿ ಪ್ರವೃತ್ತಿ, ಇಲ್ಲಿಯವರೆಗೆ ಮಾಡಿದ ಉಪಚಾರ - ವಿಧಿ, ಪರಿವಾರದಿಂದ ಲುಪ್ತವಾಯಿತು. ಪರಂಪರಾಗತ ಚಿಕಿತ್ಸಾ-ಪದ್ಧತಿಗಳು ಸುವಿಧಾ-ಸಂಗ್ರಹದಲ್ಲಿ ಸಿಲುಕಿಕೊಂಡವು. ಇದರಲ್ಲಿ ಪರಿಷ್ಕರಣೆ ತರುವುದೇ ಅಧ್ಯಯನ ಕಾರ್ಯಕ್ರಮದಲ್ಲಿ ಗುಣಾತ್ಮಕ ಪರಿವರ್ತನೆಯಾಗಿರುತ್ತದೆ. ಇದಕ್ಕಾಗಿ ಮಾನವರ ಅಧ್ಯಯನವಾಗುತ್ತದೆ.


ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಜೀವಿತ ವ್ಯಕ್ತಿಯ ಅಧ್ಯಯನವು ಅವಶ್ಯಕ, ಜೀವಿತ ಮಾನವರಲ್ಲಿ ದೋಷಗಳನ್ನು ಗುರುತಿಸುವ ವ್ಯವಸ್ಥೆಯು ವೇದಗಳಲ್ಲಿ ಮೊದಲು ದಾಖಲಾಗಿದೆ. ವೇದಾಧ್ಯಯನವಿಲ್ಲದೆ ಈ ವಿಚಾರಗಳೆಲ್ಲಾ ಪ್ರಚಲಿತವಾಗಿಲ್ಲ. ನಂತರ ಚರಕಾದಿ ಸಂಹಿತೆಗಳಲ್ಲೂ ಕೆಲವು ವರ್ಣಿಸಲ್ಪಟ್ಟಿದೆ. ದೋಷಗಳ ಸಂತುಲನದ ಆಧಾರದಲ್ಲಿ ನಾಡಿಗಳಲ್ಲಿ ಸಂಕೇತಗಳನ್ನು ಪಡೆಯುವ ಅಭ್ಯಾಸವು ವರ್ಣಿಸಲ್ಪಟ್ಟಿದೆ. ಈ ವಿಚಾರಗಳ ಮೇಲೆ ಗಮನಹರಿಸುವ ಅವಶ್ಯಕತೆ ಇದೆ. ಇದೇ ರೀತಿ ಔಷಧಿಗಳ ವರ್ಗೀಕರಣವಾಗಿದೆ. ಪಿತ್ತದೋಷ, ವಾತದೋಷ, ಕಫದೋಷಗಳನ್ನು ದೂರೀಕರಿಸಲು ಬೇಕಾದ ವನೌಷಧಿಗಳ ವರ್ಗೀಕರಣವು ಹಿಂದೆಯೇ ಆಗಿದೆ. ಇದೇ ರೀತಿ ಖನಿಜ ಔಷಧಿಗಳ ವರ್ಣನೆಯೂ ಆಗಿದೆ. ಇವುಗಳ ಸಂಯೋಗ-ಯೋಗ-ಫಲದಲ್ಲಿ ಅನೇಕ ರಸ-ರಸಾಯನಗಳನ್ನು ತಯಾರಿಸುವ ಉಲ್ಲೇಖವಿದೆ. ಇದನ್ನು ಸರ್ವಜನರಿಗೆ ಸುಲಭವಾಗಿಸುವುದು ಆಯುರ್ವೇದ ವಿಧಿಯತ್ತ ಪ್ರಯತ್ನಶೀಲರಾಗಿರುವ ಪ್ರತಿಯೋಬ್ಬ ವ್ಯಕ್ತಿಯ ಕರ್ತವ್ಯ. ಈ ಕ್ರಮದಲ್ಲಿ ನಾವು ಮಾನವರು ಪ್ರವೃತ್ತರಾಗುವ ಸ್ಥಿತಿಯಲ್ಲಿ ಪ್ರತಿಯೊಂದು ಹಳ್ಳಿ-ಗಲ್ಲಿಯ ಪರಂಪರೆಯಲ್ಲಿ ಋತು ಸಂಬಂಧೀ, ಋತುಕಾಲ ಸಂಬಂಧೀ, ಜಲವಾಯು ಸಂಬಂಧೀ, ನೈಸರ್ಗಿಕ ಸಂಬಂಧೀ, ಆಕ್ರಮಣ-ಸಂಕ್ರಮಣ ಸಂಬಂಧೀ ರೋಗಗಳನ್ನು ಗುರುತಿಸುವ, ಅದನ್ನು ಆಯುರ್ವೇದ ಚಿಕಿತ್ಸಾ ಪೂರ್ವಕ ಶಮನಗೊಳಿಸುವ ಪರಂಪರೆಯನ್ನು ಕಾಯ್ದುಕೊಳ್ಳುವ ಅವಶ್ಯಕತೆ ಇದೆ. ಅಂದರೆ ಆಡುಭಾಷೆಯಲ್ಲಿ ಹೇಳಬೇಕೆಂದರೆ ದುಡ್ಡಿನ ಭೂತ ಹಿಡಿದ ವೈದ್ಯಕೀಯ ವ್ಯವಸ್ಥೆಯನ್ನು ಧಿಕ್ಕರಿಸಿ, ನಿಮ್ಮ ಒಳಿತನ್ನು ಬಯಸುವ ಆಯುರ್ವೇದ ವೈದ್ಯರನ್ನು ನಿಮ್ಮ ಕೌಟುಂಬಿಕ ವೈದ್ಯರನ್ನಾಗಿಸಿಕೊಳ್ಳಿ. ರೋಗ ಬರದಂತೆ ಬದುಕುವ ಕಲೆಯನ್ನು ಅವರಿಂದ ಕಲಿಯಿರಿ. ನೀವು ಈಗ ಆಧುನಿಕ ರೋಗ ಪರೀಕ್ಷೆ, ಚಿಕಿತ್ಸೆ ಇತ್ಯಾದಿಗಳಿಗೆ ಸುರಿಯುತ್ತಿರುವ ಲಕ್ಷಾಂತರ ರೂಪಾಯಿ ಬೇಡ, ಗೌರವಯುತವಾದ ಸಂಭಾವನೆಯನ್ನು ನಿಮ್ಮ ಕೌಟುಂಬಿಕ ಆಯುರ್ವೇದ ವೈದ್ಯರಿಗೆ ನೀವೇ ಕೊಡುತ್ತಿರಿ. ನಿಮ್ಮ ಆಯುರ್ವೇದ ವೈದ್ಯರೊಂದಿಗೆ ಮಾತನಾಡಿ, ನಿಮ್ಮ ಪ್ರದೇಶಕ್ಕೆ ಬೇಕಾದ ಔಷಧೀಯ ಸಸ್ಯಗಳನ್ನು ಬೆಳೆಸಿ. ಎಲ್ಲರಿಗೂ ಅವುಗಳನ್ನು ಬೆಳೆಯಲು ಪ್ರೇರೇಪಿಸಿ. ವೈದ್ಯರ ಮಾರ್ಗದರ್ಶನದಲ್ಲಿ ಮೂಲಿಕಾ ಸಂಗ್ರಹ, ಪರಿಷ್ಕರಣೆ ಮತ್ತು ಅವರ ಬಳಕೆಗೆ ಕಾಲಕಾಲಕ್ಕೆ ಅವುಗಳ ಪೂರೈಕೆ ಮಾಡುತ್ತಿರಿ. ರೋಗ ಬರದಂತೆ ಬದುಕುವುದೇ ಆಯುರ್ವೇದದ ಮೂಲ ಉದ್ದೇಶ. ಅಕಸ್ಮಾತ ಬಂದರೂ ಸುಲಭವಾಗಿ ನಿರ್ವಹಿಸುವ ಚಾಕಚಕ್ಯತೆ ಆಯುರ್ವೇದಕ್ಕೆ ಮಾತ್ರ ಇರುವುದು! ಈ ಕ್ರಮದಲ್ಲಿ ಮಾತ್ರ ದೀರ್ಘಕಾಲದವರೆಗೆ ಪರಂಪರೆಯು ಜೀವಂತವಾಗಿರುವ ಸಾಧ್ಯತೆ ಇದೆ.


ವ್ಯಾಪಾರ ವಿಧಿಯಿಂದ ಅತ್ಯಾಧುನಿಕ ಮಾನಸಿಕತೆಯ ಸಹಿತ ಯಾವೆಲ್ಲಾ ಚಿಕಿತ್ಸೆಗಳನ್ನು ನಾವು ಅಳವಡಿಸಿಕೊಂಡಿದ್ದೇವೆಯೋ, ಅದರಲ್ಲಿ ಕಟು ಅನುಭವವೇನೆಂದರೆ - ಇಂದು ಯಾವುದನ್ನು ಮಹಾ ಔಷಧಿ ಎಂದು ನಂಬುತ್ತೇವೆಯೋ, ಉದಾ - ಪೆನ್ಸಿಲಿನ್ನನ್ನು ಒಂದು ಕಾಲದಲ್ಲಿ ಅಮೃತವೆಂದು ನಂಬಲಾಯಿತು; ಅದೇ ವಸ್ತು ಈಗ ತಿರಸ್ಕೃತವಾಗಿಬಿಟ್ಟಿದೆ. ವಿಶ್ವದಲ್ಲಿನ ಸ್ವಾಸ್ಥ್ಯ ಚಿಂತಕರು ಹಾಗೂ ಸಂಸ್ಥೆಗಳ ಅನುಸಾರ, ಈ ಎಲ್ಲಾ ಮಾತುಗಳ ಬಗ್ಗೆ ಗಮನಹರಿಸುವುದರಿಂದ ನಮಗೆ ತಿಳಿದುಬರುವುದೇನೆಂದರೆ, ವ್ಯಾಪಾರ ವಿಧಿಯಿಂದ ಏನನ್ನು ಮಾಡುತ್ತೇವೆಯೋ, ಅದೇ ಕೆಲ ಸಮಯದ ನಂತರ ಅಡಚಣೆಯ ರೂಪದಲ್ಲಿ ಬಂದುಬಿಡುತ್ತದೆ. ಹಾಗಾಗಿ ಸರ್ವಶುಭದ ಅರ್ಥದಲ್ಲಿಯೇ ಚಿಕಿತ್ಸಾ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಮಾನವೀಯತೆ.


ಸರ್ವಶುಭವಾಗಲಿ.


- ಹೇಮಂತ್ ಕುಮಾರ್ ಜಿ., B.E, MTech, (MSc. Phy)Book an online appointment with Vedavidhya Consultants for Ayurvedic, Vedic, Mantra Chikitsa, Yogic, Nutrition-based Treatments, and Natural Remedies.

225 views0 comments

Comments

Rated 0 out of 5 stars.
No ratings yet

Commenting has been turned off.
bottom of page