top of page

🤰ಗರ್ಭರಕ್ಷಾಂಬಿಕೆ ಕ್ಷೇತ್ರ + 👶ಸಂತಾನ ಶಾಸ್ತ್ರ

  • Jun 17, 2023
  • 1 min read

ತಂಜಾವೂರು (ತಂಜೂರು) - ಕುಂಭಕೋಣಂ ರಸ್ತೆಯಲ್ಲಿರುವ ಪಾಪನಾಶಂ ತಾಲೂಕಿನ ತಿರುಕರುಗವೂರಿನಲ್ಲಿ ಶ್ರೀ ಗರ್ಭರಕ್ಷಾಂಬಿಕಾ ಸಮೇತ ಶ್ರೀ ಮುಳ್ಳೈವನನಾಥರ ದೇವಸ್ಥಾನ ಎಂದು ಕರೆಯಲ್ಪಡುವ ಈ ಚೋಳ ದೇವಾಲಯವಿದೆ. ಒಳಗಿನ ಗೋಡೆಗಳ ಮೇಲೂ ಪ್ರಾಚೀನ ಶಾಸನಗಳಿವೆ. ೯೮೫ ಮತ್ತು ೧೦೧೪ ರ ನಡುವೆ ಆಳಿದ ರಾಜರಾಜ ಚೋಳನ ಕಾಲದ ಶಾಸನಗಳು ಮತ್ತು ಪರಾಂತಕ ಚೋಳನ ಅವಧಿಯ (೧೦ ನೇ ಶತಮಾನದ ಆರಂಭದ) ಶಾಸನಗಳು ದೇವಾಲಯದ ಒಳಗೆ ಕಂಡುಬರುತ್ತವೆ. ಇಲ್ಲಿರುವ ಕೆಲವು ಪ್ರಾರ್ಥನಾ ವಿಧಾನಗಳು ಗರ್ಭಾವಸ್ಥೆಗೆ ಸಂಬಂಧಿಸಿವೆ. ಆದ್ದರಿಂದ "ಸ್ತ್ರೀರೋಗ ಸಮಸ್ಯೆಗಳನ್ನು" ಪರಿಹರಿಸಲು ಮೀಸಲಾದ ದೇವಾಲಯ. ಜನರಿಗೆ ಸಹಾಯ ಮಾಡಲು ದೇವಾಲಯದಲ್ಲಿ ತಜ್ಞರು ಲಭ್ಯವಿದ್ದಿರಬಹುದು. ಇದು ಸಮಾಜಕ್ಕೆ ನೀಡಿದ ವಿಶೇಷ ಸೇವೆಯಾಗಿತ್ತು.


ಭಾರತದ ಹಳ್ಳಿಗಳಲ್ಲಿ ಬಹುತೇಕ ಊರಿಗೊಂದು ಶಿವಾಲಯ, ಅದಕ್ಕೆ ಆಯಾ ಊರಿನ ಜನರು ನಡೆದುಕೊಳ್ಳುವುದು, ಆಗಾಗ ಭೇಟಿ ನೀಡುವುದು ಕರ್ತವ್ಯವಾಗಿತ್ತು. ಆಯಾ ಗ್ರಾಮ ಬಿಟ್ಟು ಬೇರೆಯವರಿಗೆ ಅದರ ಸಂಬಂಧವಿರಲಿಲ್ಲ. ಇನ್ನು ವಿಶೇಷ ದೇವಾಲಯಗಳು ವಿಶೇಷ ಉದ್ದೇಶದಿಂದ ನಿರ್ಮಾಣವಾಗಿರುತ್ತವೆ. ಅವುಗಳಿಗೆ ವಿಶೇಷ ಯಾತ್ರಾ ನಿಯಮಗಳು, ಕ್ಷೇತ್ರ ವಿಧಿಗಳೂ ಇರುತ್ತವೆ. ಮತ್ತೆ ಬಸ್ ಟಿಕೇಟ್ ಉಚಿತ, ಪುರುಸೊತ್ತು ಇದೆ, ಮಕ್ಕಳಿಗೆ ರಜೆ ಸಿಕ್ಕಿದೆ, ಒಂದೇ ಕಡೆ ಇದ್ದು ಸಾಕಾಗಿದೆ, ವೀಕೆಂಡ್ ಟ್ರಿಪ್ ಟೂ ಏ ಟೆಂಪಲ್ ಎಂಬಂತಹ ಕಾರಣಗಳಿಂದ ಈಗ ಹೋಗುವಂತೆ ಸಿಕ್ಕ ಸಿಕ್ಕ ದೇವಸ್ಥಾನಕ್ಕೂ ಸಿಕ್ಕಸಿಕ್ಕವರೆಲ್ಲ ಹೋಗುತ್ತಿರಲಿಲ್ಲ. ಯಾವ ದೇವಸ್ಥಾನ ಯಾವ ಉದ್ದೇಶಕ್ಕೆ ನಿರ್ಮಾಣವಾಗಿದೆಯೋ, ಅದಕ್ಕೆ ಹೊಂದುವಂತೆ ತಮ್ಮ ಸಮಸ್ಯೆ ಇದ್ದರೆ, ಅದೂ ಕೂಡ "ದೈವಜ್ಞ"ರು ಪರಿಹಾರಕ್ಕಾಗಿ ಯಾತ್ರೆ ನಿರ್ದೇಶಿಸಿದ್ದರೆ ಹೆಚ್ಚಾಗಿ ಅಂತಲ್ಲಿಗೆ ಹೋಗುತ್ತಿದ್ದರು. ಗರ್ಭಕ್ಕೆ ಸಂಬಂಧಿಸಿದ ಈ ದೇವಾಲಯಕ್ಕೂ ಹಾಗೆಯೇ, ತತ್ಸಂಬಂಧಿ ಸ್ತ್ರೀ ಅಥವಾ ದಂಪತಿಗಳು ಚಿಕಿತ್ಸೆ ಹುಡುಕಿಕೊಂಡು ಹೋಗುತ್ತಿದ್ದರು.


- ಹೇಮಂತ್ ಕುಮಾರ್ ಜಿ

bottom of page