top of page

ಮನೋರೋಗ - ಉನ್ಮಾದ (Mania/Schizophrenia)



"ಮದಯಾಂತ್ಯಾದ್ಗತಾ ದೋಷಾ ಯಸ್ಮಾದುನ್ಮಾರ್ಗ ತಾ |

ಮಾನಸೋಯಮತೋ ವ್ಯಾಧಿರುನ್ಮಾದ ಇತಿ ಕೀರ್ತಿತಾ ||"

(ಸು.ವಿ.63)


ಪ್ರವೃದ್ಧಗೊಂಡ ದೋಷಗಳು ಉನ್ಮಾರ್ಗಗಾಮಿಗಳಾಗಿ ಮನೋವಿಭ್ರಮವನ್ನು ಉಂಟುಮಾಡುತ್ತವೆ ಆದ್ದರಿಂದ ಈ ಮಾನಸರೋಗಕ್ಕೆ "ಉನ್ಮಾದ" ರೋಗವೆನ್ನುವರು.


ಉನ್ಮಾದದ ಕಾರಣಗಳು -


"ವಿರುದ್ಧ ದುಷ್ಟಾಶುಚಿ ಭೋಜನಾನಿ

ಪ್ರದರ್ಶಣಂ ದೇವಗುರುದ್ವಿಜಾನಾಮ್ |

ಉನ್ಮಾದ ಹೇತುರ್ಭಯ ಹರ್ಷ ಪೂರ್ವೋ

ಮನೋಭಿಘಾತೋ ವಿಷಮಾಶ್ಚ ಚೇಷ್ಟಾಃ ||

(ಚ.ಚಿ.14)


ಸಂಯೋಗ ವಿರುದ್ಧ, ದುಷ್ಟ ಹಾಗೂ ಅಪವಿತ್ರ ಭೋಜನವನ್ನು ಮಾಡುವುದರಿಂದ, ದೇವ, ಗುರು, ಮಾತಾ-ಪಿತೃ ಹಾಗೂ ಬ್ರಾಹ್ಮಣರನ್ನು (ಪೂಜ್ಯರು, ಬುದ್ಧಿವಂತರು, ಸಾತ್ವಿಕರು) ಅವಮಾನಗೊಳಿಸುವುದರಿಂದ, ಅತ್ಯಧಿಕವಾದ ಭಯ ಹಾಗೂ ಆನಂದಗಳಿಂದ ಮನಸ್ಸಿನ ಮೇಲೆ ಪ್ರಭಾವವಾಗುವುದರಿಂದ, ಶಾರೀರಿಕ ವಿಷಮ ಚೇಷ್ಟೆಗಳಿಂದ ಹಾಗೂ ಮನೋ ಆಘಾತಗಳು ಉಂಟಾಗುವುದರಿಂದ ’ಉನ್ಮಾದ’ ರೋಗವು ಉತ್ಪತ್ತಿಯಾಗುವುದು ಎಂದು ಚರಕಾಚಾರ್ಯರು ಹೇಳಿದ್ದಾರೆ.


ವಿಪ್ರಕೃಷ್ಟ ಕಾರಣ -


ಆನುವಂಶಿಕತೆ - ಕೆಲ ಪರಿವಾರಗಳಲ್ಲಿ ಉನ್ಮಾದ ರೋಗವು ಆನುವಂಶಿಕವಾಗಿ ಬರುವುದು ಕಂಡುಬರುತ್ತದೆ. ಕೆಲರೋಗಿಗಳಲ್ಲಿ ಮಿದುಳಿನಲ್ಲಿ ಇರದಿದ್ದರೂ ರೋಗವು ಬರುವ ಸಾಧ್ಯತೆ ಇದೆ. ಇವರು ಜನ್ಮತಃ ವಿಚಿತ್ರ ಸ್ವಭಾವದವರಾಗಿರುತ್ತಾರೆ. ಅವರ ಜೀವನದಲ್ಲಾಗುವ ಯಾವುದೇ ಒಂದು ಆಕಸ್ಮಿಕ ಘಟನೆಯು ಉನ್ಮಾದ ರೋಗವನ್ನುಂಟುಮಾಡಲು ಕಾರಣವಾಗುತ್ತದೆ.


ಸನ್ನಿಕೃಷ್ಟ ಕಾರಣ -


ಆನುವಂಶಿಕದ ಜೊತೆ ಈ ಕೆಳಕಾಣಿಸಿದ ಸಮೀಪಸ್ಥ ಕಾರಣಗಳು ಉನ್ಮಾದವನ್ನುಂಟುಮಾಡಲು ಸಹಕಾರಿ ಎನಿಸುವುವು.

(1) ಅಧಿಕ ಪರಿಶ್ರಮ

(2) ಅತಿಯಾದ ಚಿಂತೆ

(3) ಚಿರಕಾರಿ ವ್ಯಾಧಿಗಳು

(4) ಅಪುಷ್ಟಿಕರವಾದ ಭೋಜನ

(5) ಮದ್ಯ ಪಾನ

(6) ವಿಷಸೇವನೆ

ಮೊದಲಾದುವುಗಳು.


ಕಾಲ-


20-40 ವರ್ಷಾವಧಿಯಲ್ಲಿ ಉನ್ಮಾದ ರೋಗವು ಬರುವುದರ ಸಾಧ್ಯತೆಯು ಹೆಚ್ಚು. ಗ್ರೀಷ್ಮ ಋತುಕಾಲದಲ್ಲಿ ಈ ಅವಸ್ಥೆಯು ತೀವ್ರತಮವಾಗಿರುವುದು.


ಸಂಪ್ರಾಪ್ತಿ-


"ತೈರಲ್ವಸತ್ವಶ್ಯ ಮಲಾಃ ಪ್ರದುಷ್ಟಾ

ಬುದ್ಧಿರ್ನಿವಾಸಂ ಹೃದಯಂ ಪ್ರದೂಷ್ಯ |

ಸ್ರೋತಾಂಶಧಿಷ್ಟಾಯ ಮನೋವಹಾನಿ

ಪ್ರಮೇಹಯಂತ್ಯಾಶು ನರಸ್ಯ ಚೇತಃ ||"

(ಚ.ಚಿ.14)


ಈ ಮೇಲ್ಕಂಡ ಕಾರಣಗಳಿಂದ ಪ್ರಕುಪಿತವಾದ ವಾತಾದಿ ದೋಷಗಳು (ವಾತ, ಪಿತ್ತ, ಕಫ) ಸತ್ವಗುಣಹೀನವುಳ್ಳ ಅಥವಾ ದುರ್ಬಲ ಮನುಷ್ಯನ ಬುದ್ಧಿಯ ನಿವಾಸಸ್ಥಾನವಾದ ಹೃದಯವನ್ನು ದೂಷಿಸಿ ಹಾಗೂ ಮನೋವಾಹಿ ಸ್ರೋತಸ್ಸುಗಳಲ್ಲಿ ವ್ಯಾಪ್ತಗೊಂಡು ಮನುಷ್ಯನ ಬುದ್ಧಿಯನ್ನು ಭ್ರಾಂತಿಯುಕ್ತ ಅಥವಾ ಉನ್ಮತ್ತಗೊಳಿಸುವುವು.


ಉನ್ಮಾದ ರೂಪ-


ಧೀ ವಿಭ್ರಮ ಸತ್ವ ಪರಿಪ್ಲವಶ್ಚ

ಷರ್ಯಾಕುಲ ದೃಷ್ಟಿರಧೀರತಾ ಚ |

ಅಬದ್ಧ ವಕ್ತ್ವಂ ಹೃದಯಂ ಚ ಶೂನ್ಯಂ

ಸಾಮಾನ್ಯಮುನ್ಮಾದ ಗದಸ್ಯ ಲಿಂಗಮ್ ||

(ಚ.ಚಿ.14)


ಬುದ್ಧಿ ಭ್ರಮತೆ, ಮನಸ್ಸಿನ ಚಂಚಲತೆ, ಕಣ್ಣುಗಳನ್ನು ಅತ್ತಿತ್ತ ಹೊರಳಿಸುವುದು ಅಥವಾ ವ್ಯರ್ಥವಾಗಿ ಅತ್ತಿಂದಿತ್ತ ನೋಡುವುದು, ಬುದ್ಧಿಯ ಅಸ್ಥಿರತೆ, ಅಸಂಬದ್ಧವಾಗಿ ಪ್ರಲಾಪ ಮಾಡುವುದು ಹಾಗೂ ಹೃದಯ ಶೂನ್ಯತೆ (ತನ್ನತನ ಶೂನ್ಯತೆ)ಗಳು ಉನ್ಮಾದದ ಸಾಮಾನ್ಯ ಲಕ್ಷಣಗಳೆನಿಸಿವೆ.


ಉನ್ಮಾದಗಳಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣಗಳು


(1) ಧೀ ವಿಭ್ರಂಶ - ಬುದ್ಧಿಯ ಸ್ಥಿಮಿತತೆ ಇಲ್ಲದಿರುವುದು ಎಲ್ಲಾ ವಿಧ ಉನ್ಮಾದಗಳಲ್ಲಿ ಅಲ್ಪಸ್ವಲ್ಪವಾಗಿ ಕಂಡುಬರುತ್ತದೆ.

(2) ಸತ್ವ ಪರಿಪ್ಲವ - ಚಿತ್ತ ಸ್ಥಿರತೆಯು ಹೋಗುವುದು.

(3) ಅಧೀರತಾ - ಧೃತಿಗೆಡುವುದು.

(4) ಅಸಂಬದ್ಧ ವಾಕ್ - ಮಾತುಗಳಲ್ಲಿ ಸ್ವಲ್ಪವಾದರೂ ಅಸಂಬದ್ಧತೆ ಇರುವುದು.

(5) ಹೃದಯ ಶೂನ್ಯತಾ - ರೋಗಿಗೆ ಭಾವನಾತ್ಮಕ ವಿಕಾರವಿರುವುದು. ರಾಗ, ದ್ವೇಷ, ಪ್ರಿಯ-ಅಪ್ರಿಯ ವಿಷಯಗಳ ವಿಪರ್ಯವಾಗುವುದು.

(6) ಅನಿದ್ರಾ - ರೋಗಿಗೆ ನಿದ್ರೆಯು ಸರಿಯಾಗಿ ಆಗುವುದಿಲ್ಲ. ಕಫಜ ಉನ್ಮಾದದಲ್ಲಿ ಅತಿನಿದ್ರೆಯು ಇರುವುದು.


ವಾತಿಕ ಉನ್ಮಾದ -


ರೂಕ್ಷ, ಅಲ್ಪ ಹಾಗೂ ಶೀತಲವಾದ ಅನ್ನವನ್ನು ನಿರಂತರ ಸೇವಿಸುವುದು. ವಿರೇಚನ, ಧಾತುಕ್ಷಯ ಹಾಗೂ ಉಪವಾಸಗಳಿಂದ ವೃದ್ಧಿಗೊಂಡ ವಾಯು ಚಿಂತೆ ಮೊದಲಾದ ಮಾನಸಿಕ ಕಾರಣಗಳಿಂದ ಮೊದಲಿನಿಂದಲೂ ಇದ್ದ ವಿಕೃತ ಮಿದುಳನ್ನು ಮತ್ತಷ್ಟು ದೂಷಿಸಿ ಬುದ್ಧಿ ಹಾಗೂ ಸ್ಮೃತಿಗಳನ್ನು ನಾಶಗೊಳಿಸುವುದು. ಇದರಿಂದ ರೋಗಿಯು ನಿಷ್ಪ್ರಯೋಜಕವಾಗಿ ನಗುವುದು, ಮುಗುಳು ನಗುವನು, ನಾಚಿಕೊಳ್ಳುವನು, ಹಾಡುವನು, ಕಾರಣವಿಲ್ಲದೇ ಮಾತನಾಡುವನು. ಕೈಕಾಲುಗಳನ್ನು ಅತ್ತಿಂದಿತ್ತ ತಿರುಗಾಡಿಸುವನು. ಹಾಗೂ ಕೆಲವೊಮ್ಮೆ ಅಳಲಾರಂಭಿಸುವನು. ಅವನ ಶರೀರವು ಒಣಗಿದ್ದು ಅರುಣ ವರ್ಣದ್ದಾಗಿರುವುದು. ಹಾಗೂ ಭೋಜನವು ಪಾಕ ಹೊಂದಿದ ಬಳಿಕ ಇದರ ವೇಗವು ಅಧಿಕವಾಗುವುದು. (ಚ.ಚಿ.)


ಪೈತ್ತಿಕ ಉನ್ಮಾದ -


ಅಜೀರ್ಣ ಕಟು, ಆಮ್ಲ, ವಿದಾಹಿ ಹಾಗೂ ಅತಿ ಉಷ್ಣ ಪದಾರ್ಥಗಳನ್ನು ಅಧಿಕವಾಗಿ ಸೇವಿಸುವುದರಿಂದ ವೃದ್ಧಿಗೊಂಡ ಪಿತ್ತವು ದುರ್ಬಲ ಮನಸ್ಸಿನ ವ್ಯಕ್ತಿಯ ಮಸ್ತಿಷ್ಕದಲ್ಲಿ ಪ್ರವೇಶಿಸಿ ಚಿಂತೆ ಹಾಗೂ ಕ್ರೋಧ ಸ್ವಭಾವಗಳಿಂದ ಕೂಡಿದ ಅದನ್ನು ಮತ್ತಿಷ್ಟು ದೂಷಿಸಿ ಬುದ್ಧಿ ಹಾಗೂ ಸ್ಮೃತಿ ಶಕ್ತಿಯನ್ನು ನಷ್ಟಗೊಳಿಸುವುದು. ಆಗ ರೋಗಿಯಲ್ಲಿ ಅಸಹಿಷ್ಣುತೆ ಹಾಗೂ ಕ್ರೋಧ ಸ್ವಭಾವಗಳು ಬರುವುವು. ಅವನು ತನ್ನ ಬಟ್ಟೆಗಳನ್ನು ಬಿಚ್ಚಿ ಬೆತ್ತಲಾಗುವನು. ಹಾಗೂ ಕೃದ್ಧನಾಗಿ ಜನರನ್ನು ದಬಾಯಿಸತೊಡಗುವನು. ಹಾಗೂ ಅವರ ಹಿಂದೆ ಹೊಡೆಯಲು ಓಡುವನು. ರೋಗಿಯು ಉಷ್ಣತೆಯಿಂದ ಪೀಡಿತನಾಗಿದ್ದು, ನೆರಳಿನಲ್ಲಿ ಕುಳಿತುಕೊಳ್ಳುವನು. ತಣ್ಣಗಾದ ನೀರು ಹಾಗೂ ಆಹಾರಗಳನ್ನು ಅಪೇಕ್ಷಿಸುವನು ಹಾಗೂ ರೋಗಿಯ ವರ್ಣ ಹಳದಿಯಾಗುವುದು. ಈ ಲಕ್ಷಣಗಳಿದ್ದರೆ ಅವನು ಪೈತ್ತಿಕ ಉನ್ಮಾದರೋಗಿ ಎಂದು ತಿಳಿಯಬೇಕು.

(ಚ.ಚಿ.14)


ಕಫಜ ಉನ್ಮಾದ -


ಅತಿಸ್ನಿಗ್ಧವಾದ ಭೋಜನಮಾಡುವ ಹಾಗೂ ಸಂಪೂರ್ಣ ನಿಷ್ಕ್ರಿಯನಾದ ವ್ಯಕ್ತಿಯ ಪಿತ್ತಸಹಿತವಾದ ವಿಕೃತ ಕಫವು ಮಸ್ತಿಷ್ಕದಲ್ಲಿ ಸ್ಥಿತಗೊಂಡು ಬುದ್ಧಿ ಹಾಗೂ ಸ್ಮೃತಿಗಳನ್ನು ನಷ್ಟಗೊಳಿಸಿ ಮನೋವಿಭ್ರಮಪೂರ್ವಕ ಉನ್ಮಾದರೋಗವನ್ನು ಉತ್ಪನ್ನ ಮಾಡುತ್ತದೆ. ಇದರಲ್ಲಿ ರೋಗಿಯು ಬಹಳ ಕಡಿಮೆ ಮಾತನಾಡುವನು ಹಾಗೂ ಅನ್ಯ ಚೇಷ್ಟೆಗಳನ್ನು ಕೂಡ ಕಡಿಮೆಮಾಡುವನು. ಹಸಿವೆ ಇರದು. ಸ್ತ್ರೀಯರೊಡನೆ ಏಕಾಂತದಲ್ಲಿರಲು ಇಚ್ಛೆಪಡುವನು. ನಿದ್ರೆ ಅಧಿಕಮಾಡುವನು. ಬಾಯಿಯಿಂದ ಜೊಲ್ಲು ಅಧಿಕ ಕಂಡುಬರುವುದು. ಕೆಲವೇಳೆ ವಾಂತಿಯನ್ನು ಕೂಡಾ ಮಾಡಿಕೊಳ್ಳುವನು. ಇವನಿಗೆ ಈ ರೋಗದ ವೇಗಗಳು ಊಟಮಾಡಿದ ಕೂಡಲೇ ಪ್ರಬಲಗೊಳ್ಳುವುವು. ರೋಗಿಯ ಉಗುರು, ಕಣ್ಣು, ಮೂತ್ರ ಹಾಗೂ ಪೂರ್ತಿಶರೀರಗಳು ಶ್ವೇತ ವರ್ಣವಾಗಿರುವುವು.

(ಚ.ಚಿ.14)


ಸನ್ನಿಪಾತಕ ಉನ್ಮಾದ -


ಈ ವಿಕಾರವು ಮೂರು ದೋಷಗಳ ಉತ್ಪಾದಕ ಹೇತುಗಳಿಂದ ಉಂಟಾಗುವುದರಿಂದ ಅತ್ಯಂತ ಭಯಂಕರವಾಗಿದ್ದು ಮೂರು ದೋಷಗಳ ಲಕ್ಷಣಗಳು ಕಂಡುಬರುವವು. ಇದು ಚಿಕಿತ್ಸೆಗೆ ವಿರುದ್ಧೋಪಕ್ರಮ ಎನಿಸುವುದರಿಂದ ಅಸಾಧ್ಯವೆನಿಸುವುದು.

(ಚ.ಚಿ. 14)


ಮಾನಸಿಕ ಭಾವಜನ್ಯ ಉನ್ಮಾದ-


ಕಳ್ಳರು, ರಾಜಭಟರು, ಶತೃಗಳು ಹಾಗೂ ಹಿಂಸ್ರಪಶುಗಳಿಂದ ಭಯಕ್ಕೊಳಗಾಗುವುದರಿಂದ, ಹಣ ಹಾಗೂ ಪರಿವಾರದವರ ನಷ್ಟವಾಗುವುದರಿಂದ, ತನ್ನ ಪ್ರಿಯೆಯೊಡನೆ ಕಾಮಿಸಬೇಕೆಂಬ ಅತ್ಯುತ್ಕಟ ಇಚ್ಛೆಯಿಂದ ಮನಸ್ಸಿನ ಮೇಲೆ ಗಂಭೀರವಾದ ಆಘಾತವಾಗುವುದು. ಹಾಗೂ ಇದರಿಂದ ಭಯಂಕರವಾದ ಉನ್ಮಾದರೋಗವು ಉತ್ಪತ್ತಿಯಾಗುವುದು. ಇದರಿಂದ ಪೀಡಿತನಾದ ರೋಗಿಯು ವಿಚಿತ್ರವಾಗಿ ಮಾತನಾಡುತ್ತಾ ಎಷ್ಟೋಸಾರೆ ಮನಸ್ಸಿನಲ್ಲಿ ಹುದುಗಿದ ಮಾತುಗಳನ್ನು ಕೂಡಾ ಹೇಳಿಬಿಡುವನು. ಈ ವಿಕಾರದಲ್ಲಿ ರೋಗಿಯು ಹಾಡುವುದು, ಅಳುವುದು, ಅತಿಸಾಮಾನ್ಯ.

(ಸು.ವಿ.62)


ವಿಷಜನ್ಯ ಉನ್ಮಾದ-


ಧತ್ತೂರ ಮೊದಲಾದ ವಿಷಗಳ ಸೇವನೆಯಿಂದ ಅಥವಾ ಮದ್ಯಪಾನ ಮಾಡುವುದರಿಂದ ಮನುಷ್ಯನು ಉನ್ಮತ್ತನಾಗುತ್ತಾನೆ. ಇದರಲ್ಲಿ ರೋಗಿಯ ಕಣ್ಣುಗಳು ಕೆಂಪಾಗಿರುತ್ತವೆ. ಬಲ, ಇಂದ್ರಿಯ, ಶಕ್ತಿ, ಕಾಂತಿಗಳು ಕ್ಷೀಣವಾಗಿರುತ್ತವೆ. ಅವನು ದೀನನಾಗುವನು. ಮುಖದ ವರ್ಣವು ಹಸಿರು, ನೀಲಿಯಾಗುವುದು. ರೋಗಿಯು ಬೇಶುದ್ಧಿಯಾಗುವನು, ಸ್ಮೃತಿ ತಪ್ಪುವನು.

(ಸು.ವಿ.62)


ಭೂತೋನ್ಮಾದ-


ಯಾವ ವ್ಯಕ್ತಿಯ ಮಾತುಗಳು, ಪರಾಕ್ರಮ, ಶಕ್ತಿ ಹಾಗೂ ಚೇಷ್ಟೆಗಳು ಮಾನವಶಕ್ತಿಗೆ ಮೀರಿ ವಿಚಿತ್ರವಾಗಿರುವವೋ, ಯಾವನ ತಿಳುವಳಿಕೆ, ವಿಜ್ಞಾನಗಳು ಶಕ್ತಿಯುತವಾಗಿರುವವೋ ಹಾಗೂ ಉನ್ಮಾದದ ವಾತಾದಿ ಗುಣಗಳಂತೆ ನಿಶ್ಚಿತ ಸ್ವರೂಪದ್ದು ಇರುವುದಿಲ್ಲವೋ ಸ್ವಾಭಾವಿಕವಾಗಿ ಇಂತಹ ರೋಗಿಯ ಉನ್ಮಾದಾವಸ್ಥೆಗೆ ಭೂತ ಜನ್ಯ ಉನ್ಮಾದವೆಂದು ಹೇಳುವರು.

(ಚ.ಚಿ.14)


ಸಾಧ್ಯಾಸಾಧ್ಯತೆ-


ಶಕ್ತಿಗುಂದಿದ ಹಾಗೂ ಮಾಂಸಕ್ಷೀಣವಾದ ರೋಗಿ, ಕೆಳಗೆ ಅಥವಾ ಮೇಲಕ್ಕೆ ಸದಾ ಮುಖವನ್ನು ಮಾಡಿಕೊಂಡಿರುವ ರೋಗಿ. ನಿದ್ರೆ ಬಾರದಿರುವ ರೋಗಿ. ಇವರು ಚಿಕಿತ್ಸೆಗೆ ಅಸಾಧ್ಯವೆನಿಸುತ್ತಾರೆ.

(ಸು.ಸೂ.34)


ಕಣ್ಣುಗುಡ್ಡೆಗಳು ಹೊರಬಂದಂತೆ ಕಂಡುಬರುವ ರೋಗಿ, ದೃಷ್ಟಿ, ಶಕ್ತಿಯು ವಿಸ್ಫಾರಿತಗೊಂಡಿದ್ದರೆ, ಬೇಗ ಬೇಗ ನಡೆಯುವವ, ಬಾಯಿಯಿಂದ ಹೊರಬರುತ್ತಿರುವ ನೊರೆಯನ್ನುಳ್ಳವ, ಅಧಿಕ ನಿದ್ರೆಯುಳ್ಳವ, ಒಮ್ಮಿಂದೊಮ್ಮೆಲೆ ಕೆಳಕ್ಕೆ ಬಿದ್ದುಬಿಡುವ ಅಥವಾ ನಡುಕಗೊಳ್ಳುವ ಹಾಗೂ ಪರ್ವತ, ಆನೆ, ಗಿಡಗಳ ಮೇಲಿಂದ ಬಿದ್ದ ಉನ್ಮಾದಿತ ರೋಗಿಗಳು ಚಿಕಿತ್ಸೆಗೆ ಅಸಾಧ್ಯವೆನಿಸುತ್ತಾರೆ. ಇದರಂತೆ 13 ವರ್ಷಗಳಿಂದಿರುವ ಪುರಾತನ ಉನ್ಮಾದರೋಗವು ಚಿಕಿತ್ಸೆಗೆ ಅಸಾಧ್ಯವೆನಿಸುತ್ತದೆ.

(ಸು.ವಿ.60)


ಎಳೆವಯಸ್ಸಿನಲ್ಲಿ ಒಮ್ಮೆ ಉನ್ಮಾದ ಕಾಣಿಸಿಕೊಂಡಿತೆಂದರೆ ಹಾಗೂ ಅದು ಆರು ತಿಂಗಳು ಅವಧಿಯಷ್ಟು ಇರದಿದ್ದರೆ ಅದು ಬಹುಶಃ ಗುಣವಾಗುವುದು.


ಚಿಕಿತ್ಸೆ-


ಉನ್ಮಾದರೋಗಿಗೆ ಚಿಕಿತ್ಸೆ ಪ್ರಾರಂಭಿಸುವ ಮುನ್ನ ಸಂಶೋಧನ ಚಿಕಿತ್ಸೆ ಕೊಡಬೇಕಾಗುವುದು. ಪಿತ್ತ ಪ್ರಧಾನರೋಗಿಗೆ ಶಿರೋವಿರೇಚನವನ್ನೂ, ವಾತ ರೋಗಿಗೆ ಬಸ್ತಿ (ಮೊದಲು ನಿರೂಹ ನಂತರ ಸ್ನೇಹನ ಬಸ್ತಿ) ಮಹಾನಾರಾಯಣ ತೈಲದೊಡನೆ ಮಾಡಿಸಬೇಕು. ಕಫರೋಗಿಗೆ ಶಿರೋವಿರೇಚನ (ನಸ್ಯ ಮುಖಾಂತರ) ಮಾಡಿಸಬೇಕು.


ಸಂಶಮನ ಚಿಕಿತ್ಸೆ-


ದೋಷಗಳ ಶಾಂತಿಗಾಗಿ ಈ ಕೆಳಕಂಡ ಉಪಕ್ರಮಗಳನ್ನು ಅನುಸರಿಸಬೇಕು.


(1) ಜಲಚಿಕಿತ್ಸೆ - ರೋಗಿಯನ್ನು ಕೆರೆ ಅಥವಾ ನೀರಿನ ತೊಟ್ಟಿಯಲ್ಲಿ 10-2 ಘಂಟೆಗಳವರೆಗೆ ಅವಗಾಹನ ಮಾಡಿಸಬೇಕು. ಕರ್ಮಕಾಂಡ ಪ್ರಕ್ರಿಯೆಗಳಾದ ಕೂಪಶಾಂತಿ, ಉದಕಶಾಂತಿಗಳೂ ಸಹಕಾರಿ.


(2) ಬೃಂಹಣ ಚಿಕಿತ್ಸೆ - ಉತ್ತಮ ಪೌಷ್ಟಿಕವಾದ, ಮಧುರ, ಹೃದ್ಯ, ಬಲಕಾರಿಯಾದ ಆಹಾರಗಳನ್ನು ಕೊಡಬೇಕು. ತುಪ್ಪ, ಹಾಲು, (ಆಕಳದ್ದು) ವಿಶೇಷವಾಗಿ ಕೊಡಬೇಕು.


(3) ನಿದ್ರಾ/ಮಂಪರು ಬರಿಸುವ ಔಷಧಗಳು - ನಿದ್ರೆ ಬರುವ ಔಷಧಗಳನ್ನು ಕೆಲವೈದ್ಯರು ಈ ರೋಗಿಗಗಳಲ್ಲಿ ಪ್ರಯೋಗಿಸಿ ಯಶಸ್ವಿ ಎನಿಸುತ್ತಾರೆ.


ಕಾಂತ/ಅಗ್ನಿ/ವಿದ್ಯುತ್ ಚಿಕಿತ್ಸೆ


ಬಾಹ್ಯ ದರ್ಶನ, ವಿಸ್ಮಪನ, ವಿಸ್ಮರಣ, ಕ್ಷೋಭನ, ಹರ್ಷಣ, ಭರ್ತ್ಸನ, ಬಂಧನ, ಸ್ವಪ್ನ, ಸಂವಹನ ಎಂಬ ವಿಧಗಳು.


ಸತ್ವಾವಜಯ ಚಿಕಿತ್ಸೆ


ವೇದೋಕ್ತ ಮನಶ್ಶಾಸ್ತ್ರ ಆಧಾರಿತ ಚಿಕಿತ್ಸೆ.


ದೈವ ವ್ಯಪಾಶ್ರಯ ಚಿಕಿತ್ಸೆ


ಕರ್ಮವಿಪಾಕ ಶಾಂತಿಗಳು, ದಾನ, ಜಪ, ಮಂತ್ರ ಚಿಕಿತ್ಸೆ, ಮಣಿ ಚಿಕಿತ್ಸೆ, ಸ್ನಾನ, ಧ್ಯಾನ ಚಿಕಿತ್ಸೆ, ಸಾಮವೇದ/ನಾದ/ರಾಗ/ಸಂಗೀತ ಚಿಕಿತ್ಸೆ ಇತ್ಯಾದಿ.


ಸಿದ್ಧೌಷಧಿಗಳು


ದತ್ತೂರಾದಿಗಳಿದ್ದರೆ ಬಹಳ ದಿವಸಗಳವರೆಗೆ ರೋಗಿಗೆ ಕೊಡಬಾರದು.


ವೈದ್ಯರು ತಮ್ಮ ಶಾಸ್ತ್ರ-ಯುಕ್ತಿ-ಅನುಭವದಿಂದ ಆಯ್ದ ರಸೌಷಧಗಳನ್ನು ಕಫ ಪ್ರಧಾನವಾದ ರೋಗಿಗಳಿಗೆ ಕೊಡಬಹುದು.


ವೈದ್ಯರು ತಮ್ಮ ಶಾಸ್ತ್ರ-ಯುಕ್ತಿ-ಅನುಭವದಿಂದ ಆಯ್ದ ಘೃತಗಳ ಸೇವನೆಯು ಲಾಭಕಾರಿ ಎನಿಸಿದೆ.


ಮಂದಾಗ್ನಿ ಇದ್ದರೆ ವೈದ್ಯರು ತಮ್ಮ ಶಾಸ್ತ್ರ-ಯುಕ್ತಿ-ಅನುಭವದಿಂದ ಆಯ್ದ ಅರಿಷ್ಟಗಳನ್ನು ಕೊಡಬಹುದು.


ಪ್ರತ್ಯೇಕ ರೋಗಿಗೆ ಸೂಕ್ತವಾದ ಔಷಧ ನಿರ್ಣಯವು ವೈದ್ಯರ ಸುಪರ್ದಿಯಲ್ಲಿಯೇ ನಡೆಯಬೇಕಾದ್ದರಿಂದ, ಔಷಧಗಳ ಪಟ್ಟಿ ಕೊಟ್ಟರೆ ಸೂಕ್ತಾಸೂಕ್ತತೆಯ ಅರಿವಿಲ್ಲದೆ ಸ್ವಯಂವೈದ್ಯ ಮಾಡಿಕೊಂಡು ವಿಪರೀತಾವಸ್ಥೆಗೆ ಹೋಗಬಹುದಾದ ಕಾರಣ ಅದನ್ನಿಲ್ಲಿ ಪ್ರಕಟಿಸುತ್ತಿಲ್ಲ.


- ಡಾ. ಅಶ್ವಿತಾ ಎಮ್.

BAMS, MS (Shalakya)

ಬ್ರಾಹ್ಮೀ ಆಯುರ್ವೇದ ಕ್ಲಿನಿಕ್

ಚಿಕ್ಕಮಗಳೂರು

Appointments -

bottom of page