top of page

ಮಳೆಗಾಲದಲ್ಲಿ ಆರೋಗ್ಯದ ಆರೈಕೆ

Updated: Aug 24, 2021

- ಡಾ|| ಅಶ್ವಿತಾ ಎಮ್,

ಬ್ರಾಹ್ಮೀ ಆಯುರ್ವೇದ ಕ್ಲಿನಿಕ್,

ಪ್ರಧಾನ ಅಂಚೆ ಕಛೇರಿ ಹತ್ತಿರ, ಚಿಕ್ಕಮಗಳೂರು



ಋತುಮಾನ ಬದಲಾದಂತೆ ಗಿಡಮರಗಳು ಹಣ್ಣುಹೂಗಳಿಂದ ರಂಜಿಸುತ್ತದೆ, ನೆಲಬಳ್ಳಿಗಳು ಪಸರಿಸುತ್ತದೆ, ನದಿಗಳು ತುಂಬಿ ಹರಿಯುತ್ತದೆ. ಅಂತೆಯೇ ಮನುಷ್ಯನ ದೇಹದ ಆಂತರಿಕ ವ್ಯವಸ್ಥೆಯೂ ಕೂಡ ಬದಲಾಗುತ್ತದೆ. ಅದರಲ್ಲಿಯೂ ಬೇಸಿಗೆ ಕಳೆದು ಮಳೆಗಾಲದ ಹೊಸ್ತಿಲಿಗೆ ಬಂದಾಕ್ಷಣ ದೇಹಬಲ ಕ್ಷೀಣಿಸಿ, ರೋಗ ನಿರೋಧಕ ಶಕ್ತಿಯು ಕುಂಠಿತವಾಗುತ್ತದೆ. ಈ ಸಮಯದಲ್ಲಿ ನಾನಾ ರೀತಿಯ ಶೀತ-ಜ್ವರಗಳು, ಸಾಂಕ್ರಾಮಿಕ ರೋಗಗಳು, ಜೀರ್ಣಾಂಗದ ಸಮಸ್ಯೆಗಳು, ಗಂಟು ನೋವು, ಸೊಂಟ ನೋವು ಉಲ್ಬಣವಾಗುತ್ತದೆ. ಜಲಾಶಯಗಳು ಕೊಚ್ಚಿಬಂದ ಮಳೆನೀರಿನಿಂದ ತುಂಬಿ ಕಲುಷಿತವಾಗುತ್ತದೆ. ಮಾಲಿನ್ಯದಿಂದ ಆರೋಗ್ಯ ಹದಗೆಡುವುದು ನಮಗೆಲ್ಲಾ ತಿಳಿದೇ ಇದೆ. ದೇಹದಲ್ಲಿನ ಜಠರಾಗ್ನಿಯೂ ಕಡಿಮೆಯಾಗಿ ನಮ್ಮಲ್ಲಿ ಹಸಿವು ಹಾಗು ಜೀರ್ಣಶಕ್ತಿಯು ಕ್ಷೀಣಿಸುತ್ತದೆ. ಹಾಗಾಗಿ ನಮ್ಮ ಆಹಾರಕ್ರಮದಲ್ಲಿ ಸುಲಭವಾಗಿ ಜೀರ್ಣಿಸುವ, ಪಚನ ಶಕ್ತಿಯನ್ನು ವೃದ್ಧಿಸುವ ಆಹಾರವನ್ನು ಅಳವಡಿಸಿಕೊಳ್ಳಬೇಕು. ತರಕಾರಿಗಳಲ್ಲಿ ಹೆಚ್ಚಾಗಿ ಪಡವಲಕಾಯಿ, ಹೀರೆಕಾಯಿ, ನುಗ್ಗೇಕಾಯಿ, ಮೂಲಂಗಿ, ಸುವರ್ಣಗೆಡ್ಡೆ ಸೇವಿಸುವುದು ಉತ್ತಮ. ಹಳೆಯದಾದ ರಾಗಿ, ಅಕ್ಕಿ, ಗೋಧಿ ಸುಲಭವಾಗಿ ಜೀರ್ಣವಾಗುವ ಕಾರಣ, ಈ ಸಮಯದಲ್ಲಿ ಸೇವಿಸುವುದು ಸೂಕ್ತ. ಕುಡಿಯಲು ಬಿಸಿನೀರನ್ನು ಬಳಸುವುದು ಒಳಿತು. ಕುದಿಯುವ ನೀರಿಗೆ ಸಣ್ಣ ಪ್ರಮಾಣದಲ್ಲಿ ತುಳಸಿ ಅಥವಾ ಲವಂಗ ಅಥವಾ ಶುಂಠಿ ಹಾಕುವುದರಿಂದ ಕೆಮ್ಮು, ನೆಗಡಿ, ಜ್ವರ ತಡೆಗಟ್ಟುತ್ತದೆ. ಬಿಸಿನೀರು ದೇಹದಲ್ಲಿನ ವಾಯು ನಿಯಂತ್ರಿಸಲು ಸಹಕಾರಿ, ಪಚನಕ್ರಿಯೆಗೆ ಪೂರಕ ಹಾಗು ದೇಹವನ್ನು ಬೆಚ್ಚಗಿಡುತ್ತದೆ. ದಿನನಿತ್ಯದ ಅಡುಗೆಯಲ್ಲಿ ತಿಳಿಸಾರು, ಹುರುಳಿ ಸಾರು, ಕಾಳುಮೆಣಸಿನ ಸಾರು, ತಂಬುಳಿ, ಕಾಳುಮೆಣಸಿನ ಪಾನಕ ಇತ್ಯಾದಿ ಬಳಸುವುದರಿಂದ ಆಹಾರ ಸುಲಭವಾಗಿ ಪಚನವಾಗುತ್ತದೆ ಹಾಗು ವಾಯು ನಿಯಂತ್ರಣದಲ್ಲಿರುತ್ತದೆ. ಅತಿಯಾಗಿ ಸಿಹಿ, ಜಿಡ್ಡಿನ ಪದಾರ್ಥ, ಮಾಂಸಾಹಾರ, ಮದ್ಯ, ಖಾರವಾದ ಆಹಾರವನ್ನು ತ್ಯಜಿಸುವುದು ಸೂಕ್ತ.


ನಮ್ಮ ಪೂರ್ವಜರು ಆರೋಗ್ಯ ಸಂರಕ್ಷಣೆಗಾಗಿ ಔಷಧೀಯ ಗಿಡಮೂಲಿಕೆಗಳ ಸೇವನೆಯನ್ನು ಅಥವಾ ಆಹಾರ ವೈವಿಧ್ಯತೆಗಳನ್ನು ಕೆಲವೊಂದು ಆಚರಣೆಗಳ ಮೂಲಕ ಅಳವಡಿಸಿದ್ದಾರೆ. ಅದು ಸಂಕ್ರಾಂತಿ ಹಬ್ಬದಲ್ಲಿನ ಎಳ್ಳುಬೆಲ್ಲ, ಯುಗಾದಿಯಲ್ಲಿ ಬೇವುಬೆಲ್ಲ, ರಾಮನವಮಿಯಲ್ಲಿ ಕೋಸಂಬರಿ ಪಾನಕ ಇತ್ಯಾದಿಗಳು. ಇವೆಲ್ಲವೂ ವಾತಾವರಣಕ್ಕೆ ಅನುಗುಣವಾಗಿ ನಮ್ಮ ದೇಹಾರೋಗ್ಯದ ದೃಷ್ಟಿಕೋನದಿಂದ ಈ ಖಾದ್ಯಗಳು ಉಪಯುಕ್ತವಾಗಿದೆ. ಅದರಲ್ಲಿ ವರ್ಷಕೊಮ್ಮೆ ಮಳೆಗಾಲದಲ್ಲಿ ಕಳಲೆ ಪಲ್ಯ ಸೇವಿಸುವುದು ಒಂದು ವಾಡಿಕೆಯಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಕಳಲೆ ಸೇವಿಸುವುದರಿಂದ ದೇಹದ ಕಶ್ಮಲಗಳನ್ನು ಹೊರಹಾಕುತ್ತದೆ. ಹಾಗಾಗಿ ವರ್ಷಕ್ಕೊಮ್ಮೆ ಸೇವಿಸುವುದು ಚಾಲ್ತಿಯಲ್ಲಿದೆ. ಅತಿಯಾಗಿ ಕಳಲೆ ಸೇವಿಸುವುದರಿಂದ ಕೆಲವು ರೋಗಗಳಿಗೆ ಕಾರಣವಾಗಬಹುದು, ದೇಹವು ಕ್ಷೀಣವಾಗುತ್ತದೆ. ಭೀಮನ ಅಮಾವಾಸ್ಯೆ ಅಥವಾ ಆಷಾಢ (ಆಟಿ) ಅಮಾವಾಸ್ಯೆ ದಿನದಂದು ಹಸಿ ಹೊಟ್ಟೆಗೆ ಹಾಲೆ ಮರದ ತೊಗಟೆ ಕಷಾಯವನ್ನು ಸೇವಿಸುವ ಆಚರಣೆ ಇದೆ. ಮೆಂತ್ಯೆ, ಅಕ್ಕಿ ಮತ್ತು ಸಾಂಬಾರ ಮಸಾಲೆ ಹಾಕಿ ಪಾಯಸವನ್ನು ಮಾಡಲಾಗುತ್ತದೆ. ಕೆಲವೆಡೆ ಈ ದಿನದಂದು ಶಿವ ಪಾರ್ವತಿಯರಿಗೆ ಹಿಟ್ಟಿನಿಂದ ಮಾಡಿದ ತಂಬಿಟ್ಟು ದೀಪ ಹಚ್ಚಿ ಪೂಜೆ ಮಾಡಲಾಗುತ್ತದೆ. ಆಷಾಢ ಅಮಾವಾಸ್ಯೆ ದಿನದಂದು ಔಷಧಾಂಶ ಗರಿಷ್ಠವಾಗಿದ್ದು ಹಲವಾರು ವೈರಾಣುಗಳನ್ನು ತಡೆಗಟ್ಟಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಲೆ ಮರದ ಕಷಾಯವು ಜ್ವರ ನಿವಾರಣೆಗೆ ಸಹಾಯಕಾರಿ ಹಾಗು ಮಳೆಗಾಲದಲ್ಲಿನ ಹಲವಾರು ರೋಗಗಳಿಗೆ ರಾಮಬಾಣದಂತಿದೆ.


ಇನ್ನು ಕೇರಳ ಭಾಗದಲ್ಲಿ ಮಳೆಗಾಲವನ್ನು ಕರ್ಕಾಡಕ ತಿಂಗಳೆಂದು ಕರೆಯುತ್ತಾರೆ. ಈ ಸಂದರ್ಭದಲ್ಲಿ ದೈಹಿಕ ಹಾಗು ಮಾನಸಿಕ ಸ್ವಾಸ್ಥ್ಯಕ್ಕಾಗಿ ಹಲವಾರು ಕ್ರಮಗಳನ್ನು ಅನುಸರಿಸುತ್ತಾರೆ. ಅವುಗಳಲ್ಲಿ ನಿತ್ಯ ತೈಲ ಅಭ್ಯಂಜನ, ಔಷಧ ಗಂಜಿ ಸೇವಸೆ, ದಶಪುಷ್ಪಗಳ ಸೇವನೆ, ಸಾಯಂಕಾಲದ ಸಮಯದಲ್ಲಿ ರಾಮಾಯಣ ಪಾರಾಯಣ ಇತ್ಯಾದಿಗಳು. ನಿತ್ಯವೂ ತೈಲ ಅಭ್ಯಂಜನ ಮಾಡುವುದರಿಂದ ನರ ಮಂಡಲಗಳು ಪ್ರಚೋದನೆಗೊಂಡು ಹಲವಾರು ನೋವುಗಳನ್ನು ತಡೆಗಟ್ಟಿ ದೇಹ ದೃಢವಾಗಲು ಸಹಕಾರಿ; ಸುಸ್ತು, ಮುಪ್ಪನ್ನೂ ತಡೆಗಟ್ಟಬಹುದು. ಹಿಂದಿನ ಕಾಲದಲ್ಲಿ ಮಳೆಗಾಲವೆಂದರೆ ವ್ಯಾಪಾರ ವಹಿವಾಟಿನ ಚಟುವಟಿಕೆಗಳು ಮಂದಗತಿಯಲ್ಲಿದ್ದು, ಮನುಷ್ಯ ಮನೆಯನ್ನು ಸೇರುತ್ತಿದ್ದ. ಆ ಸಮಯದಲ್ಲಿ ಅಧ್ಯಾತ್ಮ ಚಿಂತನೆಯತ್ತ ಕೊಂಡೊಯ್ಯುವ ಪ್ರಯತ್ನವೇ ಈ ರಾಮಾಯಣ ಪಾರಾಯಣ, ಭಜನೆ ಇತ್ಯಾದಿ. ಅಧ್ಯಾತ್ಮ ಚಿಂತನೆಯು ಪಿತ್ತ ಸಮಸ್ಯೆಗೆ ಉಪಶಮನವೂ ಹೌದು. ಮಳೆಗಾಲದಲ್ಲಿ ದೇಹವು ತ್ರಿದೋಷಗಳಿಂದ ಬಾಧಿಸುವುದರಿಂದ ಸೂಕ್ತವಾದ ಪಂಚಕರ್ಮ ಉಪಚಾರದಿಂದ ನಿವಾರಣೆ ಮಾಡಿಕೊಳ್ಳುವುದು ಕರ್ಕಾಡಕ ಚಿಕಿತ್ಸೆ ಎಂದು ಕೇರಳದಲ್ಲಿ ಚಾಲ್ತಿಯಲ್ಲಿದೆ. ಆಯಾಯ ಪ್ರದೇಶಕ್ಕನುಗುಣವಾಗಿ ಆಹಾರ ವ್ಯತ್ಯಾಸಗಳಿರಬಹುದು. ಆದರೆ ಅವೆಲ್ಲವೂ ಆರೋಗ್ಯ ಸಂರಕ್ಷಣೆಗಾಗಿ ಮಾಡಿಕೊಳ್ಳಲಾಗಿದೆ. ನೈಸರ್ಗಿಕವಾಗಿ ಸಿಗುವಂತಹ ಹಣ್ಣು ತರಕಾರಿಗಳ ಸೇವನೆ, ಉತ್ತಮವಾದ ದಿನಚರ್ಯೆ, ಋತುಚರ್ಯೆ, ವ್ಯಾಯಾಮ, ಪ್ರಾಣಾಯಾಮವು ಆರೋಗ್ಯಕರವಾದ ಜೀವನಕ್ಕೆ ದಾರಿಗಳು.



Comentarios

Obtuvo 0 de 5 estrellas.
Aún no hay calificaciones

Los comentarios se han desactivado.
bottom of page