top of page

ರುಚಿ-ಘ್ರಾಣ ಶುದ್ಧಿಗೆ ಪಂಚಸೂತ್ರಗಳು

ಇಲ್ಲಿದೆ ಡಾ|| ಮನೋಜ್ ಮಿತ್ತಲ್, MBBS, MD ಇವರು ಹೇಳಿರುವ ೫ ಸರಳ ಉಪಾಯಗಳು

Ageusia and Anosmia Treatment Home Remedy Dr. Manoj Mittal MBBS, MD.


ಕನ್ನಡಕ್ಕೆ ಅನುವಾದ ಮತ್ತು ಹೆಚ್ಚಿನ ವಿಸ್ತಾರ - ಹೇಮಂತ್ ಕುಮಾರ್ ಜಿ.



ಈ ಕ್ರಮಗಳಿಂದ ಆದಷ್ಟು ಬೇಗ ರುಚಿ-ಘ್ರಾಣಗಳು ಬರುತ್ತವೆ ಎನ್ನುತ್ತಾರೆ. ಅವರು MBBS ಮಾಡುವಾಗ ಪ್ರತಿಯೊಂದು ಅಂಗಗಳನ್ನು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದರಂತೆ. ಮೂಗು-ಗಂಟಲು ಸೇರುವ ಮೇಲ್ಭಾಗದಿಂದ ಹೊರಡುವ ಆಲ್ಫ್ಯಾಟ್ರಿ ನರಗಳು ರುಚಿ-ಘ್ರಾಣ ಸಂಜ್ಞೆಯನ್ನು ಮಿದುಳಿಗೆ ತಲುಪಿಸುತ್ತವೆ. ಆ ನರಗಳ ಕೊನೆಗಳು ಕೆಲಸ ಮಾಡದಿದ್ದರೆ ಸಮಸ್ಯೆ ಎನ್ನಿಸುತ್ತದೆ. ತೀಕ್ಷ್ಣ ರಾಸಾಯನಿಕ ಸಂಕೀರ್ಣಗಳು ಮೂಗು ಅಥವಾ ನಾಲಗೆಯ ಮುಖೇನ ಈ ನರದ ಕೊನೆಗಳನ್ನು ಹೊಕ್ಕಾಗ ಸಂಜ್ಞಾಗ್ರಾಹಕಗಳು ಘಾತಿಸಲ್ಪಡಬಹುದು. ರುಚಿ ಎನ್ನಿಸಿದರೆ ತಾನೇ ಚೆನ್ನಾಗಿ ಆಹಾರ ಸ್ವೀಕರಿಸಿ ಶಕ್ತಿ ಕ್ಷೀಣತೆಯ ಸಮಸ್ಯೆ ಇಲ್ಲದಂತೆ ಆರೋಗ್ಯವಾಗಿರಲು ಸಾಧ್ಯ? ಘ್ರಾಣವಿಲ್ಲದಿದ್ದರೆ ಆಹಾರ, ವಿಹಾರಗಳೆಲ್ಲಾ ನೀರಸ ತಾನೇ? ಅದನ್ನು ಸರಿಪಡಿಸಲು ಐದು ಸರಳ ಸೂತ್ರಗಳಿವೆ.


೧. ಮನೆಮದ್ದು:- ಒಗ್ಗರಣೆ ಡಬ್ಬಿಯಲ್ಲಿದೆ ಜಗಿಯಬಹುದಾದ ಔಷಧ. ಜ್ಯೇಷ್ಠಮಧು; ತುಳಸೀ ಅರ್ಕ; ತಾಂಬೂಲ; ಇತ್ಯಾದಿ.


೨. ಏನನ್ನು ತಿನ್ನಬಾರದು? ರಾಸಾಯನಿಕಯುಕ್ತ ಉಪ್ಪು, ಸಕ್ಕರೆ, ಟೇಸ್ಟಿಂಗ್ ಪುಡಿ ಹಾಕಿದ ವಸ್ತುಗಳು, ಅತೀ ತಂಪು/ಬಿಸಿ ಪಾನೀಯ, ಮದ್ಯಪಾನ, ವಿದೇಶೀ ಆಹಾರಗಳು.


೩. ಉಪಾಸನಾ ಹೋಮಗಳು ಮತ್ತು ಧೂಪನ ಪ್ರಕ್ರಿಯೆ (ಗೋಮಯ + ಲೋಬಾನದ ಧೂಪ)


೪. ಪ್ರಾಣಾಯಾಮಗಳು:- ಶಂಖನಾದ, ಅನುಲೋಮ-ವಿಲೋಮ, ಶೀತಲೀ, ಶೀತ್ಕಾರೀ, ಭಸ್ತ್ರಿಕಾ, ಭ್ರಾಮರೀ, ಓಂಕಾರ ಜಪ.


೫. ಔಷಧೀಯ ಹಬೆ:- ಚುಟುಕಿ ಹಿಂಗು, ಮರುಗ ಪತ್ರೆ - ೫, ಚುಟುಕಿ ಓಮ ಕಾಳು, ೩ ಬಿಂದು ನೀಲಗಿರಿ ಎಣ್ಣೆ, ಕಾಲು ಭಾಗ ನಿಂಬೆ ರಸ ಇವುಗಳನ್ನು ಸೇರಿಸಿ ಕುದಿಸಿ ದಿನಕ್ಕೊಮ್ಮೆ ಹಬೆ ತೆಗೆದುಕೊಳ್ಳಿ.


ಇನ್ನು ಇವುಗಳ ಬಗ್ಗೆ ವಿಸ್ತೃತವಾದ ವಿವರಣೆ ನೀಡುತ್ತೇವೆ.


೧. ಮನೆಮದ್ದು:- (ವಿ.ಸೂ. ಪ್ರಕೃತಿಗೆ ಶ್ರದ್ಧಾ-ಭಕ್ತಿಯಿಂದ ನಮಿಸಿ ಯಾವುದಾದರೂ ಒಂದನ್ನು ಹಿಡಿದು ಬಳಸಬೇಕು; ಎಲ್ಲವನ್ನೂ ಅರ್ಧಂಬರ್ಧ ಬಳಸಬೇಡಿ. ಇಲ್ಲಿನ ಯಾವುದೇ ವಿಧಿಯನ್ನು ಮಾಡಲೇಬೇಕೆಂದು ನಾವು ಹೇಳುವುದಿಲ್ಲ; ಆಯ್ಕೆ ಸ್ವತಂತ್ರ. ಕಲಿಯದೆ ಏನಕ್ಕೇನೋ ಮಾಡಿಕೊಂಡರೆ ಬರಹಗಾರರು ಜವಾಬ್ದಾರರಲ್ಲ.)


೧.೧ ಅರ್ಧ ಇಂಚು ಉದ್ದದ ದಾಲ್ಚಿನ್ನಿ ಹಾಗೂ ಹೂವುಳ್ಳ ಲವಂಗ ಒಂದನ್ನು ದಿನದಲ್ಲಿ ೨-೩ ಸಲ ಜಗಿಯುತ್ತಿರಿ. ಕೆಲ ದಿನಗಳಲ್ಲಿ ರುಚಿ-ಘಾಣ ಶಕ್ತಿಗಳು ವೃದ್ಧಿಸುತ್ತವೆ.


೧.೨ ಇನ್ನು ಜ್ಯೇಷ್ಠಮಧುವನ್ನು ಜಗಿಯುತ್ತಿದ್ದರೂ ಇದೇ ಕೆಲಸ ಮಾಡುತ್ತದೆ.


೧.೩ ಇವು ಸಿಗಲಿಲ್ಲ ಎಂದರೆ ರಾಸಾಯನಿಕ ಇಲ್ಲದ ಅಡಿಕೆಯೂ ಕೆಲಸ ಮಾಡುತ್ತದೆ. ಹೊಗೆಸೊಪ್ಪು ಇತ್ಯಾದಿ ಮಾದಕ ದ್ರವ್ಯ ನಿಷಿದ್ಧ. ಇನ್ನು ನಮ್ಮ ಆಯುರ್ವೇದೋಕ್ತ ತಾಂಬೂಲವಂತೂ ಬಹಳ ಪರಿಣಾಮಕಾರಿ.


೧.೪ ಅರಿಸಿನ, ಮೆಂತೆ, ಒಣಶುಂಠಿಗಳನ್ನು ಪುಡಿ ಮಾಡಿಕೊಂಡು ಅರ್ಧ ಚಮಚದಷ್ಟು ಬಳಸಬಹುದು. ಆಯುರ್ವೇದದಲ್ಲಿ ಇದನ್ನು ನರ ವ್ಯೂಹ ಬಲದಾಯಕ ಎಂಬಂತೆ ವರ್ಣಿಸುತ್ತಾರೆ.


೧.೫ ತುಳಸಿಯ ಅರ್ಕವನ್ನು ೨-೩ ಚಮಚ ತೆಗೆದುಕೊಂಡು, ಒಂದು ಲೋಟ ನೀರಿನಲ್ಲಿ ಬೆರೆಸಿ ಕುಡಿಯಬಹುದು.


೨. ಏನನ್ನು ತಿನ್ನಬಾರದು? (ಪಥ್ಯ) ರಾಸಾಯನಿಕ ಉಪ್ಪು ಬೇಡ (ರಾಸಾಯನಿಕ ಬಳಸದ ಸಮುದ್ರ ಉಪ್ಪು ಬಳಸಿ), ಸಕ್ಕರೆ ಬೇಡ ಬೆಲ್ಲ ಬಳಸಿ, ಮೈದಾ ಬಿಡಿ, ಟೇಸ್ಟಿಂಗ್ ಪುಡಿಯುಕ್ತ ಆಹಾರ ತ್ಯಜಿಸಿ. ಕುರ್ಕುರೇ, ಲೇಸು, ಹಾಟ್-ಕೋಲ್ಡ್ ಡ್ರಿಂಕ್ಸ್, ವಿದೇಶೀ ಆಹಾರಗಳೆಲ್ಲಾ ತ್ಯಜಿಸಿ.


೩. ಉಪಾಸನಾ ಹೋಮಗಳು:- ನೆನಪಿಡಿ ಸುಮ್ಮನೆ ದ್ರವ್ಯ ಸುಡುವುದು ಹೋಮವಲ್ಲ. ಕೆಲ ವನಸ್ಪತಿಗಳನ್ನು ಸುಡುವಂತೆ ಧೂಪ ಹಾಕುವುದಕ್ಕೂ, ಹೋಮ ಮಾಡುವುದಕ್ಕೂ ವ್ಯತ್ಯಾಸವಿದೆ. ಸರಿಯಾದ ಶಾಸ್ತ್ರೀಯ ಕ್ರಮ ಕಲಿತು "ಅಗ್ನಿಮುಖ ಪ್ರಯೋಗ" ಪೂರ್ವಕವಾಗಿ ಆಯಾ ದೇವತೆಯನ್ನು ಉದ್ದೇಶಿಸಿ ಆಹುತಿ ಕೊಟ್ಟು ದೇವತೆಗಳಿಂದ ಫಲಿತಾಂಶ ಪಡೆಯುವುದು ಯಜ್ಞವಿಧಿಯಲ್ಲಿ ಬರುವ ಅಗ್ನಿಹೋತ್ರ ಎಂದಾಗುತ್ತದೆ. ಆಗ ಮಾತ್ರ ಫಲಿತಾಂಶ ಸಿಗುತ್ತದೆ. ಆದರೆ ಅಗ್ನಿಹೋತ್ರದ ಹೆಸರಿನಲ್ಲಿ ಇಂದು ಹಲವೆಡೆ ನಡೆಯುತ್ತಿರುವುದು ಯಜ್ಞ ಪ್ರಕ್ರಿಯೆಯಲ್ಲ, ಅದೊಂದು ಆಯುರ್ವೇದೀಯ "ಧೂಪನ ಪ್ರಕ್ರಿಯೆ". ಅದನ್ನೂ ಭಕ್ತಿ-ಭಾವದಿಂದ ಮಾಡಬೇಕು. ರಾಸಾಯನಿಕ ಊದುಬತ್ತಿಗಿಂತ ವನಸ್ಪತಿ ರಸಗಳಿಂದ ಕೆಂಡದ ಮೇಲೆ ಧೂಪ ಹಾಕುವುದು ಒಳ್ಳೆಯದು. ಅದಕ್ಕೆ ಸೆಗಣಿಯ ಬೆರಣಿ, ಲೋಬಾನ ಪ್ರಧಾನವಾಗಿ ಬಳಸಬಹುದು. ಇದನ್ನು ಭಾರತೀಯರಿಗೆ ಹೇಳಿಕೊಡಬೇಕಿಲ್ಲ, ನಮ್ಮ ನಿಮ್ಮ ಅಜ್ಜಿಯಂದಿರು ಸಾಕ್ಷಾತ್ ಧನ್ವಂತರಿ ಸ್ವರೂಪಿಣಿಯರು ಇದನ್ನು ನಮಗೆಲ್ಲಾ ಪ್ರಯೋಗಿಸುತ್ತಿದ್ದರು ಎಂಬುದು ತಿಳಿದೇ ಇದೆಯಲ್ಲವೇ?


೪. ಪ್ರಾಣಾಯಾಮ:- (ವಿ.ಸೂ. ಹೃದಯ ಸಮಸ್ಯೆ ಹಾಗೂ ಶ್ವಾಸಕೋಶದ ನಿರ್ಬಲತೆ ಇರುವವರು ತಮ್ಮ ದೈಹಿಕ ಶಕ್ತೆತೆಯನ್ನು ಆಧರಿಸಿ ಸರಿಯಾಗಿ ತಿಳಿದುಕೊಂಡವರಿಂದ ಕಲಿತು ಆಚರಿಸಿ. ಇಲ್ಲಿನ ಯಾವುದೇ ವಿಧಿಯನ್ನು ಮಾಡಲೇಬೇಕೆಂದು ನಾವು ಹೇಳುವುದಿಲ್ಲ; ಆಯ್ಕೆ ಸ್ವತಂತ್ರ. ಕಲಿಯದೆ ಏನಕ್ಕೇನೋ ಮಾಡಿಕೊಂಡರೆ ಬರಹಗಾರರು ಜವಾಬ್ದಾರರಲ್ಲ.)


೪.೧ ಶಂಖನಾದ ೩ ಸಲ:- ಕತ್ತಿನ ಮೇಲಿನ ಉದಾನ ವಾಯು ಶುದ್ಧಿ ಹಾಗೂ ಎಲ್ಲಾ ನರ-ನಾಡಿಗಳನ್ನು ಒಮ್ಮೆಗೆ ಜಾಗೃತಗೊಳಿಸುತ್ತದೆ.



೪.೨ ಅನುಲೋಮ ವಿಲೋಮ ಪ್ರಾಣಾಯಾಮ:- ಎಡ ಹೊಳ್ಳೆಯಿಂದ ದೀರ್ಘ ಉಸಿರು ಎಳೆದುಕೊಂಡು ಬಲ ಹೊಳ್ಳೆಯಿಂದ ಬಿಡುವುದು. ಹಾಗೇ ಬಲದಿಂದ ಎಡಕ್ಕೆ ಕೂಡ. ಹೀಗೆ ಕೆಲವು ಸಲ ಮಾಡಬಹುದು.


೪.೩ ಶೀತಲೀ ಪ್ರಾಣಾಯಾಮ:- ನೆಲದ ಮೇಲೆ ಹಾಸಿದ ಜಮಖಾನದ ಮೇಲೆ ಸ್ಥಿರವಾಗಿ, ನೇರವಾಗಿ ಕುಳಿತು ಕೊಳ್ಳುವುದು. ಎರಡೂ ಹಸ್ತಗಳು ತೊಡೆಯ ಮೇಲಿರಬೇಕು. ಭುಜಗಳು ಅಗಲವಾಗಿರಬೇಕು. ನೀವು ಅಭ್ಯಾಸ ಮಾಡುವ ಸ್ಥಳ ಸ್ವಚ್ಛ ಹಾಗೂ ನಿಶ್ಯಬ್ದವಾಗಿರಬೇಕು. ಮೂಗಿನ ಮೂಲಕ ಪೂರ್ಣ ಉಸಿರನ್ನು ಬಿಡುವುದು. ನಂತರ ನಾಲಿಗೆಯನ್ನು ಹೊರಗೆ ಚಾಚಿ ಸುರುಳಿಯಾಕಾರವಾಗಿ ಸುತ್ತಿ ತುಟಿಗಳಿಂದ ಬಿಗಿಗೊಳಿಸುವುದು. ನಾಲಿಗೆ ಮುಂಭಾಗದ ತುದಿಯ ರಂಧ್ರದಂತಿರುವ ಭಾಗದಿಂದ ಉಸಿರನ್ನು ತೆಗೆದುಕೊಳ್ಳುವುದು. ಉಸಿರು ತೆಗೆದುಕೊಳ್ಳುವಾಗ ಆಗುವ ತಂಪನ್ನು ಅನುಭವಿಸುವುದು. ಈಗ ನಾಲಿಗೆಯನ್ನು ಒಳಗಡೆ ತೆಗೆದುಕೊಳ್ಳುವುದು. ತುಟಿಗಳನ್ನು ಮುಚ್ಚಿ ಮೂಗಿನ ಮೂಲಕ ನಿಧಾನವಾಗಿ ಉಸಿರು ಬಿಡುವುದು. ಬಿಡುವಾಗ ಉಸಿರನ ಮೇಲೆ ಏಕಾಗ್ರತೆ ಇರಬೇಕು. ಪ್ರತಿದಿನ ೯ ಬಾರಿ ಪುನಾರಾವರ್ತಿಸಿ ಅಭ್ಯಾಸ ಮಾಡಬಹುದು.


೪.೪ ಶೀತ್ಕಾರೀ ಪ್ರಾಣಾಯಾಮ:- ಜಮಖಾನದ ಮೇಲೆ ನೇರವಾಗಿ, ಸ್ಥಿರವಾಗಿ ಕುಳಿತುಕೊಳ್ಳುವುದು. ಎರಡೂ ಹಸ್ತಗಳನ್ನು ತೊಡೆಗಳ ಮೇಲೆ ನೆಲಮುಖವಾಗಿರಿಸಿ. ಈಗ ನಾಲಿಗೆಯನ್ನು ಹೊರಕ್ಕೆ ಚಾಚಿ ಮೇಲ್ಮುಖವಾಗಿ ಮಡಚಿ ನಾಲಿಗೆಯ ತುದಿಯನ್ನು ಬಾಯಿ ಮೇಲಿನ ಅಂಗಳಕ್ಕೆ ಒತ್ತಿ ಹಿಡಿಯುವುದು. ನಾಲಿಗೆಯ ಎರಡೂ ಬದಿಗಳಲ್ಲಿ ಉಂಟಾಗುವ ಸಣ್ಣ ದ್ವಾರಗಳಿಂದ ಉಸಿರನ್ನು ತೆಗೆದುಕೊಳ್ಳುವುದು. ಉಸಿರು ತೆಗೆದುಕೊಳ್ಳುವಾಗ ಬಾಯಿಯಿಂದ ಗಂಟಲು, ಗಂಟಲಿನಿಂದ ಶ್ವಾಸಕೋಶದೆಡೆಗೆ ಆಗುತ್ತಿರುವ ಉಸಿರಿನ ತಂಪನ್ನು ಆಸ್ವಾದಿಸುವುದು. ಅನಂತರ ನಾಲಿಗೆಯನ್ನು ಒಳಕ್ಕೆಳೆದು ಕೊಂಡು ಬಾಯಿಯನ್ನು ಮುಚ್ಚಿ ಮೂಗಿನ ಮೂಲಕ ಉಸಿರನ್ನು ನಿಧಾನವಾಗಿ ಹೊರ ಹಾಕುವುದು. ಇದು ಶೀತ್ಕಾರಿ ಪ್ರಾಣಾಯಾಮದ ಒಂದು ಸುತ್ತು. ಇದೇ ರೀತಿ ೯ ಬಾರಿ ಉಸಿರಾಟದ ಮೇಲೆ ಮನಸ್ಸನ್ನು ಏಕಾಗ್ರಗೊಳಿಸಿ ಅಭ್ಯಾಸ ಮಾಡುವುದು. ರುಚಿ-ಘ್ರಾಣ ವಾಪಾಸ್ ಬರುವುದಕ್ಕಾಗಿ ಯಾವಾಗಲೇ ಆಗಲಿ ತಿನ್ನುವ ಮೊದಲು ಶೀತ್ಕಾರೀ ಮಾಡಿ ಸ್ವಲ್ಪ ಹೊತ್ತು ನಂತರ ತಿನ್ನುವುದು.


೪.೫ ಭಸ್ತ್ರಿಕಾ ಪ್ರಾಣಾಯಾಮ:- ವಜ್ರಾಸನ ಅಥವಾ ಪದ್ಮಾಸನದಲ್ಲಿ ಕುಳಿತುಕೊಳ್ಳುವುದು. ಬೆನ್ನು, ಕುತ್ತಿಗೆ ನೇರವಾಗಿಡುವುದು. ಇಡೀ ದೇಹವನ್ನು ಸಡಿಲ ಗೊಳಿಸುವುದು. ಮುಖದಲ್ಲಿ ಮಂದಹಾಸ ಇರಬೇಕು. ಎರಡು ಕೈಗಳನ್ನು ಭುಜದ ನೇರಕ್ಕೆ ಮೇಲಕ್ಕೆ ಚಾಚುತ್ತಾ ಮೂಗಿನ ಮೂಲಕ ಉಸಿರನ್ನು ತೆಗೆದುಕೊಳ್ಳುವುದು. ಊದು ಕುಲುಮೆಯ ಗಾಳಿ ಚೀಲದಂತೆ ಎದೆಯನ್ನು ಹಿಗ್ಗಿಸುವುದು. ನಂತರ ರಭಸವಾಗಿ ಮೂಗಿನ ಮೂಲಕವೇ ಉಸಿರು ಬಿಡುವಾಗ ಕೈಗಳನ್ನು ಎದೆಯ ಪಕ್ಕಕ್ಕೆ ಅರ್ಧಭಾಗ ಇಳಿಸುವುದು. ಇದೇ ಕ್ರಮವನ್ನು ಪ್ರಾರಂಭದಲ್ಲಿ ೪೦ ರಿಂದ ೫೦ ಬಾರಿ ಅಭ್ಯಾಸ ಮಾಡುವುದು. ಶ್ವಾಸಕೋಶವನ್ನು ಶುದ್ಧೀಕರಿಸಲು ಈ ಪ್ರಾಣಾಯಾಮವನ್ನು ಅಭ್ಯಾಸ ಮಾಡಬಹುದು.


೪.೬ ಭ್ರಾಮರೀ ಪ್ರಾಣಾಯಾಮ:- ಶ್ವಾಸವನ್ನು ಪೂರ್ಣವಾಗಿ ಒಳಗೆ ತುಂಬಿಕೊಂಡು ಮಧ್ಯಮಾ ಬೆರಳುಗಳಿಂದ ಮೂಗಿನ ಮೂಲದಲ್ಲಿ, ಕಣ್ಣುಗಳ ಹತ್ತಿರದಿಂದ ಎರಡೂ ಕಡೆಗೆ ಸ್ವಲ್ಪ ಒತ್ತಿ ಹಿಡಿಯುವುದು. ಮನಸ್ಸನ್ನು ಭ್ರೂಮಧ್ಯದಲ್ಲಿ ಕೇಂದ್ರೀಕರಿಸುವುದು. ಬೆರಳುಗಳಿಂದ ಎರಡೂ ಕಿವಿಗಳನ್ನು ಮುಚ್ಚುವುದು. ಈಗ ದುಂಬಿಯಂತೆ ’ಗುಂಯ್’ ಗುಡುತ್ತಾ, ನಾದರೂಪದಿಂದ ಓಂಕಾರದ ಜಪವನ್ನು ಮಾಡುತ್ತಾ ಶ್ವಾಸವನ್ನು ಹೊರಗೆ ಬಿಡುವುದು. ಪುನಃ ಇದೇ ರೀತಿ ಆವೃತ್ತಿ ಮಾಡುವುದು. ಈ ಪ್ರಕಾರವಾಗಿ, ಈ ಪ್ರಾಣಾಯಾಮವನ್ನು ಕಡಿಮೆಯೆಂದರೂ ಮೂರು ಬಾರಿ ಮಾಡಬಹುದು. ಅಧಿಕವಾಗಿ ೧೧-೨೧ ಬಾರಿಗಳವರೆಗೂ ಮಾಡಬಹುದು.


೪.೭ ಓಂಕಾರ ಜಪ:- ದೀರ್ಘ ಓಂಕಾರೋಚ್ಛಾರಣೆಯಿಂದ ಇಡೀ ದೇಹದ ನರನಾಡಿಗಳೆಲ್ಲಾ ಜಾಗೃತವಾಗುತ್ತವೆ ಎಂದು ಬಹಳಷ್ಟು ಸಂಶೋಧನೆಗಳು ನಡೆದಿವೆ.




೫. ಔಷಧೀಯ ಹಬೆ:- ಚುಟುಕಿ ಹಿಂಗು, ಮರುಗ ಪತ್ರೆ - ೫, ಚುಟುಕಿ ಓಮ ಕಾಳು, ೩ ಬಿಂದು ನೀಲಗಿರಿ ಎಣ್ಣೆ, ಕಾಲು ಭಾಗ ನಿಂಬೆ ರಸ ಇವುಗಳನ್ನು ಸೇರಿಸಿ ಕುದಿಸಿ ದಿನಕ್ಕೊಮ್ಮೆ ಹಬೆ ತೆಗೆದುಕೊಳ್ಳಿ.


Comments

Rated 0 out of 5 stars.
No ratings yet

Commenting has been turned off.
bottom of page