ವಿಶೇಷವಾಗಿ ದೂಷಿತ ನೀರು ಅಥವಾ ವಾಯುವಿನ ಕಾರಣದಿಂದಾಗುವ 21 ದಿನಗಳ ಅವಧಿಯ ಜ್ವರ. ಎಲ್ಲಾ ರೀತಿಯ ಅವಧಿ ಜ್ವರಗಳ ಗಣನೆಯು ಸನ್ನಿಪಾತದಲ್ಲಿ ಮಾಡಬೇಕು ಏಕೆಂದರೆ ಅವಧಿ ಜ್ವರದಲ್ಲಿ ವಾತ, ಪಿತ್ತ, ಹಾಗೂ ಕಫ ಎಂಬ ಮೂರೂ ದೋಷಗಳು ಕುಪಿತಗೊಂಡಿರುತ್ತವೆ.
ನಿದಾನ:-
ಸಾಮಾನ್ಯ ಕಾರಣಗಳು:-
1. ಹೆಚ್ಚು ಸುತ್ತಾಟ,
2. ಉಪವಾಸದಿಂದ ಕೃಶತೆ,
3. ಬಿಸಿಲಿನಲ್ಲಿ ತಿರುಗಾಟ,
4. ಮಲಿನ ಸ್ಥಳದಲ್ಲಿ ನಿವಾಸ,
5. ಮಲಾವರೋಧ
ವಿಶೇಷ ಕಾರಣಗಳು:-
1. ಮಲ-ಮೂತ್ರದ ಸಂಸರ್ಗಯುಕ್ತ ಜಲಪಾನ,
2. ತಿನಿಸುಗಳ ಮೇಲೆ ನೊಣಾದಿಗಳ ಸಂಸ್ಪರ್ಶ
3. ಕೀಟಾಣುಗಳು ಕರುಳು ಪ್ರವೇಶ, ರಸ-ರಕ್ತಾದಿ ಧಾತು ಹಾಗೂ ವಾತಾದಿ ದೋಷಗಳು ಅಚಿರ ಕಾಲದಲ್ಲಿ ಪ್ರಕುಪಿತವಾಗುವವು. ಮೊದಲು ಸಣ್ಣಕರುಳಿಗೆ ಸೇರಿ, ನಂತರ ರೋಗದ ಪ್ರಾಬಲ್ಯವಾಗಲು ಸ್ವಲ್ಪ ದೊಡ್ಡ ಕರುಳಿಗೂ ಪ್ರವೇಶಿಸುತ್ತವೆ.
4. ರೋಗವಾಗಲು ಕಠೋರ ಆಹಾರ ಸೇವಿಸಿದರೆ, ಕರುಳು ಕ್ಷತವಾಗಿ ರಕ್ತಭೇದಿಯಾಗುತ್ತದೆ.
5. ಸರಿಯಾದ ಚಿಕಿತ್ಸೆಯ ಅಭಾವದಿಂದ ಕರುಳು ತೂತವಾದರೆ (ಆಂತ್ರ ಭೇದ/ಛೇದ), ರೋಗವು ಅಸಾಧ್ಯವಾಗಿ ಶಲ್ಯಕ್ರಿಯೆಯನ್ನೇ (ಶಸ್ತ್ರಚಿಕಿತ್ಸೆ) ಮಾಡಬೇಕಾದೀತು.
ಪೂರ್ವರೂಪ:-
⦁ ಶಿರಃಶೂಲ,
⦁ ಅರುಚಿ,
⦁ ಅಂಗಗಳು ಅಂಟಿಕೊಳ್ಳುವವು,
⦁ ಮಲಾವರೋಧ,
⦁ ಚಡಪಡಿಕೆ,
⦁ ತಲೆಸುತ್ತು,
⦁ ಶರೀರ ಭಾರವಾಗುವುದು,
⦁ ಬಾಯಿರುಚಿ ಕೆಡುವುದು ಹಾಗೂ
⦁ ದದ್ದು ಇತ್ಯಾದಿ ಲಕ್ಷಣಗಳು ಇರುತ್ತವೆ.
⦁ ಇವುಗಳಲ್ಲೆ ಕೆಲವು ಲಕ್ಷಣಗಳು ಸ್ಪಷ್ಟವಾಗಿ ಕಂಡುಬಂದರೆ ಕೆಲವು ಕಂಡುಬರುವುದಿಲ್ಲ.
ರೂಪ:-
ಜ್ವರದಿಂದ ಮೇಲ್ಕಂಡ ಅಸ್ಪಷ್ಟ ಲಕ್ಷಣವು ಒಂದು ವಾರದಲ್ಲಿ ಸ್ಪಷ್ಟವಾಗಿ ಕಾಣಲಾರಂಭಿಸುತ್ತದೆ. ಈ ಜ್ವರದ ತಾಪಮಾನವು ಆರಂಭಿಕ 5 ದಿನಗಳವರೆಗೆ ಮೆಟ್ಟಿಲು ಹತ್ತುವಂತೆ ದಿನೇ ದಿನೇ ಅಂದಾಜು ಒಂದೊಂದು ಡಿಗ್ರಿ ಕ್ರಮವಾಗಿ ಹೆಚ್ಚುತ್ತಾ ಹೋಗುತ್ತದೆ. ನಂತರ ಮೂರನೆಯ ವಾರದಲ್ಲಿ ಅದೇ ಕ್ರಮಾನುಸಾರ ಇಳಿಯುತ್ತಾ ಹೋಗುತ್ತದೆ. ಹೆಚ್ಚಾಗಿ ಮೊದಲ ವಾರದಲ್ಲಿ ಸ್ವಲ್ಪ ಪ್ಲೀಹವೃದ್ಧಿ (Spleen augmentation) ಆಗುತ್ತದೆ. 7 ದಿನಗಳಾಗಲು ಗುಲಾಬಿ ಬಣ್ಣದ ಗುಳ್ಳೆಗಳು ಕಂಠದ ಮೇಲೆ ಉಂಟಾಗುತ್ತವೆ. ಆದರೆ ದೇಹವು ಬೆಳ್ಳಗಿದ್ದರೆ, ಸ್ಪಷ್ಟವಾಗಿ ಗುಳ್ಳೆಗಳು ಕಾಣದಿರಬಹುದು. ಪ್ರಾಯಶಃ 5 ದಿನಗಳ ನಂತರ ಕಡಲೆಯಂತಹಾ ಹಳದಿ ದದ್ದುಗಳಾಗುತ್ತವೆ; ಹಾಗೂ ಹೊಟ್ಟೆಯುಬ್ಬರ ಕೂಡ ಬರುತ್ತದೆ.
ಎರಡನೆಯ ವಾರ ಜ್ವರವು ಹೆಚ್ಚಿ ಸ್ಥಿರವಾಗುತ್ತದೆ. ಸಂಜೆಗೆ ಇಳಿಯಲಾರಂಭಿಸುತ್ತದೆ. ನಂತರ ಬೆಳಗ್ಗೆ ಸುಸ್ಥಿತಿಗೆ ಬರುತ್ತದೆ. ಅತಿ ದಣಿವು, ಬಾಯಿ ಒಣಗುವುದು, ಪ್ರಜ್ಞಾಹೀನತೆ, ಕೆಮ್ಮು, ಪ್ರಲಾಪ, ದುರ್ಬಲತೆ, ಹೊಟ್ಟೆಯುಬ್ಬರ, ನಾಲಗೆ ಸೀಳುವುದು, ನಾಲಗೆ ಬದಿ ಕೆಂಪಾಗುವುದು, ನಾಲಗೆಯ ಮೇಲೆ ಹೆಚ್ಚು ಅಗ್ರ ಸಂಗ್ರಹ ಹಾಗೂ ಮಾನಸಿಕ ಸಂತಾಪ, ಈ ಲಕ್ಷಣಗಳು ಹೆಚ್ಚುತ್ತವೆ. ಎಷ್ಟು ಜ್ವರದ ವೇಗ ಇರುತ್ತದೆಯೋ ಅಷ್ಟು ಧಮನಿಯಲ್ಲಿ ಚಂಚಲತೆ ಇರುವುದಿಲ್ಲ (ನಾಡಿಯು ಅಪೇಕ್ಷೆಗಿಂತ ಮಂದವಾಗಿರುತ್ತದೆ). ಇದಲ್ಲದೆ ಸನ್ನಿಪಾತದ ಕೆಲ ಉಪದ್ರವಗಳೂ ಉಂಟಾಗುತ್ತದೆ.
ಮೂರನೆಯ ವಾರದಲ್ಲಿ ದದ್ದುಗಳು ಹೇಗೇಗೆ ನಾಭಿಯ ಕೆಳಗೆ ತಲುಪುವವೋ, ಹಾಗಾಗೆ ಶರೀರದ ತಾಪವು ಕಡಿಮೆಯಾಗುತ್ತಾ ಹೋಗುತ್ತದೆ. ಕೆಲವೊಮ್ಮೆ ಬಹಳ ವೇಗದಿಂದ ನಾಭಿಯ ಕೆಳಗೆ ಹೋಗುತ್ತಲೇ ಜೊತೆಜೊತೆಗೆ ಜ್ವರದ ವೇಗವೂ ತಗ್ಗುತ್ತಾ ಬಂದು ಬೆವರು ಬರುತ್ತದೆ. ಹೀಗಾಗುವಾಗ ಪರಿಚಾರಕ ಮತ್ತು ಉಪಚಾರಕ ವೈದ್ಯರು ಬಹಳ ಸಾವಧಾನ ವಹಿಸಬೇಕು. ಇಲ್ಲದಿದ್ದರೆ ಜ್ವರವು ಒಮ್ಮಿಂದೊಮ್ಮೆ ಇಳಿಯುವುದರಿಂದ ಶೀತಾಂಗ ಸನ್ನಿಪಾತವಾಗಿ ಕೂಡಲೇ ರೋಗಿಯ ಪ್ರಾಣವಿಯೋಗವಾಗಬಹುದು.
ಮೂರನೆಯ ವಾರದಲ್ಲಿ ರೋಗಿಯ ಹೃದಯ, ಮಿದುಳು ಹಾಗೂ ಶ್ವಾಸಕೋಶದ ಪೂರ್ತಿ ರಕ್ಷಣೆಯೊಂದಿಗೆ ಜ್ವರದ ತಾಪಮಾನವು ಸ್ವಾಭಾವಿಕತೆಗಿಂತ ಕಡಿಮೆಯಾಗಲು ಬಿಡಬಾರದು. ದದ್ದುಗಳು ಹೋದ ನಂತರ ಜ್ವರದ ಕೊನೆಯ ಅವಸ್ಥೆ ಆರಂಭ. ಜ್ವರ ಕಡಿಮೆಯಾಗಲು ಶುರುವಾಗುತ್ತದೆ. ರೋಗಿಗೆ ನಿಧಾನವಾಗಿ ಶಾಂತವಾದ ನಿದ್ರೆಯೂ ಬರುತ್ತದೆ. ಮಲಪಾಕವಾಗಿ ನಿಧಾನವಾಗಿ ಬೆವರು ಹೊರಹೋಗುತ್ತದೆ. ಪ್ರಜ್ಞಾಹೀನತೆ ಆಗುವುದಿಲ್ಲ. ದೇಹವು ಹಗುರವಾದಂತೆ ಅನ್ನಿಸುತ್ತದೆ. ಉದರ ವಾಯುವು ಅನುಲೋಮವಾಗುತ್ತದೆ. ಇದರಿಂದ ಕೆಲ ಶಬ್ದಗಳೊಂದಿಗೆ ಅಪಾನ ವಾಯುವು ಗುದ ಮಾರ್ಗದಿಂದ ಹೊರ ಹೋಗುತ್ತದೆ. ಈ ಎಲ್ಲಾ ಕ್ರಿಯೆಗಳು ಸುಧಾರಿಸಿದ ಮೇಲೆ ಜ್ವರ ಮುಕ್ತಿಯ ಎಲ್ಲಾ ಲಕ್ಷಣಗಳು ಕಾಣಲಾರಂಭಿಸುತ್ತವೆ.
ಸಾಮಾನ್ಯವಾಗಿ ಮೂರನೆಯ ವಾರ ಅಥವಾ ನಾಲ್ಕನೆಯ ವಾರದಲ್ಲಿ ಜ್ವರವು ಮೆಲ್ಲಮೆಲ್ಲಗೆ ಕಡಿಮೆಯಾಗಿ ಇಳಿಯುತ್ತದೆ. ಯೋಗ್ಯ ಚಿಕಿತ್ಸೆಯಾದರೆ 22ನೇ ದಿನಕ್ಕೆ ಜ್ವರವು ಹೊರಟು ಹೋಗುತ್ತದೆ. ಒಂದುವೇಳೆ 10 ದಿನಗಳ ನಂತರ ದಾರುಣ ಸ್ರಾವವಾಗಲು ಆರಂಭಿಸಿದರೆ ರೋಗವು ಅತಿ ಕಷ್ಟ ಸಾಧ್ಯವಾಗುತ್ತದೆ. ಕೆಲವೊಬ್ಬರಿಗೆ ಕಿವುಡು, ಮೂಗತನ, ಇತ್ಯಾದಿ ಉಪದ್ರವಗಳಾಗುತ್ತವೆ. ಹೆಚ್ಚಾಗಿ ತುರ್ತು ಚಿಕಿತ್ಸೆಯಿಂದ ಅವು ಶಮನವಾಗುತ್ತವೆ. ಕೆಲವೊಂದು ಶಮನವಾಗದೆಯೂ ಇರಬಹುದು ಹಾಗೂ ಶಾಶ್ವತವಾಗಿ ಉಳಿದುಬಿಡಬಹುದು.
ಘಾತಕ ಉಪದ್ರವ:-
ಈ ಜ್ವರದಲ್ಲಿ ಕೆಲವೊಮ್ಮೆ ಅತಿಸಾರ, ಮಲಾವರೋಧ, ಶ್ವಸನಕ (Neumonia), ಶ್ವಾಸ, ರಕ್ತಪಿತ್ತ, ಭಯಂಕರ ಪ್ರಲಾಪ, ಶೀತಾಂಗ-ಸನ್ನಿಪಾತ, ವೇಗಾವರೋಧ ಇತ್ಯಾದಿ ಉಪದ್ರವಗಳಲ್ಲಿ ಯಾವುದಾದರೂ ಪ್ರಾಪ್ತವಾಗಬಹುದು. ಇವುಗಳಿಗೆ ಶೀಘ್ರ ಪ್ರತಿಕಾರ ಮಾಡದಿದ್ದರೆ ದುಃಖಪ್ರದವಾಗುತ್ತವೆ.
ಈ ಸನ್ನಿಪಾತದಲ್ಲಿ ಸಣ್ಣ ಕರುಳಿನ ಕೊನೆ ಭಾಗದಲ್ಲಿ ವಿಶೇಷ ವಿಕೃತಿಯಾಗುತ್ತದೆ. ಜೊತೆಗೆ ಯಕೃತ್ (Liver), ಪ್ಲೀಹ (Spleen), ಪಕ್ವಾಶಯ (Stomach), ಗ್ರಹಣಿ (Duodenum) ಹಾಗೂ ಎಲ್ಲಾ ಪಿತ್ತ ಸ್ಥಾನಗಳು ದೂಷಿತವಾಗುತ್ತವೆ.
ವಾತ ಹಾಗೂ ಕಫದ ಸ್ಥಾನಗಳಲ್ಲಿ ವಿಕೃತಿ ಕಡಿಮೆ ಇರುತ್ತದೆ. ವಿಶೇಷವಾಗಿ ವಿಕೃತಿಯು ಕರುಳಿನಲ್ಲಾಗುತ್ತದೆ. ಈ ಹೇತುವಿನಿಂದ ಸಿದ್ಧಾಂತ ನಿದಾನಕಾರರು ಈ ರೋಗಕ್ಕೆ ಆಂತ್ರಿಕ ಜ್ವರ ಎಂಬ ಸಂಜ್ಞೆ ನೀಡಿದ್ದಾರೆ. ರುಗ್ದಾಹ ಸನ್ನಿಪಾತದ ಅನೇಕ ಲಕ್ಷಣಗಳು ಈ ಜ್ವರದಲ್ಲಿ ಪ್ರತೀತವಾಗುತ್ತವೆ. ಈ ಜ್ವರದಲ್ಲಿ ದೋಷಾಪಾಚನ ಹಾಗೂ ಪಿತ್ತಶಾಮಕ ಔಷಧದ ಉಪಚಾರವನ್ನು ಪ್ರಧಾನವಾಗಿ ನಡೆಸಲಾಗುತ್ತದೆ.
ಚಿಕಿತ್ಸೋಪಯೋಗೀ ಸೂಚನೆ:-
ಕೆಲ ಪ್ರದೇಶಗಳಲ್ಲಿ ವಿಶೇಷವಾಗಿ 99 ಪ್ರತಿಶತ ರೋಗಿಗಳು ದೂಷಿತ ಜಲದಿಂದ ರೋಗಾಕ್ರಾಂತರಾಗುತ್ತಾರೆ; ಹಾಗಾಗಿ ನೀರನ್ನು ಬಿಸಿ ಮಾಡಿ ನಂತರ ತಣಿಸಿ ಸೋಸಿ ಕುಡಿಸುತ್ತಿರಿ. ಹಲವು ಸಲ ಹಾಲು ಮಾರುವವರು ಹಾಲಿನಲ್ಲಿ ದೂಷಿತ ಜಲ ಸೇರಿಸುತ್ತಾರೆ, ಅಥವಾ ದೂಷಿತ ಜಲದಿಂದ ಪಾತ್ರೆ ತೊಳೆದಿರುತ್ತಾರೆ. ಹಾಲಿನಲ್ಲಿ ಕೀಟಾಣು ಸೇರಿಕೊಂಡರೆ ಸ್ವಲ್ಪವೇ ಸಮಯದಲ್ಲಿ ವಿಶೇಷ ಪರಿಣಾಮಗಳು ಹೆಚ್ಚುತ್ತವೆ. ಈ ಕಾರಣದಿಂದ ಹಾಲನ್ನು 3-4 ಉಕ್ಕಿಬರುವಂತೆ ಉರಿ ಹೆಚ್ಚು ಕಡಿಮೆ ಮಾಡುತ್ತಾ ಕುದಿಸಬೇಕು. ಮಲದಿಂದ ಹೊರಡುವ ಬಾಷ್ಪದಿಂದಲೂ ಈ ರೋಗದ ಕೀಟಾಣು ಇನ್ನೊಬ್ಬರಿಗೆ ತಲುಪಲು ಸಾಧ್ಯ. ಹಾಗಾಗಿ ಶೌಚಾಲಯವನ್ನು ಸ್ವಚ್ಛವಾಗಿಡಬೇಕು.
ರೋಗಿಗೆ ಬೆಳಕು ಹಾಗೂ ಶುದ್ಧ ಗಾಳಿ ಸುಳಿದಾಡುವ ಕೋಣೆಯಲ್ಲಿರಿಸಬೇಕು. ಶರೀರ, ವಸ್ತ್ರ, ಕೋಣೆ ಇತ್ಯಾದಿ ಸ್ವಚ್ಛವಿರಬೇಕು. ಶೌಚಾಲಯದ ಸಲಕರಣೆಗಳಿಗೆ ಕೀಟಾಣು ನಾಶಕ ದ್ರವ ಸೇರಿಸಿ ಬಾರಂಬಾರಿ ಶುದ್ಧಗೊಳಿಸುತ್ತಿರಬೇಕು. ಬಿಸಿ ನೀರಿನಲ್ಲಿ ಬಟ್ಟೆಯನ್ನು ಅದ್ದಿ ರೋಗಿಯ ಪ್ರತಿಯೊಂದು ಅವಯವಗಳನ್ನು ಪ್ರತಿದಿನ ವರೆಸಬೇಕು. ಇದರಿಂದ ಬೆವರಿನ ರಂಧ್ರಗಳು ತೆರೆದಿರುತ್ತವೆ ಹಾಗೂ ಜ್ವರದ ಬಿಸಿಯು ಹ್ರಾಸವಾಗುತ್ತದೆ.
ಮನೆಯೊಳಗೆ ನೊಣಗಳು ಪ್ರವೇಶಿಸದಂತೆ ನೋಡಿಕೊಳ್ಳಬೇಕು. ರೋಗಿಗೆ ವಿಶೇಷ ಸಂತಾಪವಾಗದಿರಲಿ, ಆ ರೀತಿ ಶಾಂತಿಪೂರ್ವಕ ಮಲಗಿಸಿರಬೇಕು. ವಿಶೇಷವಾಗಿ ಅವರಿದ್ದಲ್ಲಿ ಹರಟೆ ಹೊಡೆಯದಿರಿ.
ರೋಗಿಯ ಹಾಸಿಗೆ ಸರಿಯಾಗಿ ಸಮತಟ್ಟು ಮಾಡಿ ಹಾಗೂ ಮೆತ್ತಗಿರುವಂತೆ ನೋಡಿಕೊಳ್ಳಬೇಕು. ಅನೇಕ ದಿನಗಳವರೆಗೆ ಹಾಸಿಗೆ ಹಿಡಿಯುವುದರಿಂದ ಶಯ್ಯಾವ್ರಣವಾಗದಿರಲಿ. ಹಾಸಿಗೆಯ ಮೇಲಿನ ಹೊದಿಕೆಯನ್ನು ಪ್ರತಿದಿನ ಬದಲಿಸುತ್ತಿರಬೇಕು.
ಈ ರೋಗದಲಿ ಕರುಳಿನ ಶ್ಲೈಷ್ಮಿಕ ಕಲೆ ಪ್ರದಾಹಯುಕ್ತವಾಗುತ್ತದೆ. ಹಾಗಾಗಿ ಆಮಾಶಯದಲ್ಲಿಯೇ ವಿಶೇಷಾಂಶದ ಪಚನವಾಗುವಂತಹಾ ಆಹಾರದ ವ್ಯವಸ್ಥೆ ಮಾಡಬೇಕು. ಈ ರೀತಿಯ ಸರ್ವೋತ್ತಮ ಆಹಾರವೆಂದರೆ ಹಸುವಿನ ಹಾಲು.
ಹಲವು ಮಂದಿ ಮದ್ಯವ್ಯಸನಿಗಳಿರುತ್ತಾರೆ. ಅವರಿಗೆ ಪ್ರಾರಂಭದಲ್ಲಿ ಮದ್ಯ ನೀಡಬಾರದು. ವ್ಯಸನದ ಕಾರಣ ನಿರ್ಬಲತೆಯಾದರೆ ಸ್ವಲ್ಪವೇ ಸಸ್ಯ/ವೃಕ್ಷ ಜನ್ಯ ಮದ್ಯ ಕೊಡುವುದರಿಂದ ಬಲಕ್ಷಯವಾಗುವುದಿಲ್ಲ. ನೆನಪಿಡಿ ಇದು ಮದ್ಯವ್ಯಸನಿಗಳಿಗೆ ಮಾತ್ರ ಹಾಗೂ ಆಧುನಿಕ ರಾಸಾಯನಿಕ ಸ್ಪಿರಿಟ್ ಕೊಡುವುದಲ್ಲ.
ಹಲ್ಲುಗಳು ಹಾಗೂ ಬಾಯಿಯನ್ನು ಸ್ವಚ್ಛವಾಗಿಡಲಿಕ್ಕೆ ಜಾಲಿಯ ಚಕ್ಕೆಯನ್ನು (ಬಬೂಲ್) ಕುದಿಸಿ ಬಳೆಗಾರ (ಟಂಕಣ/Borax) ಹಾಗೂ ಸೈಂಧವ ಲವಣವನ್ನು ಸ್ವಲ್ಪವೇ ಸೇರಿಸಿ ಬೆಳಗ್ಗೆ ಸಾಯಂಕಾಲ ಬಾಯಿ ಮುಕ್ಕಳಿಸಬೇಕು ಅಥವಾ ನಿಂಬೆಯ ರಸದಲ್ಲಿ ಕುದಿಸಿದ ಜಲವನ್ನು ಸೇರಿಸಿ ಮುಕ್ಕಳಿಸಬೇಕು.
ಈ ರೋಗದಲ್ಲಿ ಕ್ವಿನೈನ್ ಕೊಡಬಾರದು. ಕ್ವಿನೈನ್ ಕೊಟ್ಟರೆ ಜ್ವರ ವಿಶೇಷವಾಗಿ ಪ್ರಕುಪಿತವಾಗುತ್ತದೆ ಹಾಗೂ ಅತಿಸಾರವನ್ನು ತಡೆಗಟ್ಟಲಿಕ್ಕಾಗಿ ತತ್ಸಂಬಂಧೀ ಸ್ತಂಭಕ ಔಷಧಿಗಳ ಪ್ರಯೋಗ ಮಾಡಬಾರದು.
ಪ್ರಲಾಪ, ನಿದ್ರಾನಾಶ ಅಥವಾ ರಕ್ತಸ್ರಾವವಾದರೆ, ಕೂಡಲೇ ಅದನ್ನು ನಿಲ್ಲಿಸುವ ಪ್ರಯತ್ನ ಮಾಡಬೇಕು.
ವಾಂತಿಯಾದರೆ ಮೂಸಂಬಿ ಅಥವಾ ದಾಳಿಂಬೆಯ ರಸವು ವಿಶೇಷ ಲಾಭಕಾರಿ. ನೀಲಗಿರಿ ತೈಲದ 3-4 ಬಿಂದುಗಳನ್ನು ಸಕ್ಕರೆಯೊಂದಿಗೆ ತಿನ್ನಲು ಕೊಡಲಾಗುತ್ತದೆ.
ಬಾಯಿ ಒಣಗಿದ್ದರೆ ಸಕ್ಕರೆ ಹಚ್ಚಬಹುದು.
ವಾಯುಪ್ರಕೋಪ (ಗ್ಯಾಸ್ಟ್ರಿಕ್) ಹೆಚ್ಚಾದರೆ ಉದರದ ಮೇಲೆ ಹಿಂಗಿನ ಲೇಪ ಹಾಕಿ ಅಥವಾ ಟರ್ಪೆಂಟೈನ್ ಎಣ್ಣೆಯಿಂದ ಮಾಲಿಶ್ ಮಾಡಬಹುದು. ಟರ್ಪೆಂಟೈನಿನ ಪಿಚಕಾರಿಯೂ ಮಾಡಬಹುದು. ಅತಿಸಾರವು ಪ್ರಬಲವಾದರೆ ಟರ್ಪೆಂಟೈನ್ ಪಿಚಕಾರಿ ನೀಡಬಹುದು.
ರೋಗ ದೂರವಾದರೂ ಕಠಿಣ ಭೋಜನವನ್ನು 15 ದಿನಗಳವರೆಗೆ ನೀಡಬಾರದು. ಅನ್ನವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಪ್ರಾರಂಭಿಸಿ, ಸ್ವಲ್ಪ-ಸ್ವಲ್ಪವೇ ಹೆಚ್ಚಿಸುತ್ತಾ ಸಾಗಬೇಕು.
ಒಂದುವೇಳೆ ಶಿರಾಪ್ರದಾಹ ಇತ್ಯಾದಿ ವಿಶೇಷ ರೀತಿಯ ಉಪದ್ರವ ಉಪಸ್ಥಿತವಾದರೆ, ತತ್ಕಾಲ ಅದಕ್ಕೆ ಚಿಕಿತ್ಸೆಯನ್ನು ಶಾಸ್ತ್ರೀಯ ಪದ್ಧತಿಯಿಂದ ಮಾಡಬೇಕು.
ಶಿರಾಪ್ರದಾಹವಾದರೆ ಆಕ್ರಾಂತ ಸ್ಥಾನದ ಸ್ವಲ್ಪ ಮೇಲ್ಗಡೆ ಪಟ್ಟಿ ಹಾಕಬೇಕು. ಇದರಿಂದ ವಿಷವು ಮೇಲಕ್ಕೆ ಹೋಗುವುದಿಲ್ಲ. ಪೀಡಿತ ಸ್ಥಾನಕ್ಕೂ ಯಥಾ ನಿಯಮ ಉಪಚಾರ ಮಾಡಬೇಕು.
ಅಕಸ್ಮಾತ್ ಶಕ್ತಿಗುಂದಿದರೆ ಈ ಜ್ವರಕ್ಕೆ ಸಂಬಂಧಿಸಿದ ಶಾಸ್ತ್ರೀಯ ಔಷಧಗಳನ್ನು ನೀಡಿ ಶಕ್ತಿಯ ಸಂರಕ್ಷಣೆ ಮಾಡಬೇಕು. ಪ್ರಜ್ಞಾಹೀನತೆ ಹೆಚ್ಚಾದರೆ ಹೃದಯಾವರೋಧದ ಭಯವಿರುತ್ತದೆ. ಕೂಡಲೇ ಹೃದಯಪೌಷ್ಟಿಕ ಔಷಧ ನೀಡಬೇಕು.
ರೋಗಿಗೆ ಪೂರ್ಣ ವಿಶ್ರಾಂತಿ ನೀಡಬೇಕು. ಪ್ರಾರಂಭದಲ್ಲಿ ಕೋಷ್ಠಬದ್ಧತೆಯಾದರೆ, ಮೃದು ವಿರೇಚನ ನೀಡಿ. ಪರಿಚಾರಕರಿಗೆ ಸ್ವಚ್ಛತೆಯ ವಿಶೇಷ ಲಕ್ಷ್ಯವಿರಬೇಕು.
ಈ ಆಂತ್ರಿಕ ಜ್ವರದಲ್ಲಿ ಮರೆತೂ, ಅಥವಾ ಹಠ ಪೂರ್ವಕ ಜ್ವರವನ್ನು ದೂರೀಕರಿಸುವ ಔಷಧ ನೀಡಬಾರದು. ಧಾತುಗತ ದೋಷಗಳನ್ನು ಸ್ವಲ್ಪಸ್ವಲ್ಪವೇ ಪಚನಗೊಳಿಸಿ ಲಕ್ಷಣಗಳನ್ನು ಶಮನಗೊಳಿಸಬೇಕು. ಪಿತ್ತಶಾಮಕ ಔಷಧಿಯನ್ನು ಯೋಜಿಸಬೇಕು.
ಒಂದುವೇಳೆ ತೀವ್ರ ಪ್ರಲಾಪ ಅಥವಾ ನ್ಯುಮೋನಿಯಾದಿ ಉಪದ್ರವಗಳು ಉಂಟಾದರೆ ತತ್ಕಾಲ ಉಪದ್ರವನಾಶಕ ಚಿಕಿತ್ಸೆ ನೀಡಬೇಕು.
ಭೋಜನಕ್ಕೆ ಬೆಳಗ್ಗೆ-ಸಂಜೆ ಹಾಲು ಹಾಗೂ ಮಧ್ಯಾಹ್ನಕ್ಕೆ ಮೂಸಂಬಿಯ ರಸ ನೀಡಬೇಕು. ಹಾಲಿನ ಬದಲಿಗೆ ಸಜ್ಜೆ ಗಂಜಿ ಇತ್ಯಾದಿಗಳನ್ನು ಕೆಲ ವೈದ್ಯರು ಹೇಳುತ್ತಾರೆ, ಆದರೆ ಹಾಲಿಗೆ ಮಿಗಿಲಾಗಿ ಯಾವುದೂ ಇಲ್ಲಿ ಲಾಭದಾಯಕವಲ್ಲ. ಏಕೆಂದರೆ, ಈ ಜ್ವರದಲ್ಲಿ ಹೆಚ್ಚಾಗಿ ಕರುಳು ವಿಕೃತಿಯೇ ಆಗುತ್ತದೆ. ಅಂತಹಾ ಸಮಯದಲ್ಲಿ ಕರುಳಿಗೆ ಆದಷ್ಟು ಕಡಿಮೆ ಕೆಲಸ ಪಡೆಯಬೇಕು ಹಾಗೂ ಶಾಂತವಾಗಿಡಬೇಕು. ಸಜ್ಜೆ ಗಂಜಿ ತಿಂದರೆ ಪಚನಕ್ಕೆ ಕರುಳಿಗೆ ಹೆಚ್ಚು ಶ್ರಮವಾಗುತ್ತದೆ, ಅದರಿಂದ ಉದರವು ಹೆಚ್ಚು ದೂಷಿತ ಹಾಗೂ ರೋಗಿಯಾಗುತ್ತದೆ.
ರೋಗಾರಂಭದಲ್ಲಿ 2-4 ದಿನ ಕೇವಲ ಜಲಪಾನದಲ್ಲಿರಿ, ನಂತರ ಹಾಲು ಹಾಗೂ ಮೂಸಂಬಿಯ ರಸ ನೀಡಲ್ಪಡಲಿ. ಆಗ ಅದರ ಅಧಿಕಾಂಶ ಸತ್ವವು ಹೊಟ್ಟೆಯಲ್ಲಿಯೇ ಶೋಷಣವಾಗುತ್ತದೆ. ಹಾಲಿನ ಪಚನಕ್ಕೆ ಹೋಲಿಸಿದರೆ ಕರುಳಿಗೆ ಸಜ್ಜೆ ಗಂಜಿಯ ಪಚನವು ತ್ರಾಸದಾಯಕ. ಇದಲ್ಲದೆ ಹಾಲು ಹಾಗೂ ಮೂಸಂಬಿ ರಸದಲ್ಲಿರುವವರ ಮಲಕ್ಕೆ ಹೋಲಿಸಿದರೆ ಸಜ್ಜೆಯ ಮಲವು ಹೆಚ್ಚು ದುರ್ಗಂಧಯುತವಾಗಿರುತ್ತದೆ. ಹೋಲಿಸಿದರೆ ಸಜ್ಜೆ ತಿನ್ನುವ ಕರುಳುಜ್ವರದ ರೋಗಿಗೆ ನಿರ್ಬಲತೆಯೂ ಹೆಚ್ಚಾಗುತ್ತದೆ.
ಕೆಲವೊಮ್ಮೆ ಹಾಲು ಹೆಚ್ಚಾದರೆ ಅಪಕ್ವ ಅಂಶವು ಅತಿಸಾರವಾಗಿ ಹೋಗುತ್ತದೆ, ಎಂಬ ಸಂದೇಹ ಬಂದರೆ ಮಲ ಪರೀಕ್ಷೆ ಮಾಡಿಸಬೇಕು. ನಂತರ ಹಾಲಿನ ಪರಿಣಾಮವಾಗಿದ್ದರೆ ಹಾಲಿನ ಪ್ರಮಾಣ ಕಡಿಮೆ ಮಾಡಬೇಕು.
ಆದರೆ ಯಾವ ರೋಗಿಗಳಿಗೆ ಹಾಲು ಅಥವಾ ಮೂಸಂಬಿಯ ರಸ ತೆಗೆದುಕೊಳ್ಳುವ ಅನುಕೂಲ ಇರುವುದಿಲ್ಲವೋ, ಅಥವಾ ರೋಗಿಯೇ ಒಪ್ಪುವುದಿಲ್ಲವೋ, ಅನ್ನ ತಿನ್ನುವುದಕ್ಕಾಗಿಯೇ ಕಿರುಚಾಡುತ್ತಾರೋ, ಅವರಿಗೆ ಹೆಸರುಬೇಳೆ ಕಟ್ಟಿನ ನೀರು ಅಥವಾ ಸಜ್ಜೆ ಗಂಜಿ ಸ್ವಲ್ಪಸ್ವಲ್ಪವೇ ನೀಡುತ್ತಿರಬಹುದು.
ವಿರೇಚನ, ಜ್ವರಹರ ತೀವ್ರ ಔಷಧಿ, ಆಂತ್ರಗತಿವರ್ಧಕ, ಕುಚಿಲಾದಿ ಔಷಧಗಳು ಹಾಗೂ ಭೋಜನದಲ್ಲಿ ಅನ್ನದ ಉಪಯೋಗ, ಇವೆಲ್ಲವೂ ಹಾನಿಕರ.
Comments