top of page

ಮನೋರೋಗ - ಮೂರ್ಛೆ (Unconsciousness)

ಯಾವ ಮನುಷ್ಯನು ಅತ್ಯಂತ ಕ್ಷೀಣನಾಗಿದು ಅವನಲ್ಲಿ ದೋಷಗಳು ಅಧಿಕವಾಗಿ ಪ್ರಕೋಪಗೊಂಡಿದ್ದರೆ, ವಿರುದ್ಧಾಹಾರಗಳನ್ನು ಸೇವಿಸುವವ ಹಾಗೂ ವೇಗಗಳನ್ನು ಧಾರಣೆ ಮಾಡುವವರಲ್ಲಿ, ಪೆಟ್ಟುಬಿದ್ದರೆ, ದುರ್ಬಲ ಮನಸ್ಸು, ಇಂತಹವರಲ್ಲಿ ಮನಸ್ಸು ಹಾಗೂ ಇಂದ್ರಿಯ ಸಂಬಂಧವಾದ ಸ್ರೋತಸ್ಸುಗಳಲ್ಲಿ ದೋಷಗಳು ಪ್ರವೇಶಿಸಿ ಮೂರ್ಛೆಯನ್ನುಂಟುಮಾಡುವವು.


ಕ್ಷೀಣಸ್ಯ ಬಹುಃದೋಷಶ್ಚ ವಿರುದ್ಧಾಹಾರ ಸೇವಿನಃ |

ವೇಗಾಘಾತಾದಭಿಘಾತಾದ್ಧೀನತ್ವಸ್ಯ ವಾ ಪುನಃ ||

ಕರಣಾಯತನೇಷೂಗ್ರಾ ಬಾಹ್ಯೇಷ್ವಾಭ್ಯಂತರೇಷು ಚ |

ನವಿಶಂತೇ ಯದಾ ದೋಷಾಸ್ತದಾ ಮೂರ್ಛಂತಿ ಮಾನವಾಃ |

ಸಂಜ್ಞಾವಹಾಸು ನಾಡೀಷು ಪಿಹೀಕಾಸ್ವನಿಲಾದಿಭಿಃ |

ತಮೋಭ್ಯಪೈತಿ ಸಹಸಾ ಸುಖ ದುಃಖ ವ್ಯಪೋಹಕೃತ್ ||

ಸುಖ ದುಃಖ ವ್ಯಪೋಹಾಶ್ಚ ನರ ಪತತೇ ಕಾಷ್ಟವತ್ |

ಮೋಹೋ ಮೂರ್ಛೇತಿ ತಾಮಾಹುಃ ||


ವಾತಾದಿ ದೋಷಗಳು ಸಂಜ್ಞಾವಾಹಿ ನಾಡಿಗಳಲ್ಲಿ ಆಚ್ಛಾದಿತಗೊಂಡಾಗ ಕಣ್ಣುಗಳ ಮುಂದೆ ಸುಖ-ದುಃಖವೆಂಬ ಪರಿಜ್ಞಾನವಾಗದಂತಹ ತಮೋಗುಣವು ಅಂಧಕಾರವನ್ನು ಉಂಟುಮಾಡುವುದು. ಆಗ ಮಾನವನು ಒಣಗಿದ ಕಟ್ಟಿಗೆಯಂತೆ ಕೆಳಕ್ಕೆ ಬಿದ್ದುಬಿಡುವನು. ಈ ಸ್ಥಿತಿಗೆ ಮೋಹ ಅಥವ ಮೂರ್ಛಾ ಅನ್ನುವರು.


ಮೂರ್ಛೆಯಲ್ಲಿ ಸಾಮಾನ್ಯವಾಗಿ ಸೌಮ್ಯ ಹಾಗೂ ಪ್ರಬಲವೆಂದು ಎರಡು ಸ್ಥಿತಿಗಳನ್ನು ಕಾಣಬಹುದು. ಸಾಧಾರಣ ಮೂರ್ಛೆಯು ಬಿಸಿಲು, ಆರ್ತನಾದ, ಪೆಟ್ಟು, ರಕ್ತನೋಡುವಿಕೆ, ಅಸ್ವಾಸ್ಥತೆ, ಮೊದಲಾದ ಸಂದರ್ಭಗಳಲ್ಲಿ ಕಾಣಿಸಿಕೊಳ್ಳಬಹುದು. ಆಗ ರೋಗಿಯು ಬೇರೆಯವರು ಮಾತನಾಡುವ ಶಬ್ದಗಳನ್ನು ಕೇಳಿದಂತೆನಿಸಿದರೂ ಉತ್ತರಿಸುವ ಮಟ್ಟದಲ್ಲಿರುವುದಿಲ್ಲ. ಮುಖಕ್ಕೆ ಜೋರಾಗಿ ಸ್ವಲ್ಪ ತಣ್ಣೀರನ್ನು ಗೊಜ್ಜಿದರೆ ಸಾಕು ಎಚ್ಚರವಾಗಿ ಬಿಡುವನು. ಬೇರೆ ಚಿಕಿತ್ಸೆಯ ಅವಶ್ಯಕತೆ ಬೀಳುವುದಿಲ್ಲ.


ಇನ್ನು ಪ್ರಬಲ ಸ್ವರೂಪದ ಮೂರ್ಛೆಯಲ್ಲಿ ಬೇಗನೆ ರೋಗಿಯು ಎಚ್ಚರಗೊಳ್ಳುವುದಿಲ್ಲ. ಅಲಕ್ಷಿಸಿದಂತೆ ರೋಗಿಯ ಸ್ಥಿತಿ ಗಂಭೀರಗೊಳ್ಳುತ್ತಾ ಹೋಗುವುದು. ಕೆಲವೇಳೆ ಮರಣವೂ ಬರಬಹುದು. ಗಂಭೀರ ಸ್ವರೂಪದ ಅಪಸ್ಮಾರ (Status Epilepticus)ದಲ್ಲಿ ಹೀಗೆ ಆಗಬಹುದು. ಆದ್ದರಿಂದ ರೋಗಿಗೆ ಬೇಗನೇ ತಜ್ಞ ವೈದ್ಯರಿಂದ ಪರೀಕ್ಷಿಸಿ ಚಿಕಿತ್ಸೆಗೊಳಪಡಿಸಬೇಕು. ಮಧುಮೇಹ, ಮದ್ಯಪಾನ, ಪೈತ್ತಿಕ ಮೂರ್ಛೆ, ವೃಕ್‌ವ್ಯಾಧಿಗಳು, ಶರೀರದಲ್ಲಿ ಶರ್ಕರಾಂಶ ಕಡಿಮೆಯಾದಾಗ (Hypogycemia) ಮಸ್ತಿಷ್ಕ ರಕ್ತಸ್ರಾವ, ಮಸ್ತಿಷ್ಕ ಜ್ವರ, ಮಸ್ತಿಷ್ಕ ಬಾವು. ವಿಷ ಸಂಬಂಧಿತ, ಕಾರ್ಬನ್ ಮೋನೋಕ್ಸಾಯಿಡ್ ಅನಿಲದಿಂದ, ನಿದ್ರಾಕಾರಿ ಔಷಧಿ ಸೇವನೆ, ಮಸ್ತಿಷ್ಕಾರ್ಬುದ (Brain Cancer), ಸನ್ನಿಪಾತ-ಜ್ವರ, ಸೂರ್ಯಾಘಾತ (Sun Stroke) ಮೊದಲಾದ ರೋಗಿಗಳಲ್ಲಿ ಗಂಭೀರ ಸ್ವರೂಪದ ಮೂರ್ಛೆಯನ್ನು ಕಾಣಬಹುದು.


ಮೂರ್ಛೆಯ ಭೇದಗಳು


ವಾತಾದಿಭಿಃ ಶೋಣಿತೇನ ಮದ್ಯೇನ ಚ ವಿಷೇಣ ಚ |

ಷಟ್‌ಸ್ವಪ್ಯೇತಾಸು ಪಿತ್ತಂ ತು ಪ್ರಭುತ್ವೇನಾವ ತಿಷ್ಟತಿ ||

(ಸು.ವಿ.46)


ವಾತ, ಪಿತ್ತ, ಕಫ, ರಕ್ತ, ಮದ್ಯ ಹಾಗೂ ವಿಷದೋಷಗಳಿಂದ ಮೂರ್ಛೆಯು ಉಂಟಾಗುವುದು. ಇವೆಲ್ಲವುಗಳಲ್ಲಿಯೂ ಪಿತ್ತದೋಷವು ಮಾತ್ರ ಪ್ರಧಾನವಾಗಿರುವುದು.


ವಾತಿಕ ಮೂರ್ಛೆ


ರೋಗಿಯು ಮೂರ್ಛಿತನಾಗುವಾಗ್ಗೆ ಆಕಾಶವನ್ನು ನೀಲಿ, ಕಪ್ಪು ಅಥವಾ ಕೆಂಪುವರ್ಣದ್ದನ್ನಾಗಿ ನೋಡುತ್ತಾ ಮೂರ್ಛೆ ಹೋಗುವನು ಹಾಗೂ ಬೇಗನೆ ಎಚ್ಚರಗೊಳ್ಳುವನು. ಈ ಅವಸ್ಥೆಯಲ್ಲಿ ಅವನ ಶರೀರವು ಕಂಪಿಸುವುದು. ಮೈಕೈಗಳ ನೋವು ಇರುವುದು. ಹೃದಯಭಾಗದಲ್ಲಿ ನೋವು ಹಾಗೂ ಮುಖದ ಮೇಲೆ ಕಪ್ಪು ಅಥವಾ ಕೆಂಪು ವರ್ಣವು ಕಂಡುಬರುವುದು. ಇವನು ಕೃಶನಾಗಿರುವನು.


ಪೈತ್ತಿಕ ಮೂರ್ಛೆ


ಇದರಲ್ಲಿ ರೋಗಿಯು ಮೂರ್ಛಿತನಾಗುವಾಗ್ಗೆ ಆಕಾಶವನ್ನು ಕೆಂಪು, ಹಸಿರು ಅಥವಾ ಹಳದಿ ವರ್ಣದಲ್ಲಿ ನೋಡುತ್ತಾ ಮೂರ್ಛೆ ಹೋಗುವನು ಹಾಗೂ ಎಚ್ಚರಗೊಳ್ಳುವಾಗ್ಗೆ ಇವನಿಗೆ ಅಧಿಕ ಬೆವರು ಬಂದಿರುವುದು. ಅಧಿಕ ನೀರಡಿಕೆ, ಶರೀರದ ಉರಿಪು, ಕಣ್ಣುಗಳು ಕೆಂಪು ಅಥವಾ ಹಳದಿ ಕಂಡುಬರುವುವು. ಇವನು ಮೂರ್ಛೆಯಿಂದ ಬೇಗನೇ ಎಚ್ಚರಗೊಳ್ಳುವನು. ಮೂರ್ಛಾವಸ್ಥೆಯಲ್ಲಿ ಅನಿಯಂತ್ರಿತವಾಗಿ ಮಲವಿಸರ್ಜನೆಯಾಗುವುದು. ರೋಗಿಯ ಮುಖವು ಹಳದಿ ಬಣ್ಣದ್ದಾಗಿರುವುದು.


ಕಫಜ ಮೂರ್ಛೆ


ಇದರಲ್ಲಿ ರೋಗಿಯು ಆಕಾಶವನ್ನು ಮೇಘಾಚ್ಛಾದಿತವಾದಂತೆ ಕಾಣುತ್ತ ಮೂರ್ಛೆ ಹೋಗುವನು. ಇವನಿಗೆ ಎಚ್ಚರಿಕೆಯು ತಡವಾಗಿ ಆಗುವುದು. ಮೈಭಾರವೆನಿಸುವುದು. ಲಾಲಾಸ್ರಾವ ಅಧಿಕವಾಗಿರುವುದು.


ರಕ್ತಜ ಮೂರ್ಛೆ


ಪೃಥ್ವಿ ಹಾಗೂ ಜಲಗಳಲ್ಲಿ ತಮೋಗುಣವು ಅಧಿಕವಾಗಿರುವುದು. ರಕ್ತದ ವಾಸನೆಯು ಕೂಡಾ ತಮೋಗುಣಾಧಿಕ್ಯವಾಗಿರುವುದು. ಆದ್ದರಿಂದ ಕೇವಲ ರಕ್ತದ ವಾಸನೆಯಿಂದಲೇ ಮೂರ್ಛೆಗೊಳ್ಳುವರು. ಇದು ರಕ್ತದ ಸ್ವಾಭಾವಿಕ ಗುಣವಾಗಿದೆ. ಇದರಲ್ಲಿ ರೋಗಿ ಸ್ತಬ್ಧನಾಗಿರುವನು. ಕಣ್ಣುಗುಡ್ಡೆಗಳು ಮುಚ್ಚಿಕೊಂಡಿರುವವು. ಉಸಿರಾಟ ಅಧಿಕವಾಗಿರುವುದು.


ಮದ್ಯಜ ಮೂರ್ಛೆ


ರೋಗಿಯು ಪ್ರಲಾಪಿಸುತ್ತ ಸಂಜ್ಞಾಹೀನ ಅಥವಾ ವಿಕ್ಷಿಪ್ತಚಿತ್ತನಾಗಿ ಕೈಕಾಲುಗಳನ್ನು ಅತ್ತಿಂದಿತ್ತ ಒದ್ದಾಡಿಸುತ್ತ ಮೂರ್ಛೆಗೊಳ್ಳುವನು. ಮದ್ಯದ ಅಮಲು ಇಳಿದ ಬಳಿಕ ತಂತಾನೆ ಎಚ್ಚರಗೊಳ್ಳುವನು.


ವಿಷಜ ಮೂರ್ಛೆ


ಇದರಲ್ಲಿ ಶರೀರ ಕಂಪನೆ, ನಿದ್ರೆ, ನೀರಡಿಕೆ, ಕಣ್ಣುಕತ್ತಲುಗೂಡಿಸುವುದು ಈ ಮೊದಲಾದ ಲಕ್ಷಣಗಳಿರುವವು. ಬೇರೆ ಬೇರೆ ವಿಷಗಳಲ್ಲಿ ಈ ಲಕ್ಷಣಗಳು ಸೌಮ್ಯ, ತೀವ್ರ, ತೀವ್ರತಮವಾಗಿರುವವು.


ಪ್ರಾಥಮಿಕ ಚಿಕಿತ್ಸೆ


1. ವ್ಯಕ್ತಿಯು ಉಸಿರಾಡುತ್ತಿದ್ದಾನೆ ಅಥವಾ ಇಲ್ಲ ಎಂಬುದನ್ನು ಮೊದಲು ಗಮನಿಸಿ ನೋಡಿ. ಒಂದು ವೇಳೆ ಉಸಿರಾಡುತ್ತಿಲ್ಲ ಎನಿಸಿದರೆ ತಕ್ಷಣವೇ ಆಂಬುಲೆನ್ಸ್ ಗೆ ಫೋನ್ ಮಾಡಿ. ಆಂಬುಲೆನ್ಸ್ ಬರುವ ಸಮಯದವರೆಗೂ ಸಿ ಪಿ ಆರ್ ಪ್ರಕ್ರಿಯೆ ಮಾಡಲು ಮುಂದಾಗಿ.


2. ಒಂದು ವೇಳೆ ವ್ಯಕ್ತಿ ಉಸಿರಾಡುತ್ತಿದ್ದರೆ, ಆತನನ್ನು ಅಂಗಾತ ಮಲಗಿಸಿ. ವ್ಯಕ್ತಿಯ ಎರಡೂ ಕಾಲುಗಳನ್ನು ನೆಲದ ಭಾಗದಿಂದ ಸುಮಾರು 12 ಇಂಚ್ ಮೇಲೆತ್ತಿ ಹಿಡಿದುಕೊಳ್ಳಿ. ವ್ಯಕ್ತಿಯ ಸೊಂಟದ ಬೆಲ್ಟ್ ಅಥವಾ ಭದ್ರವಾದ ಬಟ್ಟೆಗಳನ್ನು ಸಡಿಲ ಪಡಿಸಿ. ಒಂದು ನಿಮಿಷದ ಒಳಗಾಗಿ ಆತ ಮತ್ತೆ ಮೊದಲಿನಂತೆ ಉಸಿರಾಡಲು ಪ್ರಾರಂಭ ಮಾಡದಿದ್ದರೆ, ಆಗ ಆಂಬುಲೆನ್ಸ್ ಗೆ ಮರೆಯದೆ ಫೋನ್ ಮಾಡಿ.


3. ವ್ಯಕ್ತಿಯ ಉಸಿರಾಟ ವ್ಯವಸ್ಥೆಯ ಬಗ್ಗೆ ಈ ಸಮಯದಲ್ಲಿ ಸಾಕಷ್ಟು ಗಮನ ವಹಿಸಬೇಕು. ಸಣ್ಣದಾಗಿ ಉಸಿರಾಡುವ ಸೂಚನೆ ಸಿಕ್ಕಿದರೂ ಸಾಕು, ವ್ಯಕ್ತಿ ಕೆಮ್ಮಿದರೆ ಅಥವಾ ಕೈ ಕಾಲು ಆಡಿಸಿದರೆ ಮತ್ತೊಮ್ಮೆ ಮೊದಲಿನ ಸ್ಥಿತಿಗೆ ಬರುವ ಸೂಚನೆ ಸಿಕ್ಕಿದಂತೆಯೇ. ಒಂದು ವೇಳೆ ಈ ರೀತಿಯ ಯಾವುದೇ ಸೂಚನೆಗಳು ಸಿಗದೇ ಇದ್ದರೆ ಆಗ ಸಿ ಪಿ ಆರ್ ಪ್ರಕ್ರಿಯೆ ಅತ್ಯಂತ ಅವಶ್ಯಕವಾಗಿ ಬೇಕಾಗಿರುತ್ತದೆ.


4. ಒಂದು ವೇಳೆ ವ್ಯಕ್ತಿಯ ದೇಹದ ಯಾವುದಾದರೂ ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸ್ರಾವ ಉಂಟಾಗುತ್ತಿದ್ದರೆ ಅದನ್ನು ಭದ್ರವಾಗಿ ನಿಮ್ಮ ಕೈಗಳಿಂದ ಒತ್ತಿ ಹಿಡಿದು ತಜ್ಞರು ಬರುವವರೆಗೂ ನಿಲ್ಲಿಸಿ.


5. ಯಾವುದೇ ಒಬ್ಬ ವ್ಯಕ್ತಿ ತಾನು ಉಸಿರಾಡುವುದನ್ನು ನಿಲ್ಲಿಸಿದ ಸಂದರ್ಭದಲ್ಲಿ ಅಥವಾ ಆತನ ಹೃದಯ ಬಡಿತ ಇದ್ದಕ್ಕಿದ್ದಂತೆ ನಿಂತು ಹೋದ ತಕ್ಷಣ ಮೊದಲು ಮಾಡುವ ಪ್ರಕ್ರಿಯೆಯೇ ಸಿ ಪಿ ಆರ್.


6. ಒಂದು ವೇಳೆ ನಿಮಗೆ ಸಿ ಪಿ ಆರ್ ಮಾಡಲು ಬರದೆ ಇದ್ದರೆ ಆದಷ್ಟು ಬೇಗ ಸಿ ಪಿ ಆರ್ ತಜ್ಞರನ್ನು ಕರೆಸಿಕೊಳ್ಳುವ ಪ್ರಯತ್ನ ಮಾಡಬೇಕು. ಒಂದು ವೇಳೆ ನೀವೇ ಸ್ವತಃ ಸಿ ಪಿ ಆರ್ ಪ್ರಕ್ರಿಯೆಯನ್ನು ಮಾಡಲು ಮುಂದಾದರೆ, ಮೊದಲು ವ್ಯಕ್ತಿಗೆ ಜೋರಾಗಿ ಮಾತನಾಡಿಸಲು ಪ್ರಯತ್ನ ಪಡಿ. ಈ ಸಂದರ್ಭದಲ್ಲಿ ವ್ಯಕ್ತಿಯಿಂದ ಯಾವುದೇ ಪ್ರತಿಕ್ರಿಯೆ ನಿಮಗೆ ಸಿಗದೇ ಇದ್ದರೆ, ಆಗ ಈ ಕೆಳಗಿನ ರೀತಿಯಲ್ಲಿ ನೀವು ಸಿ ಪಿ ಆರ್ ಪ್ರಕ್ರಿಯೆಯನ್ನು ಪ್ರಾರಂಭ ಮಾಡಬಹುದು.


ಸಿ.ಪಿ.ಆರ್. ವಿಧಾನ
1. ಮೊದಲು ಮೂರ್ಛೆ ಹೋಗಿರುವ ವ್ಯಕ್ತಿಯನ್ನು ಸಮತಟ್ಟಾದ ಜಾಗದಲ್ಲಿ ಅಂಗಾತ ಮಲಗಿಸಿ.


2. ವ್ಯಕ್ತಿಯ ಕುತ್ತಿಗೆ ಮತ್ತು ಭುಜದ ಮಧ್ಯದಲ್ಲಿ ನೀವು ಮಂಡಿಗಳನ್ನು ಇಟ್ಟು ಕುಳಿತುಕೊಳ್ಳಿ


3. ವ್ಯಕ್ತಿಯ ಎದೆಯ ಮಧ್ಯ ಭಾಗದಲ್ಲಿ ನಿಮ್ಮ ಒಂದು ಅಂಗೈ ಇಟ್ಟು, ಅದರ ಮೇಲೆ ಇನ್ನೊಂದು ಕೈಯಿಂದ ಬೆರಳುಗಳನ್ನು ಮಡಚಿ ಒತ್ತಿ ಹಿಡಿಯಿರಿ.


4. ಈ ಸಮಯದಲ್ಲಿ ನಿಮ್ಮ ಕೈಗಳು ನೇರವಾಗಿರಬೇಕು ಮತ್ತು ನಿಮ್ಮ ಭುಜಗಳು ಕೈಗಳಿಂದ ಮೇಲಿರಬೇಕು.


5. ನಿಮ್ಮ ಮೇಲ್ಭಾಗದ ದೇಹದ ತೂಕವನ್ನು ಬಳಸಿ ನೇರವಾಗಿ ಮೂರ್ಛೆ ಹೋದ ವ್ಯಕ್ತಿಯ ಎದೆಯ ಭಾಗವನ್ನು ಕೆಳ ಭಾಗಕ್ಕೆ ಒತ್ತಲು ಪ್ರಯತ್ನಿಸಿ (ಮಕ್ಕಳಾದರೆ 1.5 ಇಂಚ್ ಮತ್ತು ದೊಡ್ಡವರಾದರೆ 2 ಇಂಚ್ ಎದೆಯ ಭಾಗ ಒಳಗೆ ಹೋಗುವಂತೆ ಒತ್ತಿ ).


6. ನೀವು ಎದೆ ಒತ್ತುವ ಪ್ರಕ್ರಿಯೆ ಒಂದು ನಿಮಿಷಕ್ಕೆ ಸುಮಾರು 100 ಬಾರಿ ಇರಬೇಕು.


7. ಸಾಧ್ಯವಾದಷ್ಟು ಸಿ.ಪಿ.ಆರ್ ಪ್ರಕ್ರಿಯೆಯನ್ನು ಒಬ್ಬ ಅನುಭವಿ ಸಿ.ಪಿ.ಆರ್ ತಜ್ಞರಿಂದ ಮಾಡಿಸುವುದು ಒಳ್ಳೆಯದು.


8. ಒಂದು ವೇಳೆ ನಿಮಗೆ ಈ ಬಗ್ಗೆ ಅರಿವಿಲ್ಲದೇ ಇದ್ದರೆ ವೈದ್ಯಕೀಯ ನೆರವು ಸಿಗುವವರೆಗೂ ವ್ಯಕ್ತಿಯ ಎದೆಯ ಭಾಗವನ್ನು ಒತ್ತುತ್ತಾ ಇರಿ. ಆದರೆ ಮೂಳೆ ಮುರಿಯುವಷ್ಟು ಜೋರಾಗಿ ಒತ್ತಬೇಡಿ.


9. ಒಂದು ವೇಳೆ ನಿಮಗೆ ಈಗಾಗಲೇ ಸಿ.ಪಿ.ಆರ್ ಟ್ರೈನಿಂಗ್ ಆಗಿದ್ದರೆ, ಮೂರ್ಛೆ ಹೋದ ವ್ಯಕ್ತಿಯ ತಲೆಯ ಭಾಗವನ್ನು ಹಿಂಬದಿಗೆ ಸ್ವಲ್ಪ ಬಾಗಿಸಿ ವ್ಯಕ್ತಿಯ ಗಲ್ಲವನ್ನು ಬಾಯಿ ತೆರೆದುಕೊಳ್ಳುವಂತೆ ಮೇಲೆತ್ತಿ.


10. ಮೂರ್ಛೆ ಹೋದ ವ್ಯಕ್ತಿಯ ಮೂಗನ್ನು ಒತ್ತಿ ಹಿಡಿದು ವ್ಯಕ್ತಿಯ ಬಾಯಿಗೆ ನಿಮ್ಮ ಬಾಯಿಯ ಮೂಲಕ ಜೋರಾಗಿ ಎರಡು ಬಾರಿ ಒಂದು ಸೆಕೆಂಡ್ ಅಂತರದಲ್ಲಿ ಉಸಿರು ತುಂಬಿಸಿ.

ಈ ಸಮಯದಲ್ಲಿ ವ್ಯಕ್ತಿಯ ಎದೆ ಮೇಲ್ಬಾಗಕ್ಕೆ ಏರುವುದನ್ನು ಗಮನಿಸಿ.


11. ಈ ಸಂದರ್ಭದಲ್ಲಿ ವ್ಯಕ್ತಿಯ ಎದೆಯನ್ನು ಒತ್ತುವುದನ್ನು ಮರೆಯಬೇಡಿ. 30 ಬಾರಿ ವ್ಯಕ್ತಿಯ ಎದೆಯನ್ನು ಒತ್ತಿ ಮಧ್ಯದಲ್ಲಿ ಎರಡು ಬಾರಿ ನಿಮ್ಮ ಬಾಯಿಂದ ವ್ಯಕ್ತಿಯ ಬಾಯಿಗೆ ಉಸಿರು ತುಂಬಿಸುತ್ತಾ ಇರಿ.


12. ವೈದ್ಯಕೀಯ ನೆರವು ನಿಮಗೆ ಸಿಗುವವರೆಗೂ ಅಥವಾ ವ್ಯಕ್ತಿ ಕೈ ಕಾಲು ಆಡಿಸುವವರೆಗೂ ಇದೇ ರೀತಿ ಮಾಡುತ್ತಾ ಇರಿ.


ಆಯುರ್ವೇದ ಚಿಕಿತ್ಸೆ


1. ಸಾಮಾನ್ಯವಾದ ಮೂರ್ಛೆಯಲ್ಲಿ ಕೇವಲ ತಣ್ಣೀರನ್ನು ತೀವ್ರವಾಗಿ ರೋಗಿಯ ಮುಖಕ್ಕೆ ಎರಚುವುದರಿಂದ ಎಚ್ಚರಿಕೆ ಬರುವುದು. ಇಲ್ಲದಿದ್ದರೆ ಈರುಳ್ಳಿಯನ್ನು ಜಜ್ಜಿ ವಾಸನೆ ತೋರಿಸುವುದರಿಂದ ಎಚ್ಚರವಾಗುವುದು.


2. ಕೆಲ ಪತ್ರೆಗಳ ಸ್ವರಸ, ವಿಶೇಷ ನಸ್ಯ, ರಸೌಷಧಗಳನ್ನು ಅನುಭವೀ ವೈದ್ಯರು ಗುಣಪಡಿಸಬಲ್ಲರು.


3. ನಾಡೀ, ದೃಕ್, ಜಿಹ್ವಾ, ಶಿರ, ಕಪೋಲ, ಹಸ್ತ, ಕರ್ಣ, ಚರ್ಮ, ರಕ್ತ, ಮೂತ್ರ, ಮಲ ಪರೀಕ್ಷೆ ಇತ್ಯಾದಿ ಪರೀಕ್ಷೆಗಳ ಮುಖೇನ ಮೂರ್ಛಾ ರೋಗದ ಮೂಲ ಕಾರಣಾನ್ವೇಷಣೆ ಮಾಡಿ ದೈಹಿಕ ಬಾಧೆಗಳ ಮೇಲೆ ಹಿಡಿತ ಹಾಗೂ ಮಾನಸಿಕ ಕಾರಣವನ್ನು ಮಾನಸ ರೋಗ ಚಿಕಿತ್ಸಾ ವಿಧಾನಗಳಿಂದ ಕೆಲ ಕಾಲದಲ್ಲಿ ಸರಿಪಡಿಸಬಹುದು.


4. ತೀವ್ರತಮ ಸ್ಥಿತಿಗಳಲ್ಲಿ ಕಾರಣಕ್ಕನುಗುಣವಾಗಿ ವೈದ್ಯರು ಚಿಕಿತ್ಸೆ ಕೊಡಬೇಕಾಗುವುದು.


ವಿಶೇಷ ಸೂಚನೆ


ನಿಮ್ಮ ಕಣ್ಣಿಗೆ ಅಥವಾ ನಿಮಗೆ ತಿಳಿದಿರುವ ಮಟ್ಟಿಗೆ ಯಾರಾದರೂ ವ್ಯಕ್ತಿ ಮೂರ್ಛೆ ಹೋಗಿದ್ದರೆ, ಸಾಧ್ಯವಾದಷ್ಟು ಬೇಗ ಆತನಿಗೆ ತುರ್ತು ಚಿಕಿತ್ಸೆಯನ್ನು ಕೊಡಿಸುವ ಬಗ್ಗೆ ಆಲೋಚನೆ ಮಾಡಿ. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ.


- ಡಾ. ಅಶ್ವಿತಾ ಎಮ್.

BAMS, MS (Shalakya)

ಬ್ರಾಹ್ಮೀ ಆಯುರ್ವೇದ ಕ್ಲಿನಿಕ್

ಚಿಕ್ಕಮಗಳೂರು


Appointments -


Comments

Rated 0 out of 5 stars.
No ratings yet

Commenting has been turned off.
bottom of page