
"ವೇಗ ಸಾಮ್ಯಾದ್ ವಿಮಾನೋಂಡಜಾನಾಮಿತಿ" || ೧.೧ ||
ಅಂಡಜಗಳೆಂದು ಕರೆಯಲ್ಪಡುವ ಪಕ್ಷಿಗಳ ವೇಗ ಸಾಮ್ಯತೆಯಿಂದದು ವಿಮಾನ ಎನ್ನಿಸಿಕೊಳ್ಳುತ್ತದೆ. ಇದು ಭರದ್ವಾಜರ ವೈಮಾನಿಕ ಶಾಸ್ತ್ರದ ಮೊದಲ ಸೂತ್ರ.
ಈ ಗ್ರಂಥಕ್ಕೂ ಹಿಂದೆ ಇನ್ನೂ ೬ ಗ್ರಂಥಗಳು ಇದ್ದವೆಂದು ಉಲ್ಲೇಖವಿದೆ:
೧. ವಿಮಾನಚಂದ್ರಿಕಾ ೨. ವ್ಯೋಮಯಾನತಂತ್ರ ೩. ಯಂತ್ರಕಲ್ಪ ೪. ಯಾನವಿಂದು ೫. ಖೇಟ ಯಾನ ಪ್ರದೀಪಿಕಾ ೬. ವ್ಯೋಮಯಾನಾರ್ಕಪ್ರಕಾಶ
ರಹಸ್ಯಜ್ಞೋಧಿಕಾರೀ || ೧.೨ ||
ಸಹಜಾರ್ಥ:- ರಹಸ್ಯಗಳನ್ನು ಅರಿತವರು ವಿಮಾನ ಚಾಲನೆಗೆ ಅಧಿಕಾರಿಗಳು.
ಗೂಢಾರ್ಥ:-
ರಹ್ = ತೊರೆಯಲು, ಬಿಡಲು, ತ್ಯಜಿಸಲು, ಮರುಭೂಮಿ, ಇತ್ಯಾದಿ
ಅಸ್ = ಆಗು - ತ್ರಿಕಾಲಗಳಲ್ಲಿ ಈ ಧಾತುವಿನ ಚಲಾವಣೆ ಇದೆ.
ಯಜ್ಞಃ = ತಿಳಿದು ಮಾಡುವ ಪ್ರಕ್ರಿಯೆಗಳು.
ಅಧಿಕಾರೀ = ಉಡಾವಣೆಯ ಪರವಾನಗಿ ಹೊಂದಿರುವವರು.
ವಿವರಣೆ:-
ಶಾಸ್ತ್ರಗಳಲ್ಲಿ ಯಾವ ೩೨ ವೈಮಾನಿಕ ರಹಸ್ಯಗಳನ್ನು ಹೇಳಲಾಗಿದೆಯೋ ಅದು ಯಾನ ಚಾಲಕ ಕರ್ಮದಲ್ಲಿ ಎಂಬುದು ಪುರಾತನ ಕಾಲದಲ್ಲಿ ವಿದ್ವಾಂಸರು ಹೇಳಿರುವ ಸೂತ್ರದ ಆದಿ ಪದದಿಂದ ಸೂಚಿತವಾಗಿದೆ. ಈ ೩೨ ರಹಸ್ಯವಿಜ್ಞಾನವನ್ನು ಶಾಸ್ತ್ರಾಧ್ಯಯನ ಮತ್ತು ಪ್ರಯೋಗಗಳ ಮುಖೇನ ಪರಿಣತಿ ಸಾಧಿಸಿ ಪರವಾನಗಿ ಹೊಂದಿದವರು ಮಾತ್ರ ವಿಮಾನವನ್ನು ಚಲಾಯಿಸಲು ಅಧಿಕಾರಿ ಎಂದು ಸೂತ್ರದ ಉತ್ತರ ಪದವು ಹೇಳುತ್ತಿದೆ.

ವಿಮಾನದ ರಚನೆ, ಆಕಾಶದಲ್ಲಿ ಏರುವುದು, ಚಲಾವಣೆ, ಸ್ತಂಭನ = ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು, ಉಡಾವಣೆ, ಚಿತ್ರಗತಿ ಹಾಗೂ ವೇಗಾದಿಗಳನ್ನು ನೀಡುವ ನಿರ್ಣಯದಲ್ಲಿ ವೈಮಾನಿಕ ರಹಸ್ಯಾರ್ಥ ಜ್ಞಾನರೂಪ ಸಾಧನೆಯ ಹೊರತು ಅಧಿಕಾರ ಸಂಸಿದ್ಧಿ ಇಲ್ಲ ಎಂದು ಸೂತ್ರವು ಹೇಳುತ್ತಿದೆ. ಅಧಿಕಾರ ಸಂಸಿದ್ಧಿಗೆ ಆ ರಹಸ್ಯಗಳನ್ನು ಲಲ್ಲಾದಿ ಆಚಾರ್ಯರು ಪುರಾತನ ಕಾಲದಲ್ಲಿ ’ರಹಸ್ಯಲಹರೀ’ ಇತ್ಯಾದಿ ಗ್ರಂಥಗಳಲ್ಲಿ ಹೇಳಿರುವುದನ್ನು ಇಲ್ಲಿ ಚುಟುಕಾಗಿ ನೋಡೋಣ.
೧. ಮಾನ್ತ್ರಿಕ
೨. ತಾನ್ತ್ರಿಕ
೩. ಕೃತಕ
೪. ಅನ್ತರಾಲಕ
೫. ಗೂಢ
೬. ದೃಶ್ಯ
೭. ಅದೃಶ್ಯ
೮. ಪರೋಕ್ಷ
೯. ಅಪರೋಕ್ಷ
೧೦. ಸಙ್ಕೋಚ
೧೧. ವಿಸ್ತೃತ
೧೨. ವಿರೂಪಕರಣ
೧೩. ರೂಪಾನ್ತರ
೧೪. ಸುರೂಪ
೧೫. ಜ್ಯೋತಿರ್ಭಾವ
೧೬. ತಮೋಮಯ
೧೭. ಪ್ರಲಯ
೧೮. ವಿಮುಖ
೧೯. ತಾರ
೨೦. ಮಹಾಶಬ್ದವಿಮೋಹನ
೨೧. ಲಙ್ಘನ
೨೨. ಸಾರ್ಪಗಮನ
೨೩. ಚಾಪಲ
೨೪. ಸರ್ವತೋಮಖ
೨೫. ಪರಶಬ್ದಪ್ರಾಹಕ
೨೬. ರೂಪಾಕರ್ಷಣ
೨೭. ಕ್ರಿಯಾರಹಸ್ಯಪ್ರಹಣ
೨೮. ದಿಕ್ಪ್ರದರ್ಶನ
೨೯. ಆಕಾಶಾಕಾರ
೩೦. ಜಲದರೂಪ
೩೧. ಸ್ತಬ್ಧಕ
೩೨. ಕರ್ಷಣ
ಈ ೩೨ ರಹಸ್ಯಗಳನ್ನು ಗುರುಮುಖೇನ ತಿಳಿದು ಪುನಃ ವಿಧಿವತ್ ಎಲ್ಲಾ ಕಾರ್ಯಗಳನ್ನು ಪ್ರಾರಂಭಿಸಬೇಕು. ಗುರುಮುಖೇನ ಈ ರಹಸ್ಯಾನುಭವವನ್ನು ಶ್ರವಣ, ಮನನ, ನಿಧಿಧ್ಯಾಸನ ಹಾಗೂ ಪ್ರಾಯೋಗಿಕ ಪಕ್ವತೆಗಳನ್ನು ಪಡೆದವರು ವ್ಯೋಮಯಾನ ಅಥವಾ ಆಕಾಶಯಾನವಾದಂತಹಾ ವಿಮಾನವನ್ನು ಚಲಾಯಿಸಲು ಅಧಿಕಾರಿಯಾಗಬಹುದೇ ವಿನಃ ಬೇರೆಯವರಲ್ಲ. ಈ ೩೨ ರೀತಿಯ ವಿಮಾನ ವಿಷಯಕ ರಹಸ್ಯಗಳ ಬಗ್ಗೆ ಸಿದ್ಧನಾಥರು ಹೇಳಿದ್ದನ್ನು ಸಂಗ್ರಹಿಸಿ ರಹಸ್ಯಜ್ಞಾನ ಸಿದ್ಧಿಗಾಗಿ ಸಂಕ್ಷೇಪಿಸಿ ವಿವರಿಸುವೆ ಮುಂದಿನ ಲೇಖನಗಳಲ್ಲಿ.
- ಹೇಮಂತ್ ಕುಮಾರ್ ಜಿ www.vedavidhya.com
Comments