ಸುಶ್ರುತಾಚಾರ್ಯರು 7 ರೀತಿಯ ವ್ಯಾಧಿಗಳನ್ನು ಹೇಳಿದ್ದಾರೆ.
1. ಆದಿಬಲ ಪ್ರವೃತ್ತ (Hereditary) - ತಾಯಿತಂದೆಯ ರಜಃವೀರ್ಯದ ದೋಷದಿಂದ ಉತ್ಪನ್ನ ಕುಷ್ಠ, ಮಧುಮೇಹ, ಕ್ಷಯ, ಅರ್ಶ ಇತ್ಯಾದಿ ರೋಗಗಳು.
2. ಜನ್ಮಬಲ ಪ್ರವೃತ್ತ (Congenital) - ಸಗರ್ಭಾವಸ್ಥೆಯಲ್ಲಿ ತಾಯಿಯ ಅಚಾತುರ್ಯದಿಂದ ಅಥವಾ ಆಘಾತದಿಂದ ಗರ್ಭವಾಸದ ಸಂದರ್ಭದಲ್ಲಿ ಮಗುವಿಗೆ ಉಂಟಾಗುವ ಹುಟ್ಟುಕುರುಡುತನ, ಮೂಕ, ಕೈ/ಕಾಲು ಊನ, ಇತ್ಯಾದಿ ವಿಕಾರಗಳು.
3. ದೋಷಬಲ ಪ್ರವೃತ್ತ (Chemical) - ಮೊದಲು ಯಾವುದೋ ವ್ಯಾಧಿ ಉತ್ಪತ್ತಿಯಾದ ನಂತರ ದೂಷಿತ ಧಾತುವಿನಿಂದ ಉತ್ಪನ್ನವಾಗುವ ವ್ಯಾಧಿಗಳು ಹಾಗೂ ಮಿಥ್ಯಾ ಆಹಾರ-ವಿಹಾರದಿಂದಾಗುವ (Food Poisoning) ವ್ಯಾಧಿಗಳು.
4. ಸಂಘಾತಬಲ ಪ್ರವೃತ್ತ (Adventitious) - ಆಗಂತುಕ ವ್ಯಾಧಿಗಳು ಹಾಗೂ ಹಾವು, ನಾಯಿ, ಚೇಳು ಇತ್ಯಾದಿಗಳಿಂದ ಕಡಿತಗಳು ಹಾಗೂ ಶಸ್ತ್ರಕೃತಾದಿ ಅಭಿಘಾತಜ (Mechanical) ವ್ಯಾಧಿಗಳು.
5. ಕಾಲಬಲ ಪ್ರವೃತ್ತ (Seasonal) - ಋತುಪರಿವರ್ತನೆ ಅಥವಾ ಶೀತ, ಉಷ್ಣ, ಮಳೆ ಇತ್ಯಾದಿ ಪ್ರಕೋಪದಿಂದಾಗುವ ರೋಗಗಳು.
6. ದೈವಬಲಪ್ರವೃತ್ತ (Physical) - ವಿದ್ಯುತ್ ಆಘಾತ, ಮನೆ ಕುಸಿತ, ಎತ್ತರ ಸ್ಥಳದಿಂದ ಬೀಳುವುದು, ಇತ್ಯಾದಿ ಅಭಿಶಾಪಜ (by curse).
7. ಸ್ವಭಾವಬಲಪ್ರವೃತ್ತ (Natural) - ಹಸಿವು, ಬಾಯಾರಿಕೆ, ನಿದ್ರೆ, ಮೈಥುನ, ಭಯ, ಮುಪ್ಪು, ಸಾವು ಇತ್ಯಾದಿ ವಿಕಾರಗಳು (ಇದರಲ್ಲಿ ಕಾಲಕೃತ ಮತ್ತು ಅಕಾಲಕೃತ ಎಂದು ಎರಡು ಬಗೆ).
ದೋಷಗಳ ವಿಷಮಾವಸ್ಥೆಯನ್ನು ರೋಗ ಹಾಗೂ ದೋಷಗಳ ಸಮಾನಾವಸ್ಥೆಯನ್ನು ಆರೋಗ್ಯ ಎನ್ನಲಾಗಿದೆ. ಈ ದೃಷ್ಟಿಯಿಂದ ರೋಗಗಳ ನಿಜ (ಸ್ವಸಂಪಾದಿತ) ಹಾಗೂ ಆಗಂತುಕ ಎಂದು ಇಬ್ಬಗೆಯಲ್ಲಿ ವಿಭಾಗಿಸಬಹುದು. ಮಿಥ್ಯಾ ಆಹಾರ-ವಿಹಾರಾದಿಗಳಿಂದಾಗುವ ರೋಗಗಳನ್ನು ಸ್ವಸಂಪಾದಿತ (Acquired) ಹಾಗೂ ಬಾಹ್ಯ ಹೇತುಜನ್ಯವನ್ನು (ಗಾಯ, ನೀರಲ್ಲಿ ಮುಳುಗುವುದು, ಸುಡುವುದು ಇತ್ಯಾದಿ) ಆಗಂತುಕ (External) ಎನ್ನಲಾಗಿದೆ.
ಈ ಆಗಂತುಕ ರೋಗಗಳಲ್ಲ 4 ವಿಭಾಗಗಳಿವೆ -
1. ಆಘಾತ ಜನ್ಯ (Mechanical)
2. ಆಧಿದೈವಿಕ ಅಂದರೆ ವಿದ್ಯುತಾಘಾತ, ದೂಷಿತ ವಾಯು ಹಾಗೂ ಪ್ರಭಾಪಾತಾದಿ ಜನ್ಯ (Physical)
3. ವಿಷ ಅಥವಾ ರಾಸಾಯನಿಕ ವಸ್ತುಗಳ ಸೇವನೆ ಅಥವಾ ಸ್ಪರ್ಶಜನಿತ (Intoxications)
4. ಕೀಟಾಣು ಪ್ರಕೋಪಜನ್ಯ (Infections)
ರೋಗಗಳಲ್ಲಿ ಶಾರೀರಿಕ (ಜ್ವರಾದಿ) ಹಾಗೂ ಮಾನಸಿಕ (ಕ್ರೋಧಜನ್ಯ ಜ್ವರ; ಭಯಾದಿ ಜನ್ಯ ಅತಿಸಾರ, ಗರ್ಭಪಾತ, ಮೂರ್ಛೆ, ಉನ್ಮಾದಿಗಳು) ಎಂಬೆರಡು ಸ್ಥಾನಗಳಿವೆ. ಈ ರೋಗಗಳಲ್ಲಿ ಕೆಲವು ಕರ್ಮಜವಾಗಿರುತ್ತವೆ (ಪೂರ್ವ ಜನ್ಮಾರ್ಜಿತ ಅಥವಾ ಈ ಜನ್ಮದ ಪಾಪದ ಹೇತುವಿನಿಂದ ಉತ್ಪನ್ನ). ಕೆಲವು ಮಾತಾ-ಪಿತರ ವಿಕೃತ ರಜವೀರ್ಯದಿಂದ (Ovum & Spermatozoon) ಉತ್ಪನ್ನವಾಗುತ್ತವೆ. ಇಂತಹಾ ರೋಗಗಳನ್ನು ವಂಶಪರಂಪರಾಗತ ಅಥವಾ ಪೂರ್ವಜ ಪ್ರಾಪ್ತ ಅಥವಾ ವಂಶವಾಹಿಜನ್ಯ (Hereditary) ಎನ್ನುತ್ತಾರೆ. ಮಧುಮೇಹ, ಅರ್ಶ, ಕ್ಷಯ, ಊರುಸ್ತಂಭ, ಉಪಾಂಶ, ಪೂಯಮೇಹ, ಕುಷ್ಠ, ರಕ್ತಪಿತ್ತ, ಅಪಸ್ಮಾರ, ಉನ್ಮಾದಿ ರೋಗಗಳು ಹೆಚ್ಚಾಗಿ ತಂದೆ-ತಾಯಿಯಿಂದ ಮಕ್ಕಳಿಗೆ ಪ್ರಾಪ್ತವಾಗುತ್ತದೆ. ಕಿವುಡು, ಕುರುಡು ಇತ್ಯಾದಿ ಕೆಲವು ಒಂದು ಪೀಳಿಗೆ ಬಿಟ್ಟು ಇನ್ನೊಂದು ಪೀಳಿಗೆಗೆ ಬರುತ್ತದೆ. ಇಂತಹಾ ಸ್ಥಿತಿಯನ್ನು ಪೂರ್ವಜತಾ (Atavism) ಎನ್ನಲಾಗಿದೆ. ವಂಶಪರಂಪರಾಗತ ರಕ್ತಪಿತ್ತ ಪ್ರಕೃತಿ (Hemophilia) ಇತ್ಯಾದಿ ಕೆಲ ರೋಗಗಳು ಕೇವಲ ಪುತ್ರ ಪರಂಪರೆಯಲ್ಲಿ ಬರುತ್ತವೆ; ಪುತ್ರನಂತೆ ಪುತ್ರಿಗೆ ಬರುವುದಿಲ್ಲ. ಆದರೆ ಮಗಳ ಮಗನಿಗೆ ಮತ್ತೆ ಬರುತ್ತದೆ; ಹಾಗೂ ಮಗಳ ಮಗಳಿಗೆ ಬರುವುದಿಲ್ಲ. ಕೆಲವು ಗರ್ಭಾಶಯ ಸಂಬಂಧಿ ವಿಕಾರಗಳು ಹಾಗೂ ತತ್ಸಂಬಂಧಿತ ರೋಗಗಳು ಪುತ್ರೀಪರಂಪರೆಯಲ್ಲಿ ಬರುತ್ತವೆ; ಪುತ್ರನಿಗಲ್ಲ. ಕೆಲವು ರೋಗಗಳು ಗರ್ಭಾವಸ್ಥೆಯಲ್ಲಿ ತಾಯಿಯ ಅಚಾತುರ್ಯದಿಂದ ಉತ್ಪನ್ನವಾಗುತ್ತವೆ. ಇಂತಹಾ ರೋಗಗಳನ್ನು ಗರ್ಭಜ (Congenital) ಎನ್ನಲಾಗಿದೆ. ಹಲವು ಸಲ ಗರ್ಭಾವಸ್ಥೆಯಲ್ಲಿ ಸಂತಾನದ ಜನ್ಮ ಸಮಯದಲ್ಲೂ ಉಂಟಾಗುವ ಅಚಾತುರ್ಯದಿಂದ ಶರೀರದಲ್ಲಿ ವ್ಯಂಗವಾಗುತ್ತದೆ (Malformation).
ಈ ಕರ್ಮಜ ವ್ಯಾಧಿಗಳನ್ನು ಪ್ರಾಯಶಃ ಅಸಾಧ್ಯ ಎಂದು ಲಭ್ಯ ಆಯುರ್ವೇದ ಸಂಹಿತೆಗಳು ಹೇಳುತ್ತವೆ. ಆದರೆ ಪುರಾತನ ನಿಸ್ವಾರ್ಥ ಜ್ಯೋತಿಷದ ಸಾಧನೆಯಿಂದ ಗುರುತಿಸಬಹುದು. ವೈದಿಕ ಸಂಪ್ರದಾಯದ ಋಷ್ಯಾಶ್ರಮಗಳಲ್ಲಿ ಮಾತ್ರ ಉಳಿದಿರುವ ಪರಾಶರ ಕರ್ಮವಿಪಾಕ ವಿಧಾನವು ಕರ್ಮಜ ವ್ಯಾಧಿಗಳನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲದು. ಉಳಿದ ರೋಗಗಳಲ್ಲಿ ರೋಗ, ಬಲ ಹಾಗೂ ಜೀವನೀಯ ಶಕ್ತಿ ಇತ್ಯಾದಿಗಳ ವಿಚಾರ ಮಾಡಿ ಸುಖಸಾಧ್ಯತೆ, ಸಾಧ್ಯತೆ, ಕಷ್ಟಸಾಧ್ಯತೆ, ಯಾಪ್ಯತೆ ಅಥವಾ ಅಸಾಧ್ಯತೆಯ ನಿರ್ಣಯ ಮಾಡಲಾಗುತ್ತದೆ.
BAMS, MS (Shalakya Tantra)
ಬ್ರಾಹ್ಮೀ ಆಯುರ್ವೇದ ಕ್ಲಿನಿಕ್
ಚಿಕ್ಕಮಗಳೂರು
Appointments -
Comments