top of page

ಬ್ರಹ್ಮ ಬೈದರ್ಕಳ ಗರಡಿಯಲ್ಲೊಂದು ಅನುಭವ


ಹೆಚ್ಚಾಗಿ ಯಾವುದೇ ಬಲವಾದ ಉದ್ದೇಶವಿಲ್ಲದೆ ಯಾವುದೇ ಕ್ಷೇತ್ರಕ್ಕೆ ಹೋಗುವುದಿಲ್ಲ. ಅದೆಲ್ಲಾ ಆಗಮಿಕ ಹಿತವಚನ. ದೈವ ಸ್ಥಾನಗಳಿಗೆ ಹೋದದ್ದೂ ಅತಿ ಕಡಿಮೆ. ಹಿಂದೆ ಶಿಬರೂರಿನಲ್ಲಿ ಗುರುಗಳು ಅಷ್ಟಮಂಗಲ ಪ್ರಶ್ನೆ ಹಾಕುವಾಗ ನಮ್ಮ ಮುಲ್ಕಿ ಆಶ್ರಮದಿಂದ ಕರೆದೊಯ್ದು ದರ್ಪಣ ವಿಧ್ಯೆಯ ತುರೀಯ ಸಾಧನೆಯಾದ ಸಿದ್ಧಾಂಜನದ ಒಂದು ವಿಶೇಷ ಅನುಭವ ವೀಕ್ಷಿಸಲು ಅನುವು ಮಾಡಿಕೊಟ್ಟಿದ್ದರು.


ಇಂದು ಮಂಗಳೂರಿನ ಗರೋಡಿಯ ಬ್ರಹ್ಮ ಬೈದರ್ಕಳ ಗರಡಿಗೆ ಮಗಳಿಗೆ ಯಕ್ಷಗಾನ ತೋರಿಸಲು ಹೋದೆವು. ಮೆಟ್ಟಿಲಲ್ಲಿ ಕುಳಿತು ಯಕ್ಷಗಾನ ತೋರಿಸುತ್ತಿದ್ದರೆ ಗುಡಿಯಿಂದೊಂದು ಕರೆ..


...ಮೆಟ್ಟಿಲು ಮೇಲೆಯೇ ಕುಳಿತಿರುವೆಯಲ್ಲಾ ಒಳಗೆ ಬಾ..

...ಇಲ್ಲ, ನನಗೂ ಇದಕ್ಕೂ ಸಂಬಂಧವಿಲ್ಲ, ಕೇವಲ ಮಗಳಿಗೆ ಯಕ್ಷಗಾನ ತೋರಿಸಲು ಬಂದದ್ದು...

.. ಒಳಗೆ ಬಂದು ನೋಡಿದರೆ ತಾನೇ ಸಂಬಂಧ ಏನೆಂದು ತಿಳಿಯುವುದು ..

.. ಸರಿ ಎಂದು ಒಳ ಹೊಕ್ಕು ನಮಿಸಿದೆವು.

ಬಹಳ ಕಾಲದ ನಂತರ ಒಂದು ವಾಕ್ ಶ್ರವಣಾನುಭವಗಮ್ಯ ಸಂಪ್ರೇಷಣ..

.. ಯತಿವರೇಣ್ಯ ಅಣ್ಣಪ್ಪಯ್ಯರು ಎತ್ತಿ ಹಿಡಿದ ಸತ್ಯ ಧರ್ಮ ನ್ಯಾಯ ಪಾಲನೆಯಲ್ಲಿ ನಿರತ ಶಿಷ್ಯ ವರ್ಗವಿದು ..

.. ಅಗ್ನಿ ರೂಪಿ ಪಂಜು ಹಿಡಿದ ಬ್ರಹ್ಮ ಎಂಬ ಜ್ಞಾನ ಪ್ರಸಾರ, ಕ್ಷತಗಳಿಂದ ಸಮಾಜವನ್ನು ದಾಟಿಸಲು ಸಾಧನೆಯ ದ್ಯೋತಕ ಉರುಲಿ ಹಿಡಿದ ಪಂಜುರ್ಲಿ ಪಂಥವಿದು ..ಆದರಿದು ಭೂತವು, ಅಂದರೆ ಗತಿಸಿದ ಕಾಲದ ಕುರುಹು. ಅಣ್ಣಪ್ಪಯ್ಯರು ಆ ಕಾಲದಲ್ಲಿ ಲೋಕಕಂಟಕರಾಗಿದ್ದ ನಾಗಾರಾಧಕರು ಅಥವಾ ಮನಶ್ಶಾಸ್ತ್ರಜ್ಞರನ್ನು ಮಟ್ಟ ಹಾಕಿ ಪರಿಷ್ಕರಿಸಿ ಸಹ್ಯ ಪ್ರಾಂತ್ಯದಲ್ಲಿ ಸ್ಥಾಪಿಸಿದ ಭೂತಾರಾಧನೆಯ ಭಾಗವು. ಅಷ್ಟೇ ಅಲ್ಲ. ಅಣ್ಣಪ್ಪಯ್ಯರು ತಮ್ಮ ೮೦೦ ವರ್ಷಗಳ ತಿರುಗಾಟದಲ್ಲಿ ಕ್ಷತ್ರ ವಿಧ್ಯಾ ಪ್ರಕಾರವನ್ನು ಮೇಲೆತ್ತುವ ಕೆಲಸವನ್ನೂ ಮಾಡಿದ್ದರು. ಅದಕ್ಕಾಗಿಯೇ ಅಲ್ಲಲ್ಲಿ ಮತ್ತೆ ಹಾಳು ಬಿದ್ದಿದ್ದ ಗರಡಿಗಳನ್ನು ಗ್ರಾಮೀಣ ಯುವಕರಿಂದ ನವೀಕರಿಸಿ ಮತ್ತೆ ಮಾಗಣೆಗಳಲ್ಲಿ ಹೊಸ ಗರಡಿಗಳನ್ನು ಸ್ಥಾಪಿಸಿ ಯುವಶಕ್ತಿಯನ್ನು ದೇಹದಾರ್ಢ್ಯ ಮತ್ತು ಮನೋಸ್ಥೈರ್ಯ ವರ್ಧನೆಯತ್ತ ತಿರುಗಿಸಿ ಸ್ಥಳೀಯ ನ್ಯಾಯ ಪಾಲನೆಯಲ್ಲಿ ಸ್ವಯಂ ಪ್ರೇರಿತರಾಗಿ ಸೇವೆ ಮಾಡಿರೆಂದು ಧನುರ್ವೇದದ ಬಿಲ್ಲುಗಾರಿಕೆ, ಕತ್ತಿವರಸೆ, ಬಾಹುಯುದ್ದ, ಗದಾಯುದ್ಧ, ಇತ್ಯಾದಿ ಶಸ್ತ್ರ ವಿದ್ಯೆಗಳು, ಹಲವು ಪಟ್ಟುಗಳನ್ನು ಕಲಿಸಿದರು. ಒಟ್ಟಾರೆ ಆಂಜನೇಯನಿಗೆ ಮುಖ್ಯವಾದ ಅಂಜನೋಪಾಸನೆಯನ್ನು ಯುವಶಕ್ತಿಯಲ್ಲಿ ಹಾಸುಹೊಕ್ಕಾಗಿಸಿದರು. ಅದೇ ಗ್ರಾಮೀಣ ಯುವ ಸೈನ್ಯ ಬಲ.

ಇದು ಬಾಹ್ಯ ವಿಚಾರವಾದರೆ, ಆಂತರಿಕ ತಾಂತ್ರಿಕ ವಿವರಗಳು ಇವೆ. ಆ ಕಾಲದಲ್ಲಿ ಉತ್ತುಂಗಕ್ಕೆ ಏರಿದ್ದ ಖೇಚರೀ, ನಾಗಪಾಶ, ನಾಗಬಂಧ, ವಿಷ ಪ್ರಯೋಗ, ಇತ್ಯಾದಿ ಕ್ಷುದ್ರ ವಿಧ್ಯೆಗಳನ್ನು ಗರುಡ ಗಮನನನ್ನು ನೆನೆದು ಗಾರುಡಿಯ ಪಡೆದು ಕುತಂತ್ರ ಗತಿಗಳನ್ನು ಆರೋಹಿಸಿದ ಮಹಾ ಗಾರುಡಿಗರು ಅಣ್ಣಪ್ಪಯ್ಯರು. ಇದರಿಂದಲೇ ಜನರಿಗೆ ಸ್ವಲ್ಪವಾದರೂ ನಿಟ್ಟುಸಿರು ಬಿಡಲು ಸಾಧ್ಯವಾಯಿತು. ಮತ್ತೆ ತಡೆಯಲಾರದಷ್ಟು ಬಿಕ್ಕುಗಳ ಆಟಾಟೋಪದಲ್ಲಿ ಸಮಾಜದ ಮೇಲೆ ದುರ್ಬಳಕೆ ಆಗುತ್ತಿದ್ದ ಹೇರುಕನ ನಾಯಕತ್ವದಲ್ಲಿ ವಜ್ರಚಕ್ರದ 36 ಡಾಕಿನಿ ಮತ್ತು ವೀರರೆಂಬ ಕೆಳಕಂಡ ಶಕ್ತಿಗಳನ್ನು ತಾಂತ್ರಿಕವಾಗಿ ಮಟ್ಟ ಹಾಕಬೇಕಿತ್ತು:


1. ಡಾಕಿನೀ ಮತ್ತು ವಜ್ರಡಾಕ,

2. ಲಾಮಾ ಮತ್ತು ವಿಶ್ವಡಾಕ,

3. ಖಂಡರೋಹಾ ಮತ್ತು ಪದ್ಮಡಾಕ,

4. ರೂಪಿಣೀ ಮತ್ತು ರತ್ನಡಾಕ,

5. ಪ್ರಚಂಡಾ ಮತ್ತು ಖಂಡಕಪಾಲಿನ್,

6. ಚಂಡಾಕ್ಷೀ ಮತ್ತು ಮಹಾಕಂಕಾಲ,

7. ಪ್ರಭಾವತೀ ಮತ್ತು ಕಂಕಾಲ,

8. ಮಹಾನಾಸಾ ಮತ್ತು ವಿಕಟದಂಷ್ಟ್ರಿನ್,

9. ವೀರಮತೀ ಮತ್ತು ಸುರಾವೈರಿನ್,

10. ಖರ್ವರೀ ಮತ್ತು ಅಮಿತಾಭ,

11. ಲಂಕೇಶ್ವರೀ ಮತ್ತು ವಜ್ರಪ್ರಭ,

12. ದ್ರುಮಚ್ಚಾಯಾ ಮತ್ತು ವಜ್ರದೇಹ,

13. ಐರಾವತೀ ಮತ್ತು ಅಂಕುರಿಕಾ,

14. ಮಹಾಭೈರವೀ ಮತ್ತು ವಜ್ರಜಟಿಲ,

15. ವಾಯುವೇಗಾ ಮತ್ತು ಮಹಾವೀರ,

16. ಸುರಾಭಕ್ಷೀ ಮತ್ತು ವಜ್ರಹೂಂಕಾರ,

17. ಶ್ಯಾಮಾದೇವೀ ಮತ್ತು ಸುಭದ್ರ,

18. ಸುಭದ್ರಿಕಾ ಮತ್ತು ವಜ್ರಭದ್ರ,

19. ಹಯಕರ್ಣಾ ಮತ್ತು ಮಹಾಭೈರವ,

20. ಖಗಾನನಾ ಮತ್ತು ವಿರೂಪಾಕ್ಷ,

21. ಚಕ್ರವೇಗಾ ಮತ್ತು ಮಹಾಬಲ,

22. ಖಂಡರೋಹಾ ಮತ್ತು ರತ್ನವಜ್ರ,

23. ಶೌಂಡಿನೀ ಮತ್ತು ಹಯಗ್ರೀವ,

24. ಚಕ್ರವರ್ಮಿಣೀ ಮತ್ತು ಆಕಾಶಗರ್ಭ,

25. ಸುವೀರಾ ಮತ್ತು ಹೇರುಕಾ,

26. ಮಹಾಬಲಾ ಮತ್ತು ಪದ್ಮನರ್ತೇಶ್ವರ,

27. ಚಕ್ರವರ್ತಿನೀ ಮತ್ತು ವೈರೋಚನ,

28. ಮಹಾವೀರ್ಯಾ ಮತ್ತು ವಜ್ರಸತ್ವ,

29. ಯಾಮಿನೀ ಮತ್ತು ಮಹಾಬಲ,

30. ಕಾಮಿನೀ ಮತ್ತು ಜ್ಞಾನಡಾಕ,

31. ಸಂಚಾಲನೀ ಮತ್ತು ಧೈರ್ಯ,

32. ತ್ರಾಸನೀ ಮತ್ತು ಸ್ಥೈರ್ಯ,

33. ಚಂಡಿಕಾ ಮತ್ತು ಮೋಕ್ಷ,

34. ಸರಸ್ವತೀ ಮತ್ತು ಜ್ಞಾನ,

35. ಇಚ್ಛಾಸಿದ್ಧಿ ಮತ್ತು ಉಪಾಯ,

36. ಮಹಜ್ವಾಲಾ ಮತ್ತು ಚಿತ್ತವಜ್ರ.


ಅವುಗಳಲ್ಲಿ ಪ್ರತಿಯೊಂದೂ ಒಂದು ಮುಖ ಮತ್ತು ನಾಲ್ಕು ತೋಳುಗಳನ್ನು ಹೊಂದಿವೆ; ಅವರು ತಲೆಬುರುಡೆಯ ಉರುಲಿ, ಕಪಾಲ ಮಾಲೆ, ಸಣ್ಣ ಢಕ್ಕೆ ಮತ್ತು ಚಾಕುವನ್ನು ಹಿಡಿದಿರುತ್ತಾರೆ; ಅವರು ಮತ್ತು ಈ ವಜ್ರಚಕ್ರದ ವೃತ್ತವು ಗಾಢ ನೀಲಿಗಪ್ಪು ಬಣ್ಣವನ್ನು ಹೊಂದಿರುತ್ತದೆ. ದೇಹದಲ್ಲಿನ ಕೆಲ ನಾಡಿಗಳ ಶಕ್ತಿಗಳೂ ಡಾಕಿನಿಗಳು. ಅವುಗಳ ಒಡೆಯ ಅಥವಾ ಪತಿ ಎಂದರೆ ವೀರರು. ಈ ವೀರರು 24 ನಖ, ದಂಷ್ಟ್ರ, ರೋಮ ಇತ್ಯಾದಿ ಧಾತುಗಳ ರೂಪದಲ್ಲಿದ್ದಾರೆ. ಆ 24 ಪೀಠಗಳು ಅಥವಾ ಪ್ರಸ್ತಾರಗಳು ತ್ರಿಚಕ್ರಗಳನ್ನು ರಚಿಸುತ್ತವೆ. ಅದೇ ಚಿತ್ತಚಕ್ರ ವಾಕ್ಚಕ್ರ ಮತ್ತು ಕಾಯಚಕ್ರ. ಇವುಗಳನ್ನು ಆರೋಹಿಸುವ ಖೇಚರೀ, ಭೂಚರೀ ಮತ್ತು ಪಾತಾಳವಾಸಿನಿ. ನಾಥ ಸಂಪ್ರದಾಯದ ಶಿವಶಕ್ತ್ಯಾತ್ಮಕ ಯೋಗಿನಿ ತಂತ್ರದ ಕೆಲ ಶಕ್ತಿಗಳು ನಾಥ ಸಂಪ್ರದಾಯದ ಒಂದು ಕವಲಾದ ಜೈನ ಪಂಥದಲ್ಲೂ ಕೂಡ ಬಳಕೆಯಲ್ಲಿ ಬಂದಿತು. ಅವರಲ್ಲಿ ಕ್ಷೇತ್ರಪಾಲನ ಅಡಿಯಲ್ಲಿ ಈ ಯೋಗಿನಿಗಳನ್ನು ಅಥವಾ ಅವುಗಳಲ್ಲಿ ಕೆಲ ಡಾಕಿನಿಗಳನ್ನು ಸ್ಥಾಪಿಸಲಾಗುತ್ತದೆ.

ಮಂಜುನಾಥವೆಂಬ ಶಿಥಿಲೀಕರಣಕ್ಕೆ ಸಂಬಂಧಿಸಿದ ನಾಥ ಸಂಪ್ರದಾಯದ ಪ್ರಾಯೋಗಿಕ ವೈಜ್ಞಾನಿಕ ಭಾಗವು ಅಣ್ಣಪ್ಪಯ್ಯರ ಹಿಡಿತದಲ್ಲಿ ಸಾತ್ವಿಕವಾಗಿ ಕುಡುಮದಲ್ಲಿ ನೆಲೆಗೊಂಡಿತು.


ಮಂಜುನಾಥನೆಂಬ ನಾಥ ಸಂಪ್ರದಾಯದ ಪಂಥದಲ್ಲಿ ಬಳಕೆಯಲ್ಲಿದ್ದ ಮಹಾಕಾಲನ ಗಣಗಳ ವಿಚಾರಗಳನ್ನು ಬೌದ್ಧರೂ ಜೈನರೂ ಅಳವಡಿಸಿಕೊಂಡರು. ನಾಥ ಸಂಪ್ರದಾಯದಲ್ಲಿ ಸಾತ್ವಿಕವಾಗಿ ಬಳಕೆಯಲ್ಲಿದ್ದ ಕ್ರಿಯಾ ತಂತ್ರಗಳನ್ನು ಮಂಜುಶ್ರೀ ಮೂಲಕಲ್ಪವೆಂದು ಬದಲಾಯಿಸಿ ಅದರಲ್ಲಿ ತಾಮಸಿಕ ಪ್ರಯೋಗಗಳ ಪ್ರಾಧಾನ್ಯತೆ ತರಲಾಯಿತು ಬೌದ್ಧದಿಂದ.


ಈ ಶಕ್ತಿಗಳನ್ನು ಷಟ್ತಂತ್ರ ಮತ್ತು ಪ್ರತಿಶಕ್ತಿಯ ಮುಖೇನ ಹಿಡಿತಕ್ಕೆ ಪಡೆದು ಕೆಲವನ್ನು ಗರಡಿಗಳಲ್ಲಿ ಸ್ಥಾಪಿಸಿ ಗುರುವೆಂಬ ಸಕಲ ವಿಷಯದ ವಿಷಗಳನ್ನು ನಿರ್ವಿಷೀಕರಣ ಗೈದು ಅಮೃತದಾಯೀ ಗರೋಡಿಯಾಗಿಸಿದರು ಅದೇ ಅಣ್ಣಪ್ಪಯ್ಯರು. ಹಾಗಾಗಿ ಭಿನ್ನ ಭಿನ್ನ ಶಕ್ತಿ ಮತ್ತು ವೀರರ ಉಪಾಸನೆಯು ರಕ್ಷಣಾತ್ಮಕವಾಗಿ ಪುನರ್ಬಳಕೆಗೆ ಬಂದಿತು. ಇಲ್ಲೆಲ್ಲಾ ವ್ಯಾಪಿಸಿರುವ ತಾಂತ್ರಿಕತೆ ಆಗಾಧ ಅನೂಹ್ಯ.


ಮುಂದೆ ಆಯಾಯ ಪ್ರಾಂತ್ಯದಲ್ಲಿ ಸಾಧಕರಾದ ಬ್ರಹ್ಮ+ಕ್ಷತ್ರದ ಆತ್ಮೀಕ ಬಲಗಳ ಯುಗ್ಮ ಭೂತ ರೂಪದಲ್ಲಿ ಪ್ರತಿಷ್ಠಾಪನೆ. ಈ ಬಗ್ಗೆ ಅಥರ್ವದ ಬ್ರಹ್ಮ+ಕ್ಷತ್ರದ ಹೇಳಿಕೆಯೇ ಮೂರ್ತವೆತ್ತಂತಿದೆ. ಸೂರ್ಯನ ಕಿರಣ ಮೂಲದ ಜ್ಞಾನದ ಅಂಶಗಳ ನೇಯ್ಗೆಯ ತತ್ವ ಈ ದೈವಗಳ ಮೂಲದಲ್ಲಿದೆ. 🙏


✍️ ಹೇಮಂತ್ ಕುಮಾರ್ ಜಿ.

111 views0 comments

Recent Posts

See All

תגובות

דירוג של 0 מתוך 5 כוכבים
אין עדיין דירוגים

הוספת דירוג
bottom of page