ಡಾ|| ಮಳಿಯೆ ಗೋಪಾಲಕೃಷ್ಣರಾಯರ ಜೀವನ, ಸಾಧನೆಗಳ ಚಿತ್ರಣವಾದ ***ಧನ್ವಂತರಿಯ ಸಾಹಿತ್ಯ ಸೌರಭ*** ಲೇಖನಮಾಲೆ. ಭಾಗ ಒಂದು.
ಧನ್ವಂತರಿ ಎಂಬುದು ಸುಪ್ರಸಿದ್ಧ ಆಯುರ್ವೇದ ವೈದ್ಯ ಮಳಿಯೆ ಗೋಪಾಲಕೃಷ್ಣರಾಯರ ಜೀವನ, ಸಾಧನೆ ಹಾಗೂ ಸಾಹಿತ್ಯದ ವಿವರಗಳನ್ನೊಳಗೊಂಡ ಒಂದು ಅಪರೂಪದ ಜೀವನ ಚರಿತ್ರೆ. ಈ ಮಹಾನ್ ಸಾಧಕರ ಜೀವಿತಾವಧಿಯಲ್ಲೇ ೧೯೮೮ರಲ್ಲಿ ಲೋಕಾರ್ಪಣೆಗೊಂಡ ಈ ಜೀವನಚಿತ್ರವು ಹಾಸನದ ಸುಧಾರ್ಥಿಯು ರಚಿಸಿದ್ದು. "ಒಬ್ಬ ವೈದ್ಯನ ಜೀವನ ಸಾಧನೆ, ಸಾಹಿತ್ಯಕೃತಿಗಳು, ಜನಸಾಮಾನ್ಯರ ಸ್ವಾಸ್ಥ್ಯ ವಿಚಾರಗಳಿಗೆ ಸಂಬಂಧಿಸಿದ ಮಾಹಿತಿಗಳು, ಔಷಧಗಳ ವಿಚಾರ ಇತ್ಯಾದಿ ವಿವರಗಳಿಗೆ ಸಂಬಂಧಿಸಿದಂತೆ ಇಷ್ಟು ವ್ಯಾಪಕವಾದ; ಸಮರ್ಪಕವಾದ ಕೃತಿಯು ನನಗೆ ತಿಳಿದಂತೆ ಆಂಗ್ಲಾಭಾಷೆಯಲ್ಲಿಯೂ ರಚನೆಯಾಗಿರುವುದಿಲ್ಲ. ನನ್ನ ಸಮಗ್ರ ಸಾಹಿತ್ಯ ಕೃತಿಗಳ ಸಾರವನ್ನು ಹೀರಿ; ’ಲೂಟಿಮಾಡಿ’ ರಚನೆಗೊಂಡಿರುವ ಅಪರೂಪದಕೃತಿ ಈ ಧನ್ವಂತರಿ" ಎಂಬುದಾಗಿ ಬರಹದ ಕಥಾನಾಯಕ ಡಾ|| ಮಳಿಯೆ ಗೋಪಾಲಕೃಷ್ಣರಾಯರಿಂದಲೇ ಮುಕ್ತಮನಸ್ಸಿನ ಮೆಚ್ಚುಗೆ ಪಡೆದ ಈ ’ಧನ್ವಂತರಿ’ ಯಲ್ಲಿ ಹಲವಾರು ಮಹತ್ವದ ಮಾಹಿತಿಗಳು ಅಡಕವಾಗಿವೆ. ಈ ಮಾಹಾನ್ ಚೇತನವು ದಿನಾಂಕ ೧೧-೦೨-೧೯೯೧ ರಂದು ವಿಶ್ವಾತ್ಮನೊಂದಿಗೆ ವಿಲಿನವಾಯಿತು. ೩೪ ವರ್ಷಗಳ ಹಿಂದಿನ ಈ ಅಮೂಲ್ಯ ಸಾಹಿತ್ಯಕೃತಿಯು ಆಸಕ್ತ ಓದುಗರಿಗೆ ಉಪಲಬ್ಧವಿರಲಿಲ್ಲ. ಡಾ|| ರಾಯರ ಮಗ ಡಾ|| ಮುರಳೀಧರರಾಯರೂ ತಂದೆಯಂತೆಯೇ ಪ್ರಸಿದ್ಧರಾಗಿದ್ದವರು. ಇವರ ಮಗ ಡಾ|| ಎಂ. ಶರತ್ ಚಂದ್ರ ಅವರು ತಮ್ಮ ತಾತನಜೀವನಾದರ್ಶವನ್ನು ಮುಂದುವರೆಸಿ, ಬೆಂಗಳೂರಿನಲ್ಲೇ ವೈದ್ಯಕೀಯವೃತ್ತಿಯನ್ನು ಮುಂದುವರೆಸಿರುವವರು. ಚಿಕಿತ್ಸೆಗಾಗಿ ತಮ್ಮಲ್ಲಿಗೆ ಬರುವ ಹಲವಾರು ಆಸಕ್ತರು ಈ ’ಧನ್ವಂತರಿ’ ಯನ್ನು ಅಪೇಕ್ಷಿಸುವುದನ್ನು ನನ್ನ ಗಮನಕ್ಕೆತಂದು, ಅದರ ಪುನರ್ಮುದ್ರಣಕ್ಕೆ ಸೂಚಿಸಿದರು. ಈ ಮಧ್ಯೆ ’ಫೇಸ್ ಬುಕ್ಕಿನ’ ಅಂಗಳದಲ್ಲಿಯೂ ಒಮ್ಮೆ ಈ ಕೃತಿಯನ್ನು ಕುರಿತು ಸಂಕ್ಷಿಪ್ತವಾಗಿ ಪ್ರಕಟಿಸಲಾಗಿತ್ತು. ಈಗ ಡಾ|| ಎಂ. ಶರತ್ ಚಂದ್ರ ಅವರ ಅಪೇಕ್ಷೆಯ ಮೇರೆಗೆ ’ಧನ್ವಂತರಿ’ ಯು ಮರುಮುದ್ರಣಕ್ಕೆ ಪ್ರಾರಂಭವಾಗಿದೆ. ಅದರಲ್ಲಿನ ಕೆಲವು ಅಮೂಲ್ಯ ಮಾಹಿತಿಗಳು ಇಲ್ಲಿನ ಓದುಗರಿಗೋ ದೊರೆಯುವಂತಾಗಲೆಂಬ ಉದ್ದೇಶದಿಂದ ಈ ಲೇಖನದಲ್ಲಿ ಕೆಲವೊಂದು ಅತ್ಯುಪಯುಕ್ತ ಮಾಹಿತಿಗಳನ್ನು ಅಳವಡಿಸಲಾಗಿದೆ. ಆಸಕ್ತ ಓದುಗರಿಗೆ ಇದು ಮೆಚ್ಚುಗೆಯಾಗಿ, ಅವರಿಗೆ ಉಪಯುಕ್ತವಾಗುವುದೆಂದು ನಿರೀಕ್ಷಿಸಿದ್ದೇನೆ. ನಮ್ಮ ನಿರೀಕ್ಷೆಗಳು ಏನೇ ಇರಲೀ; ಜಗತ್ತಿನ ಪ್ರತಿಯೊಂದು ಘಟನೆಗಳೂ ಪ್ರಾಕೃತಿಕವಾಗಿ, ಗಣಿತಾತ್ಮಕವಾಗಿಯೇ ನಡೆಯುವುದು ನಿಶ್ಚಿತ. ಕೆಲಸ ನಿರ್ವಹಿಸಲಷ್ಟೇ ನಮಗೆ ಅಧಿಕಾರವಿರುವುದು! ಫಲದಮೇಲೆಂದಿಗೂ ಅಧಿಕಾರವಿಲ್ಲ.
Comentarios