top of page

ಪಿತೃಗಳು ಯಾರು? ಪಿಂಡ-ತರ್ಪಣಗಳು ಏಕೆ? ಪಿತೃಗಳಿಗೆ ತಲುಪುವ ವಿಧಾನ ಹೇಗೆ? ಶ್ರಾದ್ಧದ 12 ಲಾಭಗಳೇನು?

🌺ಪಿತೃಗಳಿಗೆ ಆಹಾರ ಅರ್ಪಣೆ ಏಕೆ?🌺


ಶ್ರಾದ್ಧದಲ್ಲಿ ಅರ್ಪಿಸಿದ ವಸ್ತುಗಳು ಪಿತೃಗಳಿಗೆ ಹೇಗೆ ತಲುಪುತ್ತದೆ ಎಂದು ಕೆಲವರು ಅನುಮಾನಿಸುತ್ತಾರೆ. ಕರ್ಮಗಳ ವ್ಯತ್ಯಾಸದಿಂದಾಗಿ, ಸಾವಿನ ನಂತರದ ಚಲನೆಗಳು ಸಹ ಭಿನ್ನವಾಗಿರುತ್ತವೆ. ದೇಹ ಸೃಷ್ಟಿಯಲ್ಲಿ ಆತ್ಮದೊಂದಿಗೆ ಸಂಯೋಜನೆಗೊಂಡಿದ್ದ ಪಿತೃಪ್ರಾಣವು ಪಿತೃಪ್ರಾಣ ಸಂಘಟನೆಯಾದ ಪಿತೃಲೋಕದಲ್ಲಿ ಸಂಭೂತವಾಗುತ್ತದೆ. ಅದುವೇ ನಾವು ಮರ್ತ್ಯರಿಗೆ ಉಪಾಸನೆಗೆ ಸಿಗುವ ಪಿತೃಗಣ. ಶ್ರಾದ್ಧದಲ್ಲಿ ಆ ದೈವಿಕಾಂಶದ ಉಪಾಸನೆ ಮಾಡುವುದು. ಪಿಂಡ-ತರ್ಪಣಗಳು ಆ ದೈವಿಕಾಂಶಕ್ಕೇ ಹೊರತು ಮುಂದಿನ ಗತಿ ಆಧರಿಸಿ ಹೊರಟು ಹೋದ ಆತ್ಮಕ್ಕಲ್ಲ. ಪಿತೃತೃಪ್ತಿಗಾಗಿ ಶ್ರಾದ್ಧ ಎಂದರೆ ಪಿತೃಲೋಕದಲ್ಲಿರುವ ದೈವಿಕಾಂಶ ಸಂಭೂತವಾದ ಪಿತೃಪ್ರಾಣಕ್ಕೆ ಉಂಟಾಗುವ ತೃಪ್ತಿ. ಇದು ಉದ್ದೇಶ ಮತ್ತು ಸಾಫಲ್ಯ. ಜೊತೆಗೆ ಇನ್ನೂ ಒಂದು ವಿಶ್ವಬಂಧುತ್ವದ ಉದ್ದೇಶವಿದೆ. ಅದೇನೆಂದರೆ ಶ್ರಾದ್ಧ ಕಾರ್ಯವಶಾತ್ ಆ ಮುಂದಿನ ಗತಿ ಪಡೆದ ಆತ್ಮಕ್ಕೂ ಪಿಂಡ-ತರ್ಪಣದ ಸಾರ ತಲುಪಲು ಸಾಧ್ಯವಿದೆ ಎಂದು ಶಾಸ್ತ್ರಗಳು ಹೇಳುತ್ತವೆ. ಆತ್ಮವು ತನ್ನ ಕರ್ಮವನ್ನು ಆಧರಿಸಿ ಮುಂದಿನ ಗತಿಯನ್ನು ಪಡೆಯುತ್ತದೆ. ಕೆಲವು ಆತ್ಮಗಳು ರಾಕ್ಷಸ, ಕೆಲವು ಆನೆಗಳು, ಕೆಲವು ಇರುವೆಗಳು, ಕೆಲವು ಮರಗಳು ಮತ್ತು ಕೆಲವು ಹುಲ್ಲು ಆಗುತ್ತವೆ. ಹಾಗಾದರೆ ನಿಮ್ಮ ಪೂರ್ವಜರ ಆತ್ಮಗಳು ವಿವಿಧ ಯೋನಿಗಳಲ್ಲಿ ಪುನರ್ಜನ್ಮ ಪಡೆದಿರುವಾಗ ಒಂದು ಸಣ್ಣ ಪಿಂಡದಿಂದ ಹೇಗೆ ತೃಪ್ತಿಯನ್ನು ಪಡೆಯುತ್ತಾರೆ ಎಂದು ಮನಸ್ಸಿನಲ್ಲಿ ಅನುಮಾನವಿದೆಯೇ? ಈ ಸಂದೇಹಕ್ಕೆ ಸ್ಕಂದ ಪುರಾಣದಲ್ಲಿ ಬಹಳ ಸುಂದರವಾದ ಪರಿಹಾರವಿದೆ.


ಒಮ್ಮೆ ರಾಜ ಕರಂಧಮನು ಮಹಾಯೋಗಿ ಮಹಾಕಾಲನನ್ನು ಕೇಳಿದರು -


'ಮನುಷ್ಯರು ಪಿತೃಗಳಿಗೆ ಅರ್ಪಿಸಿದ ತರ್ಪಣ, ಪಿಂಡ ಇತ್ಯಾದಿಗಳು ಇಲ್ಲಿಯೇ ಉಳಿದಿರುತ್ತವೆ. ಹೀಗಿರುವಾಗ ಆ ವಸ್ತುಗಳು ಪಿತೃಗಳಿಗೆ ಹೇಗೆ ತಲುಪುತ್ತವೆ ಮತ್ತು ಪಿತೃಗಳು ಹೇಗೆ ತೃಪ್ತಿ ಹೊಂದುತ್ತಾರೆ?’


ಶ್ರಾದ್ಧದ ಸಾಮಗ್ರಿಯು ಪಿತೃಗಳಿಗೆ ವಿಶ್ವ ನಿಯಂತ್ರಕನ ವ್ಯವಸ್ಥೆಯ ಪ್ರಕಾರ ತಲುಪುತ್ತದೆ ಎಂದು ಭಗವಂತ ಮಹಾಕಾಲನು ಹೇಳಿದನು. ಈ ವ್ಯವಸ್ಥೆಗೆ ಅಗ್ನಿಷ್ವಾತ್ತಾದಿಗಳು ಅಧಿಪರು. ಪಿತೃಯೋನಿ ಮತ್ತು ದೇವಯೋನಿಗಳು ದೂರಶ್ರವಣ, ದೂರದರ್ಶನ, ದೂರದಿಂದಲೇ ಪೂಜಾಗ್ರಹಣ ಮತ್ತು ದೂರದಿಂದ ಹೇಳುವ ಸ್ತುತಿಯಿಂದಲೇ ಸಂತೋಷಗೊಳ್ಳುವ ಶಕ್ತಿ ಹೊಂದಿರುವವರು. ಅವರು ಭೂತ, ಭವಿಷ್ಯ ಮತ್ತು ವರ್ತಮಾನವನ್ನು ತಿಳಿದಿದ್ದಾರೆ ಮತ್ತು ಎಲ್ಲೆಡೆ ತಲುಪಬಲ್ಲರು. 5 ತನ್ಮಾತ್ರಗಳು, ಮನಸ್ಸು, ಬುದ್ಧಿ, ಅಹಂಕಾರ ಮತ್ತು ಪ್ರಕೃತಿ - ಈ 9 ಅಂಶಗಳು ಅವರ ದೇಹವನ್ನು ರೂಪಿಸುತ್ತವೆ ಮತ್ತು ಅದರೊಳಗೆ 10 ನೇ ಅಂಶವಾಗಿ, ಭಗವಂತ ಪುರುಷೋತ್ತಮನು ಅದರಲ್ಲಿ ನೆಲೆಸಿದ್ದಾನೆ, ಆದ್ದರಿಂದ ದೇವತೆಗಳು ಮತ್ತು ಪಿತೃಗಳು ಗಂಧ ಮತ್ತು ರಸ ತತ್ವದಿಂದ ತೃಪ್ತರಾಗುತ್ತಾರೆ. ಶಬ್ದತತ್ವದಿಂದ ತೃಪ್ತರಾಗಿರುತ್ತಾರೆ ಮತ್ತು ಸ್ಪರ್ಶತತ್ವವನ್ನು ಗ್ರಹಿಸುತ್ತಾರೆ. ಅವರು ಪವಿತ್ರತೆಯಿಂದಲೇ ಪ್ರಸನ್ನರಾಗುತ್ತಾರೆ ಮತ್ತು ವರಗಳನ್ನು ನೀಡುತ್ತಾರೆ. ಪಿತೃಗಳ ಆಹಾರವೆಂದರೆ ಅನ್ನ-ನೀರಿನ ಸಾರ. ಮನುಷ್ಯರ ಆಹಾರವು ಅನ್ನೇತ್ಯಾದಿ, ಪ್ರಾಣಿಗಳ ಆಹಾರವು ತೃಣೇತ್ಯಾದಿ, ಹಾಗೆಯೇ ಪೂರ್ವಜರ ಆಹಾರವು ಅನ್ನದ ಸಾರತತ್ವ (ಗಂಧ ಮತ್ತು ರಸ). ಆದ್ದರಿಂದ, ಅವರು ಅನ್ನ ಮತ್ತು ನೀರಿನ ಸಾರವನ್ನು ಮಾತ್ರ ತೆಗೆದುಕೊಳ್ಳುತ್ತಾರೆ. ಉಳಿದ ಸ್ಥೂಲ ವಸ್ತು ಇಲ್ಲಿಯೇ ಉಳಿದಿರುತ್ತದೆ.


💐ಯಾವ ರೂಪದಲ್ಲಿ ಆಹಾರವು ಪಿತೃಗಳನ್ನು ತಲುಪುತ್ತದೆ?💐


ಹೆಸರು ಮತ್ತು ಗೋತ್ರ ಹೇಳುತ್ತಾ ಅನ್ನ-ನೀರು ಇತ್ಯಾದಿಗಳನ್ನು ಪಿತೃಗಳಿಗೆ ನೀಡಲಾಗುತ್ತದೆ. ವಿಶ್ವದೇವತೆಗಳು ಮತ್ತು ಅಗ್ನಿಷ್ವಾತ್ತರು (ದಿವ್ಯ ಪಿತೃಗಳು) ಪೂರ್ವಜರಿಗೆ ಹವ್ಯ-ಕವ್ಯವನ್ನು ರವಾನಿಸುತ್ತಾರೆ. ಒಂದುವೇಳೆ ಪಿತೃಗಳು ದೇವಪ್ರಾಣದ ಹುದ್ದೆಯನ್ನು ಪಡೆದುಕೊಂಡಿದ್ದಲ್ಲಿ ಇಲ್ಲಿ ನೀಡುವ ಆಹಾರವು ಅವರಿಗೆ 'ಅಮೃತ' ರೂಪದಲ್ಲಿ ಪ್ರಾಪ್ತವಾಗುತ್ತದೆ. ಅವರು ಗಂಧರ್ವಪ್ರಾಣದ ಹುದ್ದೆಯನ್ನು ಪಡೆದುಕೊಂಡಿದ್ದಲ್ಲಿ ಅವರು ಆ ಆಹಾರವನ್ನು ’ಭೋಗಗಳ’ ರೂಪದಲ್ಲಿ ಪಡೆಯುತ್ತಾರೆ. ಜಿಂಕೆಯಂತಹಾ ಪ್ರಾಣಿಯಾಗಿ ಹುಟ್ಟಿದ್ದರೆ, ಆ ಅನ್ನವು ಅದಕ್ಕೆ ಒಣಹುಲ್ಲಿನ ರೂಪದಲ್ಲಿಯಾದರೂ ಪ್ರಾಪ್ತವಾಗುತ್ತದೆ. ಇದು ನಾಗಪ್ರಾಣದಲ್ಲಿ ವಾಯು ರೂಪದಲ್ಲಿ, ಯಕ್ಷಪ್ರಾಣದಲ್ಲಿ ಪಾನದ ರೂಪದಲ್ಲಿ, ರಾಕ್ಷಸ ಪ್ರಾಣದಲ್ಲಿ ಆಮಿಷದ ರೂಪದಲ್ಲಿ, ದಾನವ ಪ್ರಾಣದಲ್ಲಿ ಮಾಂಸದ ರೂಪದಲ್ಲಿ, ಪ್ರೇತಪ್ರಾಣದಲ್ಲಿ ರುಧಿರ ರೂಪದಲ್ಲಿ, ಮತ್ತು ಮನುಷ್ಯನಾದಾಗ ಆನಂದಿಸಬೇಕಾದ ತೃಪ್ತಿಕರ ಪದಾರ್ಥಗಳ ರೂಪದಲ್ಲಿ ಪ್ರಾಪ್ತವಾಗುತ್ತದೆ. ಕರುವು ತನ್ನ ತಾಯಿಯನ್ನು ಹಿಂಡಿನಲ್ಲಿ ಕಂಡುಕೊಳ್ಳುವಂತೆ; ಹೆಸರು, ಗೋತ್ರ, ಹೃತ್ಪೂರ್ವಕ ಭಕ್ತಿ ಮತ್ತು ದೇಶ-ಕಾಲಾದಿಗಳ ಸಹಕಾರದಲ್ಲಿ ಕೊಡಲ್ಪಡುವ ವಸ್ತುಗಳ ಸಾರವನ್ನು ಮಂತ್ರ ತರಂಗಗಳು ಪಿತೃಗಳಿಗೆ ರವಾನಿಸುತ್ತವೆ. ಆತ್ಮದ ದೈವಿಕಾಂಶವಿಂಬ ಪಿತೃಲೋಕಗತ ಪಿತೃಪ್ರಾಣಕ್ಕೆ ತಲುಪುತ್ತದೆ ಜೊತೆಗೆ ಆತ್ಮದ ಆತ್ಮಿಕಾಂಸವು ನೂರಾರು ಯೋನಿಗಳನ್ನು ದಾಟಿದ್ದರೂ, ತೃಪ್ತಿಯು ಅದನ್ನು ತಲುಪುವುದು ನಿಶ್ಚಿತ. 🙏


🌼ಶ್ರಾದ್ಧ ಮಾಡಲು ಶ್ರೀರಾಮನು ನಿಮಂತ್ರಿಸಿದ ಬ್ರಾಹ್ಮಣರಲ್ಲಿ, ಸೀತೆಯು ದಶರಥ ರಾಜ ಮತ್ತು ಪಿತೃಗಳನ್ನು ದರ್ಶಿಸಿದಳು. ಶ್ರಾದ್ಧಕ್ಕೆ ನಿಮಂತ್ರಿಸಿದ ಬ್ರಾಹ್ಮಣರು ಪಿತೃಗಳ ಪ್ರತಿನಿಧಿಗಳು.🌼


ಒಮ್ಮೆ ಪುಷ್ಕರದಲ್ಲಿ ಶ್ರೀರಾಮನು ತನ್ನ ತಂದೆ ದಶರಥನಿಗಾಗಿ ಶ್ರಾದ್ಧವನ್ನು ಮಾಡುತ್ತಿದ್ದನು. ರಾಮನು ಬ್ರಾಹ್ಮಣರಿಗೆ ಆಹಾರ ನೀಡಲು ಪ್ರಾರಂಭಿಸಿದಾಗ, ಸೀತೆಯು ಮರದ ಹಿಂದೆ ಅಡಗಿದಂತೆ ನಿಂತಿದ್ದಳು. ಬ್ರಾಹ್ಮಣ ಭೋಜನದ ನಂತರ, ರಾಮನು ಸೀತೆಗೆ ಇದಕ್ಕೆ ಕಾರಣವನ್ನು ಕೇಳಿದಾಗ ಅವಳು ಹೇಳಿದಳು- 'ನಾನು ಕಂಡ ಅದ್ಭುತವನ್ನು ನಿಮಗೆ ಹೇಳುತ್ತೇನೆ. ನೀನು ನಾಮಗೋತ್ರವನ್ನು ಜಪಿಸುತ್ತಾ ನಿನ್ನ ತಂದೆ-ತಾತ ಮೊದಲಾದವರನ್ನು ಆವಾಹನೆ ಮಾಡಿದಾಗ ಅವರು ಬ್ರಾಹ್ಮಣರ ದೇಹದಲ್ಲಿ ನೆರಳಿನ ರೂಪದಲ್ಲಿ ಇಲ್ಲಿ ಪ್ರತ್ಯಕ್ಷರಾಗಿದ್ದರು. ಆ ಬ್ರಾಹ್ಮಣರ ದೇಹದಲ್ಲಿ, ನನ್ನ ಮಾವ ಮತ್ತು ಇತರ ಪಿತೃಗಳನ್ನು ನಾನು ನೋಡಿದೆ, ಆಗ ನಾನು ಮರ್ಯಾದೆಯನ್ನು ಉಲ್ಲಂಘಿಸಿ ಆ ಸ್ಥಳದಲ್ಲಿ ನಿಂತಿರುವುದು ಸರಿಯೇ? ಹಾಗಾಗಿ ನಾನು ಹಿಂದೆ ಸರಿದು ಮರದ ಬದಿಯಲ್ಲಿ ನಿಂತೆ. ತುಳಸಿಯೊಂದಿಗೆ ಪಿಂಡಾರ್ಚನೆಯನ್ನು ಮಾಡಿದಾಗ, ಪಿತೃಗಳು ಪ್ರಳಯ ಪರ್ಯಂತ ತೃಪ್ತರಾಗಿರುತ್ತಾರೆ. ತುಳಸಿಯ ಗಂಧದಿಂದ ಸಂತಸಗೊಂಡು ಗರುಡನ ಮೇಲೆ ಕುಳಿತು ವಿಷ್ಣುಲೋಕಕ್ಕೆ ಹೋಗುತ್ತಾರೆ. ಪಿತೃಗಳು ಪ್ರಸನ್ನರಾಗಿದ್ದರೆ ಎಲ್ಲಾ ದೇವತೆಗಳೂ ಪ್ರಸನ್ನರು. ಶ್ರಾದ್ಧಕ್ಕಿಂತ ಮಿಗಿಲಾದ ಕಲ್ಯಾಣ ಕಾರ್ಯ ಮತ್ತೊಂದಿಲ್ಲ ಮತ್ತು ವಂಶವೃದ್ಧಿಗಾಗಿ ಪಿತೃಗಳ ಆರಾಧನೆಯೇ ಅತ್ಯುತ್ತಮ ಉಪಾಯ. 🙏


💮ಶ್ರಾದ್ಧಕರ್ಮದಿಂದಾಗುವ ಲಾಭಗಳೇನು?💮


ಆಯು: ಪುತ್ರಾನ್ ಯಶ: ಸ್ವರ್ಗ ಕೀರ್ತಿಂ ಪುಷ್ಟಿಂ ಬಲಂ ಶ್ರಿಯಮ್ |

ಪಶೂನ್ ಸೌಖ್ಯಂ ಧನಂ ಧಾನ್ಯಂ ಪ್ರಾಪ್ನುಯಾತ್ ಪಿತೃಪೂಜನಾತ್ ||

(ಯಮಸ್ಮೃತಿ, ಶ್ರಾದ್ಧಪ್ರಕಾಶ)


ಶ್ರಾದ್ಧ ಮಾಡುವುದರಿಂದ ಈ 12 ಪುಣ್ಯ ಲಾಭಗಳು ಸಿಗುತ್ತವೆ ಎಂದು ಯಮಧರ್ಮರಾಜನ ವಚನ -


1. ಮನುಷ್ಯನ ಆಯುಷ್ಯ ವೃದ್ಧಿಯಾಗುತ್ತದೆ.


2. ಪಿತೃಗಣವು ಕೃಪಾಶೀರ್ವಾದ ನೀಡುವ ಮೂಲಕ ಮನುಷ್ಯರ ಸಂತತಿ ವೃದ್ಧಿಸುವಂತೆ ಮಾಡಿ ವಂಶವನ್ನು ವಿಸ್ತರಿಸುತ್ತಾರೆ.


3. ಪಿತೃಗಳೇ ನಿಮ್ಮ ಯಶಸ್ಸಿಗೆ ಕಾರಣೀಭೂತರಾಗಿರುತ್ತಾರೆ.


4. ಪಿತೃಗಣವೇ ಸ್ವಾರ್ಜಿತ ಗತಿಯನ್ನು (ಸ್ವರ್ಗ) ಮಾರ್ಗದರ್ಶಿಸುತ್ತಾರೆ.


5. ಪಿತೃಗಳ ಇಚ್ಛೆಯಿಂದಲೇ ನಿಮಗೆ ಕೀರ್ತಿ ಲಭಿಸುತ್ತದೆ.


6. ಪಿತೃಗಣವೇ ನಿಮ್ಮ ದೈಹಿಕ ಮತ್ತು ಮಾನಸಿಕ ಪುಷ್ಟಿ ಪ್ರದಾತರು.


7. ಪಿತೃಪ್ರಾಣವೇ ನಿಮ್ಮಲ್ಲಿ ಎಲ್ಲಾ ರೀತಿಯ ಇಂದ್ರವೆಂಬ ಬಲ ಸಂಯೋಜಕರು.


8. ಪಿತೃಗಣವೇ ಕುಟುಂಬದಲ್ಲಿ ಶುಭಕಾರ್ಯಗಳು ನಡೆಯುತ್ತಿರುವಂತೆ ನೋಡಿಕೊಳ್ಳುತ್ತಾರೆ.


9. ಪಿತೃಗಳೇ ನಿಮಗೆ ಬೇಕಾದ ಪಶು ಸಂಪತ್ತು, ಅಂದರೆ ಪ್ರಾಣಿ, ಪಕ್ಷಿ ಇತ್ಯಾದಿ ಸಜೀವ ಮತ್ತು ಪರಿಕರಾದಿ ನಿರ್ಜೀವ ಉಪಾಂಶುಗಳ ಒದಗಣೆ ಮಾಡುವವರು.


10. ಪಿತೃಪ್ರಾಣವೇ ನಿಮಗೆ ಎಲ್ಲಾ ರೀತಿಯ ಸೌಖ್ಯ ಪ್ರದಾಯಕ.


11. ಪಿತೃಗಣವು ಸದಾ ನಿಮ್ಮನ್ನು ಧನಾತ್ಮಕವಾಗಿ, ಧನವಂತರಾಗಿ ರೂಪಿಸುತ್ತಿರುತ್ತದೆ.


12. ಪಿತೃಕೃಪೆಯಿಂದಲೇ ನಿಮ್ಮಲ್ಲಿ ಧಾನ್ಯಸೃಷ್ಟಿ, ಧಾನ್ಯಬೆಳೆ, ಧಾನ್ಯಸಂಗ್ರಹ, ಧಾನ್ಯಸಂರಕ್ಷಣೆ ಸಾಧ್ಯವಾಗುವುದು.


ಶ್ರದ್ಧಾಪೂರ್ವಕ ಶ್ರಾದ್ಧವನ್ನು ಮಾಡುವವರ ಕುಟುಂಬದಲ್ಲಿ ಯಾವುದೇ ಕ್ಲೇಶಗಳು ಉಂಟಾಗುವುದಿಲ್ಲ. ಶ್ರಾದ್ಧಕರ್ತೃವು ಇಡೀ ಜಗತ್ತನ್ನು ತೃಪ್ತಿಪಡಿಸುತ್ತಾನೆ.


***************************************************************

#ಪಿತೃವಿಜ್ಞಾನ_ಪರಿಚಯ ಎಂಬ ನಮ್ಮ ಪುಸ್ತಕದಲ್ಲಿ ಇಂತಹಾ ಕೆಲ ವಿಶೇಷ ವಿಚಾರಗಳನ್ನು ಪರಿಚಯಿಸಲಾಗಿದೆ. ಮುಂದಿನ ಕೊಂಡಿಯಲ್ಲಿ ಪಿತೃವಿಜ್ಞಾನ ಪರಿಚಯ ಪುಸ್ತಕದ ಮಾಹಿತಿಯೂ ಇದೆ - https://bit.ly/3jcWW1G

***************************************************************

✍️ ಹೇಮಂತ್ ಕುಮಾರ್ ಜಿ

www.vedavidhya.com

www.veda-vijnana.blogspot.com

429 views0 comments

Recent Posts

See All

Comments

Rated 0 out of 5 stars.
No ratings yet

Commenting has been turned off.
bottom of page