top of page

ಸಾಯನ vs ನಿರಯನ ಖಗೋಳ ಗಣಿತ

Updated: Mar 26, 2023






ಅಯನ = ೧ ವರ್ಷದಲ್ಲಿನ ೬ ತಿಂಗಳುಗಳ ಅವಧಿ. ಒಟ್ಟು ೨ ಅಯನಗಳಿವೆ:- ಉತ್ತರಾಯಣ ಮತ್ತು ದಕ್ಷಿಣಾಯನ.


ಸಾಯನ = ಅಯನ ಗಣನೆ ಅಥವಾ ಅನಯಾಂಶ ಸೇರಿಕೊಂಡಿರುವಂತಹದ್ದು (ವಿದೇಶಿಯರದ್ದು ಎಂದು ವೃಥಾರೋಪ ಆಗಿರುವಂತಹದ್ದು. ಆದರೆ ಮೂಲತಃ ಸ್ಮಾರ್ತರು ಬಳಸಿಕೊಂಡು ಬರುತ್ತಿದ್ದ ಪದ್ಧತಿ. ಸಾಯನ/ಸಾಯಣ ಸ್ಮಾರ್ತರಲ್ಲಿದ್ದ ಸಾಧಕರು),


ನಿರಯನ = ಅಯನ ಗಣನೆ ಅಥವಾ ಅನಯಾಂಶ ಕಳೆದಿರುವಂತಹದ್ದು. (ಈಗಿನ ಹಿಂದು ಪಂಚಾಂಗಕರ್ತರು ಬಳಸುವ ಸ್ಥಿರ ರಾಶಿಚಕ್ರದ್ದು. ಇದು ಹೆಚ್ಚಾಗಿ ವೈಷ್ಣವ ಮತ್ತು ಮಾಧ್ವ ಪಂಥದಲ್ಲಿ ಬಳಕೆಗೆ ಬಂದಿದೆ)


ಪುರಾತನ ಭಾರತೀಯ ಖಗೋಳ ವಿಜ್ಞಾನ ಮತ್ತು ಜ್ಯೋತಿಷ್ಯಗಳು ಸೌಮ್ಯೋಕ್ತಿಯಂತೆ ನಾಕ್ಷತ್ರಮಾನದಲ್ಲಿರುವುದನ್ನು ನಿರಯನ ಪದ್ಧತಿಯಲ್ಲಿದ್ದವು ಎಂಬುದಾಗಿ ಹೇಳುವುದು ಒಂದು ತಪ್ಪುಗ್ರಹಿಕೆ. ಮತ್ತೊಂದು ತಪ್ಪು ಗ್ರಹಿಕೆ ಎಂದರೆ ಪಾಶ್ಚಾತ್ಯ ಖಗೋಳ ವಿಜ್ಞಾನ ಮತ್ತು ಅವರ ಜ್ಯೋತಿಷ್ಯವು ಸಾಯನ ಪದ್ಧತಿಯಲ್ಲಿದೆ ಎಂಬುದು.


ಮೊದಲಿಗೆ ಇವೆರಡು ಪದ್ಧತಿಗಳು ಏನೆಂದು ನೋಡೋಣ.


ಸಾಯನ ಪದ್ಧತಿಯಲ್ಲಿ, ಮೇಷ ರಾಶಿಯು ಯಾವಾಗಲೂ ವಸಂತ ಸಂಪಾತದಿಂದ ಪ್ರಾರಂಭವಾಗುತ್ತದೆ. ಅಂದರೆ ದಿನ ಮತ್ತು ರಾತ್ರಿಗಳು ಸಮನಾಗಿರುವಾಗ ಆರಂಭವಾಗುತ್ತದೆ. ಕರ್ಕಾಟಕ ಸಂಕ್ರಾಂತಿಯು ದಕ್ಷಿಣಾಯನದ ದಿನದಲ್ಲಾಗುತ್ತದೆ. ಅಂದರೆ ವರ್ಷದ ಅತೀ ಉದ್ದ ದಿನ. ತುಲಾ ಸಂಕ್ರಾಂತಿಯು ಶರತ್ ಸಂಪಾತದಲ್ಲಾಗುತ್ತದೆ. ಅಂದರೆ ದಿನಮಾನ = ರಾತ್ರಿಮಾನ ಆಗಿದ್ದಾಗ. ಮಕರ ಸಂಕ್ರಾಂತಿಯು ವರ್ಷದ ಅತ್ಯಂತ ಕಡಿಮೆ ದಿನಮಾನವುಳ್ಳದ್ದಾದ ಉತ್ತರಾಯಣದ ದಿನದಂದಾಗುತ್ತದೆ.

ಇಲ್ಲಿ ಹೇಳಿರುವ ರಾಶಿಗಳಿಗೂ ನಕ್ಷತ್ರ ವಿಭಾಗಗಳಿಗೂ ಸಂಬಂಧವಿಲ್ಲ. ಅದೇ ರೀತಿ ಮೇಷಾದಿ ರಾಶಿಗಳಿಗೂ ಋತು, ಅಯನ, ಸಂಪಾತಾದಿಗಳಿಗೂ ಸಂಬಂಧವಿಲ್ಲ. ಆದರೆ ಕೇವಲ ಅಶ್ವಿನ್ಯಾದಿ ೨೭ ನಕ್ಷತ್ರ ವಿಭಾಗಗಳಿಗೆ ಸಂಬಂಧಿಸಿದ್ದು. ಹಾಗಾಗಿ ಅವು ನಾಕ್ಷತ್ರಿಕ ಅಥವಾ ನಕ್ಷತ್ರಮಾನಕ್ಕೆ ಸಂಬಂಧಪಟ್ಟವು. ಈ ರಾಶಿ ಮತ್ತು/ಅಥವಾ ನಕ್ಷತ್ರಗಳು ನಕ್ಷತ್ರಮಾನದಂತೆ ಯಾವುದಾದರೂ ನಕ್ಷತ್ರದಿಂದ ಆರಂಭವಾಗಬೇಕಿದ್ದರೂ ಅದು ಎಂದಿಗೂ ಯಾವುದೇ ನಿರ್ಧಿಷ್ಟ ಸ್ಥಿರ ಬಿಂದುವಿನಿಂದ ಆರಂಭವಾಗುವುದಿಲ್ಲ. ಪ್ರತಿವರ್ಷವೂ ಅಂದಾಜು ಮಾಡುತ್ತಾ ವರ್ಧಿತ ಅಯನಾಂಶವನ್ನು ಜೆಪಿಎಲ್/ನಾಸಾದಿಂದ ಗುರುತಿಸಿದ ಗ್ರಹಗಳ ನಿರ್ಧಿಷ್ಟ ಸಾಯನ ರೇಖಾಂಶದಿಂದ ಕಳೆಯಬೇಕಾಗುತ್ತದೆ. ಆಗ ನಾಕ್ಷತ್ರಿಕ ರೇಖಾಂಶಗಳು ದೊರೆಯುತ್ತವೆ.

ಜ್ಯೋತಿಷದ ಪರಿಭಾಷೆಯಲ್ಲಿ ಹೇಳುವುದಾದರೆ ನಕ್ಷತ್ರಗಳು, ರಾಶಿಗಳು ಹಾಗೂ ವಿವಿಧ ರಾಶಿ ಚಕ್ರಗಳು ಬೇರೆ ಬೇರೆ ಆರಂಭ ಬಿಂದುಗಳನ್ನು ಹೊಂದಿರಬೇಕು. ಈಗಿನ ಕಾಲಘಟ್ಟದಲ್ಲಿ ಲಹಿರಿ ರಾಶಿಚಕ್ರವು ವಸಂತ ಸಂಪಾತದಿಂದ ೨೪ ಡಿಗ್ರಿಗಳು ದೂರದಲ್ಲಿ ಆರಂಭ ಬಿಂದುವನ್ನು ಹೊಂದಿದೆ. ಆದರೆ ರಾಮನ್ ರಾಶಿಚಕ್ರವು ಬೇರೆಯೇ ಆರಂಭ ಬಿಂದುವನ್ನು ಹೊಂದಿದ್ದು, ಗ್ರಹಲಾಘವ ರಾಶಿಚಕ್ರವು ಮಗದೊಂದು ಆರಂಭ ಬಿಂದುವನ್ನು ಹೊಂದಿದೆ. ಸೂರ್ಯ ಸಿದ್ಧಾಂತ ರಾಶಿಚಕ್ರವು ಬಹಳ ವಿಭಿನ್ನ ಪ್ರಾರಂಭ ಬಿಂದುವನ್ನು ಹೊಂದಿರುತ್ತದೆ, ಇತ್ಯಾದಿ ವಿಭಿನ್ನತೆಗಳು ಕಂಡುಬರುತ್ತದೆ. ಮತ್ತೆ ಈ ಆರಂಭ ಬಿಂದುಗಳು ಪ್ರತಿ ವರ್ಷವೂ ೫೩ ಆರ್ಕ್ ಸೆಕೆಂಡ್ಗಳಷ್ಟು ಬದಲಾಗುತ್ತಾ ಹೋಗುತ್ತವೆ.


ಈಗಿನ ವಿದ್ವಾಂಸರ ವಾದಗಳ ಪ್ರಕಾರ ಇವೆಲ್ಲವೂ ನಿರಯನ ಆಗಿರಬೇಕಿತ್ತು. ಆದರೆ ಈ ಎಲ್ಲಾ ರಾಶಿಚಕ್ರಗಳು ನಕ್ಷತ್ರಮಾನದಲ್ಲಿವೆ!


೧೬೦೦ ವರ್ಷಗಳ ಹಿಂದೆ ಹೋರಾಶಾಸ್ತ್ರದ ಪ್ರಕಾರ ಸಾಯನ ಕುಂಡಲಿಗೆ ಹೇಳಿದ ಗ್ರಹ, ನಕ್ಷತ್ರ, ರಾಶಿ ಫಲಗಳನ್ನು ಈಗ ೨೩.೫ ಡಿಗ್ರಿ ಯಷ್ಟು (೧೯೯೮) ವ್ಯತ್ಯಾಸವಿರುವ ನಿರಯನ ಕುಂಡಲಿಗೆ ಹೇಳಲಾಗುತ್ತಿದೆ. ಜ್ಯೋತಿ‍ಷ್ಯ ವಿದ್ವಾಂಸ ಎನ್.ಸಿ. ಲಾಹಿರಿ ಅವರ ಪ್ರಕಾರ ೨೦೦೦ ನೇ ಇಸವಿಗೆ ಅಯನಾಂಶ ೨೩.೮೫ ಡಿಗ್ರಿ. ಅಂದಾಜು ಕ್ರಿ. ಶ. ೨೯೩ರ ಸ್ಥಿರಾಂಕವನ್ನು ನಿರಯನದವರು ಹಿಡಿಯುತ್ತಾರೆ. ಆರ್ಯಭಟೀಯವು ಕ್ರಿ.ಶ.೪೯೯ನ್ನು '೦'ಆರಂಭವಾಗಿ ಹಿಡಿಯುತ್ತಾರೆ. ಸಾಂಪ್ರದಾಯಿಕ ಅಯನಾಂಶ ೨೨.೬೪ ಡಿಗ್ರಿ. ಆಧುನಿಕ ವಿಜ್ಞಾನವು +೨೪ ಡಿಗ್ರಿಯ ವ್ಯತ್ಯಾಸ ಹೇಳುತ್ತದೆ. ಆದರೆ ವೈಜ್ಞಾನಿಕವಾಗಿ ಅಥವಾ ಭಾಸ್ಕರಾಚಾರ್ಯರ ಅಭಿಪ್ರಾಯದಂತೆ ಸಾಯನ ಕುಂಡಲಿ-ಜಾತಕಗಳು ಸರಿಯಾದ ಕ್ರಮ. ಕೆಲ ಜೌತಿಷ್ಕರು ಮತ್ತು ಪಾಶ್ಚಿಮಾತ್ಯರು ಸಾಯನ ಕುಂಡಲಿ - ಜಾತಕಗಳ ಮೇಲೆ ಭವಿಷ್ಯ ಹೇಳುತ್ತಾರೆ. ಉಳಿದವರು ನಿರಯನ ಕುಂಡಲಿ ಉಪಯೋಗಿಸುತ್ತಾರೆ. ಆಗ ಒಬ್ಬನೇ ವ್ಯಕ್ತಿಗೆ ಎರಡು ಬಗೆಯ ಜಾತಕ-ಕುಂಡಲಿ ಉಂಟಾಗುತ್ತದೆ. ಹೋರಾಶಾಸ್ತ್ರದ ಪ್ರಕಾರ ಎರಡು ಬಗೆಯ ಕುಂಡಲಿಗೆ ಒಂದೇ ಫಲ ಹೇಳುವುದು ಸಾಧ್ಯವಿಲ್ಲ. ಆದರೆ ಈಗ ಆ ಎರಡೂ ಕುಂಡಲಿಗೆ ಬೇರೆ ಬೇರೆ ಫಲ ಹೇಳಿದಲ್ಲಿ ಜಾತಕನು ಯಾವುದನ್ನು ನಂಬಬೇಕು. ಅವನು ತನಗೆ ಯಾವ ಜ್ಯೋತಿಷ್ಯದಲ್ಲಿ ನಂಬಿಕೆ ಇದೆಯೋ ಅದನ್ನು ನಂಬುತ್ತಾನೆ. ಆದರೆ ಅದರ ಸತ್ಯತೆ ಪ್ರಶ್ನಾರ್ಹವಾಗುತ್ತದೆ. ತರ್ಕಕ್ಕೆ ಹೊಂದದ ಮೂಢನಂಬಿಕೆ ಆಗುತ್ತದೆ. ಇಷ್ಟೇ ಅಲ್ಲದೆ ನಿರಯನದಲ್ಲೇ ಹತ್ತು ಹಲವು ಅಯಾನಾಂಶಗಳಿವೆ. ಒಬ್ಬೊಬ್ಬರು ಒಂದೊಂದು ಆಯಾನಾಂಶ ಬಳಸುತ್ತಾರೆ.


ವರಾಹಮಿಹಿರನು ಸಾಯನನೇ ಅಥವಾ ನಿರಯನನೇ?


ವರಾಹಮಿಹಿರ ಅಂದಾಜು ಶಕ. ೪೨೮ (ಕ್ರಿ.ಶ. ೫೦೫). ಆತನ ಪಂಚಸಿದ್ಧಾಂತಿಕದಲ್ಲಿ ಪ್ರಸಿದ್ಧ ಸೂರ್ಯ ಸಿದ್ಧಾಂತವೂ ಇದೆ. ಮಿಹಿರನು ಸತ್ಯಾಚಾರ್ಯ, ಮಣಿಟ್ಟ(ತ್ತ), ಮಯ, ಯವನ, ಪರಾಶಾರಾದಿಗಳ ಹೆಸರನ್ನು ಹೇಳಿದ್ದಾನೆ ಎಂದು ಅವನ ಹೆಸರಲ್ಲಿ ಪ್ರಕಟವಾಗಿರುವ ಈಗಿನ ಗ್ರಂಥಗಳು ಹೇಳುತ್ತವೆ. ಪರಾಶರರಂತೂ ಶಕ್ತಿ ಋಷಿಯ ಪುತ್ರನೂ ವೇದವ್ಯಾಸರ ಪಿತನೂ ಎಂದಿದೆ. ಆದರೆ ಪರಾಶರರ ಗ್ರಂಥವು ೧೦ನೇ ಶತಮಾನದ ಭಟ್ಟೋತ್ಪಲನ ಕಾಲದಲ್ಲಿ ಲಭ್ಯವಿರಲಿಲ್ಲ. ಆದರೆ ಇಂದು ಒಂದು ಡಜ಼ನ್ನಿಗೂ ಹೆಚ್ಚು ಪಾಠಾಂತರವುಳ್ಳ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಒಂದಕ್ಕೊಂದು ತದ್ವಿರುದ್ದವಾಗಿವೆ. ಎಷ್ಟರ ಮಟ್ಟಿಗೆ ಎಂದರೆ ನಿಜವಾಗಿಯೂ ಪರಾಶರರೇ ಅದನ್ನು ಬರೆದರಾ ಎಂದು ಹುಬ್ಬೇರಿಸುವಷ್ಟು ಗೊಂದಲಗಳು! ಹಾಗಾಗಿ ವರಾಹಮಿಹಿರನನ್ನೇ ಆತುಕೊಳ್ಳಬೇಕಾಗುತ್ತದೆ.


ವರಾಹಮಿಹಿರನು ಯಾವ ರೀತಿಯ ರಾಶಿಗಳನ್ನು ಬಳಸಿದ್ದಾನೆ?


ಪಂಚಸಿದ್ಧಾಂತಿಕದ ೩/೨೩ರಲ್ಲಿ ಹೇಳುತ್ತಾನೆ - "ಮೇಷ ತುಲಾದೌ ವಿಷುವಂ ..." ಮೇಷಾರಂಭಬಿಂದು ವಸಂತ ವಿಷುವಕ್ಕೆ ಮತ್ತು ತುಲಾರಂಭಬಿಂದು ಜಲವಿಷುವಕ್ಕೆ ಬೆಸೆದುಕೊಂಡಿವೆ. ಆಗ ದಿನಮಾನ = ರಾತ್ರಿಮಾನ. ಅದೇ ಅಧ್ಯಾಯದ ೨೫ನೇ ಶ್ಲೋಕದಲ್ಲಿ -


ಉದಗಯನಂ ಮಕರಾದಾವೃತವಃ ಶಿಶಿರಾದಯಶ್ಚ ಸೂರ್ಯವಶಾತ್ | ದ್ವಿಭವನಕಾಲಸಮಾನಮ್ ದಕ್ಷಿನಾಯಣಂಚ ಕರ್ಕಟಾತ್ ||


"ಸೂರ್ಯನ ಉತ್ತರ ತಿರುವು (ಉತ್ತರಾಯಣ) ಎಂದೆಂದರೆ ಮಕರದ ಶೂನ್ಯ ಬಿಂದು ತಲುಪಿದಾಗ. ಸೂರ್ಯನ ದಕ್ಷಿಣ ತಿರುವು (ದಕ್ಷಿಣಾಯನ) ಎಂದೆಂದರೆ ಕರ್ಕಾಟಕದ ಶೂನ್ಯ ಬಿಂದು ತಲುಪಿದಾಗ. ಶಿಶಿರಾದಿ ಋತುಗಳು ಉತ್ತರಾಯಣದೊಂದಿಗೆ ಆರಂಭವಾಗುತ್ತವೆ ಹಾಗೂ ಪ್ರತಿ ಋತುವು ಎರಡು ಸೌರ ಮಾಸಗಳ ಕಾಲ ಇರುತ್ತದೆ".


ಗೊಂದಲ ಯಾವಾಗ ಆರಂಭವಾಯಿತೆಂದರೆ ಜನರು ಮೇಷ ಮತ್ತು ವೃಷಭ ಮಾಸಗಳನ್ನು ವಸಂತ ಋತುವಿಗೆ ಬೆಸಿದಾಗ. ಆದರೆ ಪ್ರಾಯೋಗಿಕವಾಗಿ ಕುಂಭ-ಮೀನಗಳು ಈಗ ಬೇಸಿಗೆಯ ಮಾಸಗಳು. ಈ ಗೊಂದಲದಿಂದ ಮಧು, ಮಾಧವಾದಿಗಳಿಗೆ ಚೈತ್ರ, ವೈಶಾಖಾದಿಗಳು ಸಮಾನವೆನ್ನಲ್ಪಟ್ಟಿತು.


ವರಾಹಮಿಹಿರನು ಸೂರ್ಯಸಿದ್ಧಾಂತದ ಮಾನ-ಅಧ್ಯಾಯದಲ್ಲಿ ಹೇಳಿದ್ದನ್ನೇ ಪುನರುಚ್ಚರಿಸಿದ್ದಾನೆ -


ಭಾನೋರ್ಮಕರ ಸಂಕ್ರಾಂನ್ತೇಃ ಷಣ್ಮಾಸಾಃ ಉತ್ತರಾಯಣಮ್ | ಕರ್ಕಾದೇಸ್ತು ತಥೈವ ಸ್ಯಾತ್ ಷಣ್ಮಾಸಾ ದಕ್ಷಿಣಾಯನಂ || ದ್ವಿರಾಶಿನಾಥಾ ಋತವಸ್ತತೋಽಪಿ ಶಿಶಿರಾದಯಃ | ಮೇಷಾದಯೋ ದ್ವಾದಶೈತೇ ಮಾಸಾಸ್ತೈರೇವ ವತ್ಸರಃ ||


ವಾರಣಾಸಿಯ ವಿದ್ವಾಂಸರಾದ ಪಂ. ಸುಧಾಕರ ದ್ವಿವೇದಿಯವರು ವ್ಯಾಖ್ಯಾನದಲ್ಲಿ ಸೂರ್ಯನ ಮಕರಸಂಕ್ರಾಂತಿಯಿಂದ ೬ ತಿಂಗಳುಗಳು ಉತ್ತರಾಯಣ ಎಂದಿದ್ದಾರೆ. ಹಾಗೆಯೇ ಕರ್ಕಸಂಕ್ರಾಂತಿಯಿಂದ ೬ ತಿಂಗಳುಗಳು ದಕ್ಷಿಣಾಯನ. ಮಕರಸಂಕ್ರಾಂತಿಯಂದು ದ್ವಿರಾಶಿನಾಥನಿಂದ ಶಿಶಿರಾದಿ ಋತುಗಳು ಉಂಟಾಗುತ್ತವೆ. ಎರಡೆರಡು ರಾಶಿಗಳಿಗೊಂದೊಂದು ಋತುನಾಥನಿರುತ್ತಾನೆ. ಮಕರ-ಕುಂಭಗಳಿಗೆ ಶಿಶಿರ. ಮೀನ-ಮೇಷಗಳಿಗೆ ವಸಂತನು ಋತುನಾಥನು. ಇದು ಶ್ರೀಪತಿಯಿಂದ ಸಿದ್ಧಾಂತಶೇಖರದಲ್ಲಿಯೂ ಬರೆಯಲ್ಪಟ್ಟಿದೆ. ಸಣ್ಣದಿನಮಾನವುಳ್ಳ ಉತ್ತರಾಯಣವನ್ನು ಮಕರ ಸಂಕ್ರಾಂತಿಯೊಂದಿಗೆ ಹೋಲಿಸಿದ್ದಾರೆ. ಸೂರ್ಯ ಚಲನೆಯಲಿ ಮಕರ-ಕುಂಭಗಳು ಶಿಶಿರ ಋತು ಹಾಗೂ ಮೀನ-ಮೇಷಗಳು ವಸಂತ ಋತು ಇತ್ಯಾದಿ ಸ್ಪಷ್ಟಪಡಿಸಿದ್ದಾರೆ.


ಪ್ರತಿಷ್ಠಿತ ಖಗೋಳಶಾಸ್ತ್ರಜ್ಞನೂ ಜ್ಯೋತಿಷ್ಯ ಶಾಸ್ತ್ರಜ್ಞನೂ ಆಗಿದ್ದ ವರಾಹಮಿಹಿರನು ಮತ್ತು ಅತೀ ಪುರಾತನ ರಾಶಿ ಆಧಾರಿತ ಖಗೋಳ ಕೃತಿಯಾದ ಸೂರ್ಯಸಿದ್ಧಾಂತವು "ಸಾಯನ"ರಾಶಿಚಕ್ರವನ್ನೇ ಖಗೋಳ ಮತ್ತು ಜ್ಯೋತಿಷ್ಯದ ಉದ್ದೇಶಗಳಿಗೆ ಹೇಳಿವೆ.


(ಸಂಗ್ರಹ) - ಹೇಮಂತ್ ಕುಮಾರ್ ಜಿ

103 views0 comments

Comments

Rated 0 out of 5 stars.
No ratings yet

Commenting has been turned off.
bottom of page