top of page

ಕುಲದೇವತೆಯನ್ನು ತಿಳಿದುಕೊಳ್ಳುವುದು ಹೇಗೆ?

Updated: Sep 10, 2022


ಆತ್ಮನಃ ಕುಲದೇವತಾ - ಆತ್ಮಕ್ಕೆ ಮತ್ತು ಅದು ಆಶ್ರಯಿಸುವ ಕುಲಕ್ಕೆ ಸಂಬಂಧಿಸಿದ್ದು ಕುಲದೇವತೆ.

ನಿಮ್ಮ ಕುಲದೇವತೆ ಯಾರು ಎಂದು ತಿಳಿಯಬಹುದು, ಇದು ಸರಳ ಆದರೆ ಪರಿಣಾಮಕಾರಿ ಪ್ರಯೋಗವಾಗಿದೆ.


ಇದು ಹನ್ನೊಂದು ಮಂಗಳವಾರದ ಪ್ರಯೋಗ, ಯಾವುದೇ ಶುಕ್ಲ ಪಕ್ಷದ ಮಂಗಳವಾರದಿಂದ ಈ ಪ್ರಯೋಗವನ್ನು ಪ್ರಾರಂಭಿಸಿ. ಮುಂಜಾನೆ ಪೂಜೆಯ ವೇಳೆಗೆ ಒಂದು ಸಣ್ಣ ಪೂರ್ಣ ಅಡಿಕೆ ಹಣ್ಣನ್ನು ತೆಗೆದುಕೊಂಡು ತೊಳೆದು ಶುಭ್ರ ಮಾಡಿ ತಟ್ಟೆಯಲ್ಲಿ ಪ್ರತಿಷ್ಠಾಪಿಸಿ. ಈಗ ಸರಳವಾಗಿ ಪ್ರಾರ್ಥಿಸಿ,

"ಓ ನಮ್ಮ ಗೋತ್ರ ಕುಲದ ಕುಲದೇವತೆಯೇ ನೀವು ಯಾರು, ನೀವು ಎಲ್ಲಿದ್ದೀರಿ? ನಿಮ್ಮ ಜ್ಞಾನ ನನಗಿಲ್ಲ. ಅದರ ಬಗ್ಗೆ ತಿಳಿದುಕೊಳ್ಳಲಿಕ್ಕೆ ನಾನು ನಿಮ್ಮನ್ನು ಈ ಅಡಿಕೆಯಲ್ಲಿ ಬರಬೇಕೆಂದು ಕರೆಯುತ್ತಿದ್ದೇನೆ"

ಎಂದು ಮೂರು ಬಾರಿ ಹೇಳಿ, ನಂತರ ಅಡಿಕೆಹಣ್ಣನ್ನು ಪಂಚೋಪಚಾರದಲ್ಲಿ ಪೂಜಿಸಿ ಮನೆಯ ದೇವರ ಗೂಡಿನಲ್ಲಿಡಿ.


ನಂತರ ರಾತ್ರಿ ಮಲಗುವ ಮುನ್ನ ಮತ್ತೊಮ್ಮೆ ಅಡಿಕೆಹಣ್ಣನ್ನು ಪೂಜಿಸಿ, "ಓ ನಮ್ಮ ಕುಲದ ಕುಲದೇವತೆ, ನಾನು ನಿನ್ನನ್ನು ತಿಳಿದುಕೊಳ್ಳಲು ಬಯಸುತ್ತೇನೆ, ದಯವಿಟ್ಟು ನನಗೆ ಕನಸಿನಲ್ಲಿ ಮಾರ್ಗದರ್ಶನ ಮಾಡಿ"ಎಂದು ಪ್ರಾರ್ಥಿಸಿ. ನಿಮ್ಮ ತಲೆದಿಂಬಿನ ಕೆಳಗೆ ಆ ಅಡಿಕೆಹಣ್ಣನ್ನು ಇಟ್ಟು ಮಲಗಿ. ಮತ್ತೆ ದೇವರ ಗೂಡಿನಲ್ಲಿ ಆ ಅಡಿಕೆ ಇಟ್ಟು ಪಂಚೋಪಚಾರ ಪೂಜೆಯನ್ನು ಮಾಡಿ ಪ್ರಾರ್ಥನೆ ಸಲ್ಲಿಸಿ.



ಹನ್ನೊಂದು ಮಂಗಳವಾರದಂದು ಈ ಕೆಲಸವನ್ನು ಮಾಡಿ. ನೀವು ಈ ಕಾರ್ಯವನ್ನು ಪ್ರಾರಂಭಿಸಿದ ಮಂಗಳವಾರವನ್ನು ಸೇರಿಸಿ, ಹನ್ನೊಂದು ಮಂಗಳವಾರ. ನೀವು ಕಠಿಣ ಉಪವಾಸವನ್ನು ಮಾಡಬೇಕು, ಇದು ಅದರ ನಿಯಮವಾಗಿದೆ. ಊಹಿಸಲಾಗದ ರೀತಿಯಲ್ಲಿ ಕನಸಿನಲ್ಲಿ ನಿಮ್ಮ ಕುಲದೇವತೆಯ ಸಂಪೂರ್ಣ ಮಾರ್ಗದರ್ಶನವನ್ನು ನೀವು ಪಡೆಯುತ್ತೀರಿ.


ಮಂಗಳವಾರದಿಂದ ಈ ಪ್ರಯೋಗವನ್ನು ಪ್ರಾರಂಭಿಸಿ ಮತ್ತು 11 ಮಂಗಳವಾರದವರೆಗೆ ಮುಂದುವರಿಸಿ. ಮಂಗಳವಾರ ಬೆಳಿಗ್ಗೆ ಸ್ನಾನ ಇತ್ಯಾದಿಗಳ ನಂತರ, ತಾನು ಮನ ಶುದ್ಧರಾಗಿ, ನಿಮ್ಮ ದೇವತೆಯನ್ನು ಪೂಜಿಸಿ. ಈ ಅವಧಿಯಲ್ಲಿ ಶುದ್ಧತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ಹಾಸಿಗೆ ಮತ್ತು ಮಲಗುವ ಸ್ಥಳವನ್ನು ಸಹ ಶುದ್ಧವಾಗಿಡಿ. ಕೆಲವರು ನೆಲದ ಮೇಲೆ ಮಲಗುವುದುಂಟು. ಬ್ರಹ್ಮಚರ್ಯವನ್ನು ಅನುಸರಿಸಿ. ಮಾಂಸ ಮತ್ತು ಮದ್ಯದಿಂದ ಬಿಡಿ, ಸಂಪೂರ್ಣ ಇಂದ್ರಿಯನಿಗ್ರಹವನ್ನು ಕಾಪಾಡಿಕೊಳ್ಳಿ.


ಸಮಸ್ಯೆಗಳು ಕೊನೆಗೊಳ್ಳುತ್ತವೆ. ಈ ಪ್ರಯೋಗದ ಅವಧಿಯಲ್ಲಿ, ನಿಮ್ಮ ಕನಸಿನಲ್ಲಿ ನಿಮ್ಮ ಕುಲದೇವತೆಯ ಬಗ್ಗೆ ಮಾಹಿತಿಯನ್ನು ನೀವು ಪಡೆಯುತ್ತೀರಿ. ನೀವು ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ಜ್ಯೋತಿಷ್ಯ ಜ್ಞಾನವುಳ್ಳ ಅರ್ಹ ವ್ಯಕ್ತಿಯಿಂದ ಕನಸಿನ ವಿಶ್ಲೇಷಣೆಯನ್ನು ಮಾಡುವ ಮೂಲಕ ನೀವು ತಿಳಿದುಕೊಳ್ಳಬಹುದು. ಜೊತೆಗೆ ನಿಖರತೆ ಸಿಗದಿದ್ದಲ್ಲಿ, ಪ್ರಶ್ನಮಾರ್ಗದ ಸಹಾಯ ಪಡೆದುಕೊಳ್ಳಬಹುದು. ಹೀಗೆ ವರ್ಷಾನುಗಟ್ಟಲೆ ಮರೆತಿದ್ದ ಕುಲದೇವತೆಯ ಸಮಸ್ಯೆಗೆ ಪರಿಹಾರ ಸಿಗುತ್ತದೆ ಮತ್ತು ನಿಮ್ಮ ಕುಟುಂಬದ ಹಲವು ಸಮಸ್ಯೆಗಳು ಕೂಡ ನಿತ್ಯ ಕುಲದೇವತಾ ಭಕ್ತಿ ಮತ್ತು ಪೂಜೆಯನ್ನು ನೀಡುವ ಮೂಲಕ ಕೊನೆಗೊಳ್ಳುತ್ತವೆ.


ಪ್ರಶ್ನೆ -


1. ಗಣೇಶ್ ಭಟ್ - ಕುಲದೇವರು - ಏನು, ಏಕೆ ಮತ್ತು ಹೇಗೆ? ಭಗವಂತನು ಸರ್ವಶಕ್ತ ಸರ್ವವ್ಯಾಪಿ ಸರ್ವಾಂತರ್ಯಾಮಿ ಆಗಿರುವಾಗ ಕುಲದೇವರಲ್ಲಿ ಏನು ವಿಶೇಷತೆ? ಇದು ಕೇವಲ ಅಧ್ಯಯನಶೀಲ ಜಿಜ್ಞಾಸೆ.


ಉತ್ತರ - ಎಲ್ಲಾ ಮನುಷ್ಯರೂ ಕಣ್ಣು, ಕೈ, ಕಾಲು, ಮೂಗು ಹೊಂದಿದ್ದಾರೆ. ಅದೇ ರೀತಿ ದ್ವಿಪದಿ, ತ್ರಿಪದಿ, ಇತ್ಯಾದಿ ಸಹಸ್ರಪದಿವರೆಗೆ ಜೀವಿಗಳಲ್ಲಿಯೂ ಈ ಅಂಗಗಳಿವೆ. ಆಯಾಯ ಜೀವ ಪ್ರಭೇದ ಹೇಗಾಯಿತು? ಭಗವಂತನೇ ಎಲ್ಲವೂ ಆಗಿರುವಾಗ ಆತನು ಏಕೆ ಪ್ರಭೇದಗಳನ್ನು ರೂಪಿಸಿದ? ಪ್ರಭೇದ ಎಂದು ಗುರುತಿಸುವಂತೆ ವರ್ಗೀಕರಣ ಮಾಡಲು ಆ ಭಗವಂತ ಅವಕಾಶ ಕೊಟ್ಟದ್ದು ಏಕೆ? ಅದೇ ರೀತಿ ಮನುಷ್ಯ ಎಂಬ ಪ್ರಭೇದಕ್ಕೆ ಬಂದರೂ ಅದರಲ್ಲಿ ಮೂಲತಃ ೭ ವರ್ಗ ಹೇಳಿದೆ ವೈಧಿಕ ಭೌತಶಾಸ್ತ್ರ. ಮಾನವ ವರ್ಗದ ಮೂಲದಲ್ಲಿ ಇರುವುದು ಪ್ರಕೃತಿಯ ಮೂಲಧಾತುವಿನ ಸಂಯೋಗ ವ್ಯತ್ಯಾಸ, ದಿಗ್-ದೇಶ-ಕಾಲ ಆಧಾರದಲ್ಲಿ. ಅದನ್ನು ಸಂಯೋಜಿಸುವ ಶಕ್ತಿಯನ್ನು ಸಪ್ತ ಋಷಿ ಪ್ರಾಣಗಳು ಎಂದಿತು. ಕೊಡುವ ಶಕ್ತಿ ಉಳ್ಳದ್ದು ದೇವ. ದೇಹವೆಂಬ ಸಂಕೀರ್ಣ ಪ್ರಾಕೃತಿಕ ಸಂಘಟನೆಯಲ್ಲಿ ದೇವ ಪ್ರಾಣವು ಬಹು ಮುಖ್ಯ ಪಾತ್ರ ವಹಿಸುತ್ತದೆ. ಹಾಗೆಯೇ ಪಿತೃ ಪ್ರಾಣಗಳು ಕೂಡ ತಮ್ಮ ಕೆಲಸ ಮಾಡುತ್ತವೆ. ಇಲ್ಲಿ ಮೂಲಚೈತನ್ಯದ ಕಾರಣದ ಉದ್ದೇಶಕ್ಕೆ ಕರ್ಮ, ಕರ್ತೃ, ಭೋಕ್ತೃ ಸಂಯೋಜನೆ ಮಾಡುತ್ತದೆ. ಆ ಭಗವಂತನ ಸಂಕಲ್ಪವೇ ತಾನು ಅನೇಕತೆಯಲ್ಲಿ ಏಕನಾಗಿರಬೇಕು ಎಂದು ಇರಬೇಕು.


ಕುಲ ಎಂಬುದು ಒಂದು ಸಂಬಂಧಿಗಳ ಸಮೂಹ. ಪ್ರಧಾನವಾಗಿ ೭ ಜೀನುಗಳ ಸಂಯೋಗ-ಭಂಗದ ಆಧಾರದಲ್ಲಿ ಕುಲ ಎಂಬ ಬಂಧ ಏರ್ಪಡುತ್ತದೆ. ಈ ಕೌಲ ಬಂಧದ ನಿರ್ವಹಣೆಗೆ ತನ್ನನ್ನು ತಾನೇ ದೇವ ವರ್ಗವಾಗಿ ಹಬ್ಬಿಸಿಕೊಂದು ತಾನೇ ತಾನಾಗಿರುವ ದೇವಪ್ರಾಣಕ್ಕೂ ತಾನಾಗಿಯೇ ಕರ್ಮ ನಿರ್ದೇಶನ ಮಾಡಿಕೊಂಡಿದೆ. ಆತ್ಮವನ್ನು ಈ ಸಂಕೀರ್ಣ ಪ್ರಾಕೃತಿಕ ಕಾಯದಲ್ಲಿ ವೈಜ್ಞಾನಿಕವಾಗಿ ಸಂಯೋಜಿಸುವ ಜವಾಬ್ದಾರಿ ಹೊತ್ತ ದೇವಪ್ರಾಣವು ಆಯಾಯ ಕೌಲಬಂಧಕ್ಕೆ ಪೂರಕವಾಗಿಯೇ ಸಂಯೋಜಿಸುತ್ತದೆ. ಈ ಕೆಲಸದಲ್ಲಿ ಗೌರ್ಯಾದಿ ೧೫ ಮಾತೃಕಾ ದೇವೀ ಪ್ರಾಣಗಳು ಪ್ರಾಕೃತಿಕ ಸಂಘಟನೆಯಲ್ಲಿ ವ್ಯವಹಾರ ಮಾಡುತ್ತವೆ. ಕೊನೆಯದಾದ ಕುಲದೇವತೆಯು ಪ್ರಕೃತಿಯಲ್ಲಿ ಅಂದರೆ ದೇಹದಲ್ಲಿ ಆತ್ಮ ಸಂಯೋಜನೆ ಮಾಡುತ್ತದೆ. ಆಯಾಯ ದೇಹವು ೭ ಜೀನುಗಳ ಆಯಾಯ ಕೌಲಬಂಧದ ಆಧಾರದಲ್ಲಿ ಸಂಯೋಜಿಸಿ ನಿರಂತರತೆಯನ್ನು ಕಾಯ್ದುಕೊಂಡು ಬರುತ್ತದೆ. ಅದನ್ನೇ ಆತ್ಮನಃ ಕುಲದೇವತಾ ಎಂದಿದ್ದು. ವಂಶವಾಹಿಯ ಸಾಂಘಿಕ ಸಮೂಹಗಳ ವರ್ಧನೆಗೂ ಕುಲದೇವತಾ ಎಂಬ ದೇವಪ್ರಾಣದ ವರ್ಗೀಕರಣ ಆಗುತ್ತಾ ಹೋಗುತ್ತದೆ. ಹಾಗಾಗಿ ತನ್ನ ಆತ್ಮಕ್ಕೊಂದು ವಾಂಶಿಕ ಬದ್ಧತೆ, ಆಯಸ್ಸು, ನಿರಂತರತೆ, ಕೌಟುಂಬಿಕ ಸಾಮರಸ್ಯದವರೆಗೆ ಕುಲದೇವತೆಯ ಉದ್ದೇಶದೊಂದಿಗೆ ನಡೆಸಿಕೊಂಡು ಹೋಗಲು ಬೇಕಾಗಿ ಕುಲದೇವತಾ ಉಪಾಸನೆ ಬೇಕು. ಪ್ರತಿಯೊಬ್ಬನಲ್ಲಿ ಅದೇ ಪರಮಾತ್ಮ ಇರುವುದು. ಪ್ರತಿಯೊಬ್ಬನೂ ಸ್ವಯಂಭೂ. ತನಗಾಗಿ ಉಪಾಸನೆಯಲ್ಲ. ಸಮಾಜದ ಸಾಮರಸ್ಯಕ್ಕಾಗಿ. ಸಾಂಘಿಕ ಬಲವೇ ಜೀವರು ಮುಖ್ಯ ಸಾಧನೆ. ಸಕಲ ಪ್ರಭೇದಗಳ ಸಂಘವೇ ಮೋಕ್ಷ.


ಅಂತಹಾ ಕುಲದೇವತಾ ಉಪಾಸನೆಯು ಹೇಗೆ ಎಂಬುದು ಆ ಕುಲದೇವತಾ ಸಂಪರ್ಕ ಸಾಧನೆಯ ಮಾರ್ಗವೇ ಆಗಿದೆ. ತಲೆಮಾರುಗಳಿಂದ ಆ ಉಪಾಸನೆ ಬದ್ಧವಾಗಿದ್ದಲ್ಲಿ ವಂಶೋದ್ಧಾರ, ಕುಲೋನ್ನತಿ. ವಿಕೃತಿಗೈಯ್ಯುತ್ತಾ ಕೌಲಬಂಧ ವಿಮೋಚನೆ ಮಾಡಿಕೊಂಡು ಬಂದಲ್ಲಿ ಪ್ರಾಕೃತಿಕ ನಿಯಮ ಬಾಹಿರವಾಗಿ ಅಲ್ಲೋಲ ಕಲ್ಲೋಲ ಜೀವನ. ವಂಶವಾಹಿಯ ನಿರಂತರತೆ, ಕುಲಕ್ಷಯ ಆಗದಂತೆ ಇರಲು, ಜೀವನದ ಕಷ್ಟ ಕಾರ್ಪಣ್ಯ ಎದುರಿಸಲು, ಸದ್ಗತಿ ಹೊಂದಲು, ಸಂಘ ಜೀವಿಯಾಗಿರಲು, ಸಕಲ ಪ್ರಭೇದಗಳ ಸಂಘವೆಂಬ ಮೋಕ್ಷ ಮಾರ್ಗಕ್ಕೆ ಬೇಕು ಕುಲದೇವತೆ. ಕೊಂಚ ವಿವರಣೆ ಮಾತ್ರ ನೀಡಲಾಗಿದೆ. ಬಹಳ ಅಗಾಧವಾದ ವಿಷಯವಿದು.

432 views1 comment

Recent Posts

See All
bottom of page